ರಾಷ್ಟ್ರೀಯ

ಸಚಿವರೇ ಸುಪ್ರೀಂ ಕೋರ್ಟ್ ನ್ಯಾಯಾಧೀಶರಂತೆ ಮಾತನಾಡಿ: ಯಶವಂತ್ ಸಿನ್ಹಾ

Pinterest LinkedIn Tumblr


ಹೊಸದಿಲ್ಲಿ: ಮುಖ್ಯ ನ್ಯಾಯಮೂರ್ತಿಗಳ ವಿರುದ್ಧ ನಾಲ್ವರು ಹಿರಿಯ ನ್ಯಾಯಮೂರ್ತಿಗಳು ಪತ್ರಿಕಾಗೋಷ್ಠಿ ನಡೆಸಿದಂತೆ, ‘ಪ್ರಜಾಸತ್ತೆಯ ಉಳಿವಿಗಾಗಿ’ ಮಂತ್ರಿಗಳೂ ಮಾತನಾಡಬೇಕು ಎಂದು ಭಿನ್ನಮತೀಯ ಬಿಜೆಪಿ ನಾಯಕ ಯಶವಂತ್ ಸಿನ್ಹಾ ಒತ್ತಾಯಿಸಿದ್ದಾರೆ.

ಕೇಂದ್ರ ಸರಕಾರದ ವಿರುದ್ಧ ಮತ್ತೆ ವಾಗ್ದಾಳಿ ನಡೆಸಿರುವ ಅವರು, 1975-77ರ ಕಾಲದ ತುರ್ತು ಪರಿಸ್ಥಿತಿಯಂತಹ ವಾತಾವರಣ ಮತ್ತೆ ಕಾಣಿಸುತ್ತಿದೆ ಎಂದು ಆರೋಪಿಸಿದರು. ಸಂಸತ್ ಕಲಾಪದ ಅವಧಿಯೂ ಕಡಿಮೆಯಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಸಂಸತ್ತು ರಾಜಿಯಾದರೆ, ಸುಪ್ರೀಂ ಕೋರ್ಟೂ ಸರಿಯಾಗಿಲ್ಲ ಎಂದಾದರೆ ಪ್ರಜಾಪ್ರಭುತ್ವಕ್ಕೆ ಗಂಭೀರವಾದ ಅಪಾಯವಿದೆ ಎಂದರ್ಥ ಎಂದು ಸಿನ್ಹಾ ಸುದ್ದಿಗಾರರ ಜತೆ ಮಾತನಾಡುತ್ತ ವ್ಯಾಖ್ಯಾನಿಸಿದರು.

‘ನಾಲ್ವರು ಹಿರಿಯ ನ್ಯಾಯಮೂರ್ತಿಗಳು ಪ್ರಜಾಸತ್ತೆ ಅಪಾಯದಲ್ಲಿದೆ ಎಂದು ಹೇಳುತ್ತಾರೆ ಎಂದಾದರೆ ನಾವು ಅದನ್ನು ಗಂಭೀರವಾಗಿ ಪರಿಗಣಿಸಬೇಕು’ ಎಂದು ಸಿನ್ಹಾ ಒತ್ತಾಯಿಸಿದರು.

‘ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬ ನಾಗರಿಕನೂ ಮಾತನಾಡಬೇಕು. ಬಿಜೆಪಿ ನಾಯಕರು ಮತ್ತು ಹಿರಿಯ ಸಚಿವರು ಎದ್ದು ನಿಂತು ಮಾತನಾಡಬೇಕು ಎಂದು ನಾನು ಆಗ್ರಹಿಸುತ್ತೇನೆ. ಭಯ ತೊರೆದು ಮಾತನಾಡಿ ಎಂದು ಮನವಿ ಮಾಡುತ್ತೇನೆ’ ಎಂದು ಸಿನ್ಹಾ ನುಡಿದರು.

ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳಂತೆ ಭಾರತದ ಪ್ರಧಾನ ಮಂತ್ರಿಗಳೂ ಸಮಾನರಲ್ಲಿ ಮೊದಲಿಗರು ಅಷ್ಟೆ ಎಂದು ಸಿನ್ಹಾ ವ್ಯಾಖ್ಯಾನಿಸಿದರು.

ನೋಟು ಅಮಾನ್ಯೀಕರಣ, ಜಿಎಸ್‌ಟಿ, ಕಾಶ್ಮೀರ ಸೇರಿದಂತೆ ಹಲವು ವಿಚಾರಗಳಲ್ಲಿ ಮೋದಿ ಸರಕಾರದ ವಿರುದ್ಧ ಪದೇ ಪದೇ ವಾಗ್ದಾಳಿ ನಡೆಸುತ್ತಿರುವ ಯಶವಂತ್‌ ಸಿನ್ಹಾ, ನ್ಯಾಯಾಧೀಶರ ನಡುವಣ ಭಿನ್ನಾಭಿಪ್ರಾಯವನ್ನು ಉಲ್ಲೇಖಿಸಿ ಮೋದಿ ಸರಕಾರವನ್ನು ಜರಿದಿದ್ದಾರೆ.

Comments are closed.