ರಾಷ್ಟ್ರೀಯ

ಭಯೋತ್ಪಾದನೆ ಸೇರುವ ಕಾಶ್ಮೀರಿಗಳ ಸಂಖ್ಯೆ ಹೆಚ್ಚಳ: ಮೆಹಬೂಬ

Pinterest LinkedIn Tumblr


ಶ್ರೀನಗರ: ಭಯೋತ್ಪಾದನೆಯನ್ನು ಸೇರಿಕೊಳ್ಳುತ್ತಿರುವ ಸ್ಥಳೀಯ ಕಾಶ್ಮೀರೀ ಯುವಕರ ಸಂಖ್ಯೆ ಒಂದೇ ಸಮನೆ ಹೆಚ್ಚುತ್ತಿದೆ ಎಂಬುದನ್ನು ಜಮ್ಮು ಕಾಶ್ಮೀರದ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಒಪ್ಪಿಕೊಂಡಿದ್ದಾರೆ.

ರಾಜ್ಯ ವಿಧಾನಸಭೆಯಲ್ಲಿ ಅವರು ನೀಡಿದ ಲಿಖೀತ ಉತ್ತರದಲ್ಲಿ “2017ರಲ್ಲಿ 126 ಕಾಶ್ಮೀರಿ ಯುವಕರು ಭಯೋತ್ಪಾದನೆಯನ್ನು ಸೇರಿದ್ದಾರೆ; ಇದು 2016ರಲ್ಲಿ 88 ಮತ್ತು 2015ರಲ್ಲಿ 66 ಆಗಿತ್ತು’ ಎಂದು ತಿಳಿಸಿದ್ದಾರೆ.

ಕಾಶ್ಮೀರಿ ಉಗ್ರ ಬುರ್ಹಾನ್‌ ವಾನಿ ಭದ್ರತಾ ಪಡೆಗಳೊಂದಿಗಿನ ಎನ್‌ಕೌಂಟರ್‌ನಲ್ಲಿ ಹತನಾದ ಬಳಿಕ ಯುವಕರು ಶಸ್ತ್ರಾಸ್ತ್ರಗಳನ್ನು ಕೈಗೆತ್ತಿಕೊಳ್ಳುವ ವಿಷ ವರ್ತುಲವನ್ನು ಮುರಿಯುವ ಪ್ರತಿಜ್ಞೆಯನ್ನು ಮೆಹಬೂಬ ಕೈಗೊಂಡಿದ್ದರು. ಉಗ್ರ ಸಂಘಟನೆ ಸೇರಿದ ಸ್ಥಳೀಯ ಯುವಕರು ತಮ್ಮ ಮನೆಗೆ ಮರಳುವಂತೆ ಮಾಡಲು ಯತ್ನಿಸುವುದಾಗಿ ಅವರು ಭರವಸೆ ನೀಡಿದ್ದರು.

ಕಳೆದ ಜನವರಿಯಲ್ಲಿ ರಾಜ್ಯ ವಿಧಾನಸಭೆಯಲ್ಲಿ ರಾಜ್ಯಪಾಲರು ಮಾಡಿದ ಭಾಷಣದ ಮೇಲಿನ ವಂದನಾ ನಿರ್ಣಯದಲ್ಲಿ ಮಾತನಾಡಿದ್ದ ಮೆಹಬೂಬ, ಕಾಶ್ಮೀರ ಕಣಿವೆಯಲ್ಲಿನ ಪ್ರಮುಖ ಉಗ್ರ ದಾಳಿಗಳ ಹೊಣೆ ಹೊತ್ತಿದ್ದ ಜೈಶ್‌ ಎ ಮೊಹಮ್ಮದ್‌ ಉಗ್ರ ಸಂಘಟನೆಯ ಅಫ್ಜಲ್‌ ಗುರು ದಳವು ಸರಕಾರಕ್ಕೆ ಮಾತ್ರವಲ್ಲ ನಮ್ಮೆಲ್ಲರಿಗೂ ಬಹುದೊಡ್ಡ ಸವಾಲಾಗಿದೆ ಎಂದು ಹೇಳಿದ್ದರು.

ಭಾರತೀಯ ಸೇನಾ ಪಡೆಗಳ ಮೇಲೆ ಕಲ್ಲೆಸತ ನಡೆಸಿದ ಅಪರಾಧಕ್ಕಾಗಿ ಎಫ್ಐಆರ್‌ ದಾಖಲಿಸಲ್ಪಟ್ಟಿದ್ದ ಸುಮಾರು 8ರಿಂದ 9,000 ಕಾಶ್ಮೀರಿ ಯುವಕರಿಗೆ ಕ್ಷಮೆ ನೀಡಿ ಅವರ ವಿರುದ್ಧದ ಎಫ್ಐಆರ್‌ಗಳನ್ನು ಹಿಂದೆಗೆದುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಮೆಹಬೂಬ ನೀಡಿದ ಭರವಸೆ ಕೂಡ ನಿರೀಕ್ಷಿತ ಫ‌ಲ ನೀಡಿಲ್ಲ.

-ಉದಯವಾಣಿ

Comments are closed.