ರಾಷ್ಟ್ರೀಯ

ಫೆ. 9ರಿಂದ ಪ್ಯಾಲೆಸ್ತೈನ್​, ಯುಎಇ, ಓಮನ್​ಗೆ ಮೋದಿ ಪ್ರವಾಸ

Pinterest LinkedIn Tumblr


ನವದೆಹಲಿ: ನಾಲ್ಕು ದಿನಗಳ ಪ್ರವಾಸ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿಯವರು ಫೆಬ್ರವರಿ 9ರಿಂದ 12ರವರೆಗೆ ಪ್ಯಾಲೆಸ್ತೈನ್​, ಯುಎಇ(ಯುನೈಟೆಡ್‌ ಅರಬ್‌ ಎಮಿರೇಟ್ಸ್‌) ಮತ್ತು ಒಮನ್‌ ದೇಶಗಳಿಗೆ ಭೇಟಿ ನೀಡಿ, ಹಲವು ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ.

ಪ್ರಧಾನಿ ಮೋದಿ ಪ್ರವಾಸದ ವೇಳೆ ಹಲವು ನಾಯಕರೊಂದಿಗೆ ಮಾತುಕತೆ ನಡೆಸಲಿದ್ದಾರೆ. ಇದೇ ಮೊದಲ ಬಾರಿಗೆ ಭಾರತದ ಪ್ರಧಾನಿ ಪ್ಯಾಲೆಸ್ತೈನ್​ಗೆ ಭೇಟಿ ನೀಡಲಿದ್ದು, ಯುಎಇಗೆ ಎರಡನೇ ಬಾರಿ ಮೋದಿ ಭೇಟಿ ನೀಡುತ್ತಿದ್ದಾರೆ. ಅಲ್ಲದೆ ಒಮನ್‌ಗೆ ಮೊದಲ ಬಾರಿ ತೆರಳಲಿದ್ದಾರೆ.

ಕಳೆದ ವಾರವಷ್ಟೇ ಇಸ್ರೇಲ್‌ ಪ್ರಧಾನಿ ಭಾರತಕ್ಕೆ ಭೇಟಿ ನೀಡಿದ ಬೆನ್ನಲ್ಲೇ ಪ್ರಧಾನಿ ಮೋದಿ ಇಸ್ರೇಲ್‌ನ ಶತೃ ರಾಷ್ಟ್ರ ಪ್ಯಾಲೆಸ್ತೈನ್​ಗೆ ತೆರಳಿ ಭಾರತದ ವಿದೇಶಿ ನೀತಿಯನ್ನು ಬಲಪಡಿಸುವ ಕುರಿತು ಮಾತುಕತೆ ನಡೆಸಲಿದ್ದಾರೆ. ಅಲ್ಲದೆ ಇಸ್ರೇಲ್‌ ಮತ್ತು ಪ್ಯಾಲೆಸ್ತೈನ್​ ನಡುವಿನ ಸಮಸ್ಯೆ ಪರಿಹಾರದ ಕುರಿತು ಪ್ರಯತ್ನಿಸಲಿದ್ದಾರೆ.

ದುಬೈನಲ್ಲಿ ನಡೆಯಲಿರುವ ಆರನೇ ವಿಶ್ವ ಸರ್ಕಾರಿ ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಭಾಷಣ ಮಾಡಲಿದ್ದಾರೆ. ಅದಾದ ಬಳಿಕ ಯುಎಇ ಮತ್ತು ಒಮನ್‌ನಲ್ಲಿರುವ ಭಾರತೀಯ ಸಮುದಾಯದವರನ್ನು ಭೇಟಿ ಮಾಡಲಿದ್ದಾರೆ.

ನಂತರ ಓಮನ್‌ಗೆ ತೆರಳಿ ಅಲ್ಲಿ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದು, ವ್ಯಾಪಾರ, ರಕ್ಷಣಾ ಕ್ಷೇತ್ರಗಳಲ್ಲಿ ಉಭಯ ದೇಶಗಳು ಸಹಕಾರ ನೀಡುವ ಬಗ್ಗೆ ಚರ್ಚಿಸಲಿದ್ದಾರೆ ಎನ್ನಲಾಗುತ್ತಿದೆ.

Comments are closed.