ರಾಷ್ಟ್ರೀಯ

ಕೇಂದ್ರ ಸರ್ಕಾರದ ನೀತಿಗಳ ವಿರುದ್ಧ ದನಿ ಎತ್ತುವುದಕ್ಕಾಗಿ ‘ರಾಷ್ಟ್ರ ಮಂಚ್’ ಆರಂಭಿಸಿದ ಬಿಜೆಪಿ ಹಿರಿಯ ನಾಯಕ ಯಶವಂತ್ ಸಿನ್ಹಾ !

Pinterest LinkedIn Tumblr

ನವದೆಹಲಿ : ಬಿಜೆಪಿಯ ಹಿರಿಯ ನಾಯಕ ಯಶವಂತ ಸಿನ್ಹಾ ‘ರಾಷ್ಟ್ರ ಮಂಚ್’ ಎಂಬ ವಿಚಾರ ವೇದಿಕೆಯನ್ನು ಮಂಗಳವಾರ ಆರಂಭಿಸಿದ್ದಾರೆ. ಕೇಂದ್ರ ಸರ್ಕಾರದ ನೀತಿಗಳ ವಿರುದ್ಧ ದನಿ ಎತ್ತುವುದು ಈ ವೇದಿಕೆಯ ಮೂಲ ಉದ್ದೇಶ ಎಂದು ಅವರು ಹೇಳಿದ್ದಾರೆ.

ಇಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಬಿಜೆಪಿ ಸಂಸದ ಶತ್ರುಘ್ನ ಸಿನ್ಹಾ ಭಾಗವಹಿಸಿದ್ದರು. ವಿರೋಧ ಪಕ್ಷಗಳ ಹಲವು ಸಂಸದರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಟಿಎಂಸಿಯ ದಿನೇಶ್ ತ್ರಿವೇದಿ, ಕಾಂಗ್ರೆಸ್‌ನ ರೇಣುಕಾ ಚೌಧರಿ, ಎನ್‌ಸಿಪಿಯ ಮಜೀದ್ ಮೆಮನ್, ಎಎಪಿಯ ಸಂಜಯ್ ಸಿಂಗ್, ಗುಜರಾತ್‌ನ ಮಾಜಿ ಮುಖ್ಯಮಂತ್ರಿ ಸುರೇಶ್ ಮೆಹ್ತಾ ಮತ್ತು ಜೆಡಿಯು ನಾಯಕ ಪವನ್ ವರ್ಮಾ ಅವರು ಬಿಜೆಪಿಯ ಶತ್ರುಘ್ನ ಸಿನ್ಹಾ ಮುಂದಾಳತ್ವದಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು.

‘ರಾಷ್ಟ್ರ ಮಂಚ್ ಒಂದು ರಾಜಕೀಯೇತರ ವೇದಿಕೆಯಾಗಿರಲಿದೆ. ಇದು ಸಂಘಟನೆ ಅಲ್ಲ, ಬದಲಿಗೆ ಒಂದು ರಾಷ್ಟ್ರೀಯ ಚಳವಳಿ. ಯಾವುದೇ ಪಕ್ಷದ ಜತೆಗೂ ರಾಷ್ಟ್ರ ಮಂಚ್ ಗುರುತಿಸಿಕೊಳ್ಳುವುದಿಲ್ಲ. 70 ವರ್ಷಗಳ ಹಿಂದೆ ಮಹಾತ್ಮ ಗಾಂಧಿ ಅವರ ಹತ್ಯೆಯಾದಾಗ ದೇಶದಲ್ಲಿ ಯಾವ ಪರಿಸ್ಥಿತಿ ಇತ್ತೋ ಅದೇ ಪರಿಸ್ಥಿತಿ ಇಂದು ನಿರ್ಮಾಣವಾಗಿದೆ. ಅಂದೂ ಪ್ರಜಾಪ್ರಭುತ್ವ ಮತ್ತು ಅದರ ಸಂಸ್ಥೆಗಳ ಮೇಲೆ ದಾಳಿ ನಡೆದಿತ್ತು, ಇಂದು ಮತ್ತೆ ದಾಳಿ ನಡೆಯುತ್ತಿದೆ’ ಎಂದು ಯಶವಂತ ಸಿನ್ಹಾ ಹೇಳಿದ್ದಾರೆ.

‘ಈ ಬಾರಿಯ ಬಜೆಟ್ ಅಧಿವೇಶನದಲ್ಲಿ ಚರ್ಚಿಸಲು ಸಿಗುವ ಸಮಯ ನಾಲ್ಕು ದಿನ ಮಾತ್ರ. ಬಜೆಟ್ ಮೇಲಿನ ಚರ್ಚೆಗೆ ಅಷ್ಟು ಕಡಿಮೆ ಸಮಯ ನಿಗದಿ ಮಾಡುವುದು ಸರಿಯಲ್ಲ’ ಎಂದು ಅವರು ಹೇಳಿದ್ದಾರೆ.
***
‘ರೈತರನ್ನು ಭಿಕ್ಷುಕರನ್ನಾಗಿಸಿದ ಸರ್ಕಾರ’

‘ನರೇಂದ್ರ ಮೋದಿ ನೇತೃತ್ವದ ಸರ್ಕಾರ ದೇಶದ ರೈತರನ್ನು ಭಿಕ್ಷುಕರನ್ನಾಗಿಸಿದೆ. ರೈತರ ಸಮಸ್ಯೆಗಳನ್ನು ಈ ಬಾರಿಯ ಬಜೆಟ್‌ಅಧಿವೇಶನದಲ್ಲಿ ಪ್ರಸ್ತಾಪಿಸುತ್ತೇವೆ’ ಎಂದು ಯಶವಂತ್ ಸಿನ್ಹಾ ಹೇಳಿದ್ದಾರೆ.

‘ಈ ಸರ್ಕಾರ ತನಗೆ ಬೇಕಾದ ರೀತಿಯಲ್ಲಿ ಅಂಕಿ–ಅಂಶಗಳನ್ನು ಸಿದ್ಧಪಡಿಸಿಕೊಂಡು, ಜನರ ಮುಂದೆ ವರದಿ ಒಪ್ಪಿಸುತ್ತದೆ. ದೇಶದಲ್ಲಿ ಇಂದು ಮಾತುಕತೆ ಮತ್ತು ಚರ್ಚೆಗಳು ಏಕಮುಖವಾಗುತ್ತಿವೆ. ಗದ್ದಲ ಎಬ್ಬಿಸುವ ಗುಂಪುಗಳೇ ನ್ಯಾಯ ನೀಡುವ ಕೆಲಸ ಮಾಡುತ್ತಿವೆ. ಇವೆಲ್ಲವೂ ತುಂಬಾ ಅಪಾಯಕಾರಿ’ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.
**
ಬಿಜೆಪಿಯಲ್ಲಿ ಇರುವವರೆಲ್ಲರೂ ಭಯದಲ್ಲಿದ್ದಾರೆ. ನಮಗೆ ಆ ಭಯ ಇಲ್ಲ. ರಾಷ್ಟ್ರದ ಹಿತಾಸಕ್ತಿಯ ವಿಚಾರಗಳ ಪರವಾಗಿ ದನಿ ಎತ್ತುವುದಷ್ಟೇ ಮುಖ್ಯ ಉದ್ದೇಶ -ಯಶವಂತ್ ಸಿನ್ಹಾ, ಬಿಜೆಪಿ ಹಿರಿಯ ನಾಯಕ
**
ನಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಪಕ್ಷದಲ್ಲಿ ಅವಕಾಶವಿಲ್ಲ. ಹೀಗಾಗಿ ರಾಷ್ಟ್ರ ಮಂಚ್ ಸೇರುತ್ತಿದ್ದೇನೆ. ಆದರೆ ಇದು ಪಕ್ಷ ವಿರೋಧಿ ಚಟುವಟಿಕೆ ಅಲ್ಲ
-ಶತ್ರುಘ್ಮ ಸಿನ್ಹಾ, ಬಿಜೆಪಿ ಸಂಸದ

Comments are closed.