ರಾಷ್ಟ್ರೀಯ

ಅಮೆರಿಕದ ಉದ್ಯೋಗ ಬಿಟ್ಟು ಸೇನೆ ಸೇರಿದ ಕಾರ್ಮಿಕನ ಮಗ

Pinterest LinkedIn Tumblr


ಡೆಹ್ರಾಡೂನ್‌: ಕೂಲಿ ಕಾರ್ಮಿಕನೊಬ್ಬನ ಮಗ ಎಂಜಿನಿಯರಿಂಗ್‌ ಪದವೀಧರನಾಗಿ ಕೈತುಂಬ ಸಂಬಳ ತರಬಹುದಾಗಿದ್ದ ಅಮೆರಿಕದ ಕಂಪನಿಯ ಉದ್ಯೋಗವನ್ನೂ ಬಿಟ್ಟು ಸೇನಾಪಡೆ ಸೇರಿ ದೇಶಸೇವೆಯ ಕನಸನ್ನು ನನಸಾಗಿಸಿಕೊಂಡ ಯಶೋಗಾಥೆಯಿದು.

ಶನಿವಾರ ಡೆಹ್ರಾಡೂನ್‌ನ ಭಾರತೀಯ ಮಿಲಿಟರಿ ಅಕಾಡೆಮಿಯ ಪಾಸಿಂಗ್‌ ಔಟ್‌ ಪರೇಡ್‌ನಲ್ಲಿ ಸೇನೆಯ ಅಧಿಕಾರಿಯಾಗಿ ಬರ್ನಾನ ಯಾದಗಿರಿ ಹೊರಹೊಮ್ಮಿದರು.

ಹೈದರಾಬಾದ್‌ನ ಸಿಮೆಂಟ್‌ ಫ್ಯಾಕ್ಟರಿಯೊಂದರಲ್ಲಿ ದಿನಗೂಲಿ ನೌಕರನಾಗಿ ದಿನಕ್ಕೆ 100 ರೂ ಸಂಪಾದಿಸುತ್ತಿದ್ದ ಬರ್ನಾನ ಗುನ್ನಯ್ಯನಿಗೆ ತಮ್ಮ ಮಗ ಮಿಲಿಟರಿ ಅಧಿಕಾರಿಯಾಗಿ ನೇಮಕಗೊಂಡಿರುವುದು ತಿಳಿದಾಗ ಸಂಭ್ರಮದಿಂದ ಕಣ್ಣು ಮಂಜಾಯಿತು.

‘ನನ್ನ ತಂದೆ ಅತ್ಯಂತ ಸರಳ ವ್ಯಕ್ತಿ. ನಾನೊಬ್ಬ ಜವಾನನಾಗಿ ಸೇನಾಪಡೆ ಸೇರುತ್ತಿದ್ದೇನೆ ಎಂದಷ್ಟೇ ಅವರು ಭಾವಿಸಿದ್ದರು. ಕೈತುಂಬಾ ಸಂಬಳ ಬರುತ್ತಿದ್ದ ಸಾಫ್ಟ್‌ವೇರ್‌ ಉದ್ಯೋಗ ತೊರೆದು ಸೇನೆ ಸೇರುವ ಮೂಲಕ ಬಹುದೊಡ್ಡ ತಪ್ಪು ಮಾಡುತ್ತಿದ್ದೀಯಾ ಎಂದು ತಂದೆ ನನ್ನನ್ನು ಎಚ್ಚರಿಸಿದ್ದರು’ ಎಂದು ಯಾದಗಿರಿ ಹೇಳಿದರು.

ತೀವ್ರ ಬಡತನದ ಸಂಕಷ್ಟಗಳ ನಡುವೆಯೇ ಹೈದರಾಬಾದ್‌ನ ಅಂತಾರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆಯಿಂದ (ಇಂಟರ್‌ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಇನ್ಫರ್ಮೇಶನ್‌ ಟೆಕ್ನಾಲಜಿ) ಸಾಫ್ಟ್‌ವೇರ್‌ ಎಂಜಿನಿಯರ್‌ ಪದವಿ ಗಳಿಸಿದವರು ಯಾದಗಿರಿ. ಅಮೆರಿಕ ಮೂಲದ ಯೂನಿಯನ್‌ ಪೆಸಿಫಿಕ್‌ ರೈಲ್‌ ರೋಡ್‌ ಎಂಬ ಕಂಪನಿಯಲ್ಲಿ ದೊರೆತ ಕೈತುಂಬ ಸಂಬಳದ ಉದ್ಯೋಗವನ್ನು ತಿರಸ್ಕರಿಸಿ, ಐಐಎಂ ಇಂದೋರ್‌ನಲ್ಲಿ ಉನ್ನತ ಅಧ್ಯಯನಕ್ಕೆ ದೊರೆತ ಅವಕಾಶವನ್ನೂ ಕೈಚೆಲ್ಲಿ ದೇಶ ಸೇವೆಗಾಗಿ ಸೇನೆ ಸೇರಲು ನಿರ್ಧರಿಸಿದರು. ಸಿಎಟಿ ಪರೀಕ್ಷೆಯಲ್ಲಿ ಶೇ 93.4ರಷ್ಟು ಅಂಕ ಗಳಿಸಿದ್ದ ಯಾದಗಿರಿಗೆ ಐಐಎಂ ಇಂದೋರ್‌ನಿಂದ ಅಡ್ಮಿಷನ್‌ಗಾಗಿ ಕರೆಯೂ ಬಂದಿತ್ತು.

ಶನಿವಾರದಂದು ದೇಶವೇ ಹೆಮ್ಮೆಪಡುವಂತೆ ಐಎಂಎಯ ತಾಂತ್ರಿಕ ಪದವೀಧರ ಕೋರ್ಸ್‌ನಲ್ಲಿ ಮೊದಲಿಗರಾಗಿ ಬೆಳ್ಳಿಯ ಪದಕದೊಂದಿಗೆ ಪಥಸಂಚಲನದಲ್ಲಿ ಹೊರಬಂದಾಗ ಹೆತ್ತವರ ಕಣ್ಣು ಅಭಿಮಾನದಿಂದ ಮಂಜಾಗಿದ್ದು ಸುಳ್ಳಲ್ಲ. ತಾಂತ್ರಿಕ ಶಿಕ್ಷಣದ ಹಿನ್ನೆಲೆಯಿದ್ದು ಭಾರತೀಯ ಮಿಲಿಟರಿ ಅಕಾಡೆಮಿಯಲ್ಲಿ ತರಬೇತಿ ಪಡೆದವರಿಗೆ ಸೇನಾಪಡೆಯ ಎಂಜಿನಿಯರಿಂಗ್‌ ವಿಭಾಗಗಳಲ್ಲಿ ಉದ್ಯೋಗ ದೊರೆಯುತ್ತದೆ.

ಈ ಅಭಿಮಾನದ ಕ್ಷಣವನ್ನು ಅನುಭವಿಸುವ ಮುನ್ನ ತಾವು ಸಾಗಿಬಂದ ಸಂಕಷ್ಟದ ಹಾದಿಯನ್ನು ಟೈಮ್ಸ್‌ ಆಫ್‌ ಇಂಡಿಯಾ ಜತೆ ನೆನಪಿಸಿಕೊಂಡ ಯಾದಗಿರಿ, ಸರಕಾರಿ ಸ್ಕಾಲರ್‌ಶಿಪ್‌ಗಳಿಂದಲೇ ತಮ್ಮ ಶಿಕ್ಷಣ ನಡೆಯಿತು ಎಂದು ತಿಳಿಸಿದರು. ‘ನನ್ನ ತಂದೆ ಕೇವಲ 60 ರೂ ದಿನಗೂಲಿ ಪಡೆಯುತ್ತಿದ್ದ ದಿನಗಳಲ್ಲಿ ಸಂಸಾರದ ಖರ್ಚು ನಿಭಾಯಿಸಲು ಪಟ್ಟ ಕಷ್ಟವನ್ನು ಕಂಡಿದ್ದೇನೆ. ಪೋಲಿಯೋ ಪೀಡಿತ ನನ್ನ ತಾಯಿ ನಾನಾ ಕಚೇರಿಗಳ ಟೇಬಲ್‌ಗಳನ್ನು ಸ್ವಚ್ಛಗೊಳಿಸುತ್ತ ಅಷ್ಟೋ ಇಷ್ಟೋ ಸಂಪಾದಿಸುತ್ತಿದ್ದರು. ಇದರಿಂದ ಜೀವನ ಹೇಗೋ ನಡೆಯುತ್ತಿತ್ತು’ ಎಂದು ಯಾದಗಿರಿ ಸ್ಮರಿಸಿಕೊಂಡರು.

‘ಅಂತಹ ದುರ್ಭರ ದಿನಗಳನ್ನು ಅನುಭವಿಸಿಯೂ ಹಣಕ್ಕಾಗಿ ನಾನು ಎಂದೂ ದುರಾಸೆ ಪಟ್ಟಿಲ್ಲ. ಕಾರ್ಪೊರೇಟ್‌ ಜಗತ್ತಿಗೆ ಅಂಟಿಕೊಂಡು ಬೇಕಾದಷ್ಟು ಹಣ ಸಂಪಾದಿಸುವ ಅವಕಾಶ ಒದಗಿ ಬಂದರೂ ನನ್ನ ಹೃದಯ ದೇಶ ಸೇವೆಗಾಗಿ ಹಾತೊರೆಯುತ್ತಿತ್ತು. ತಾಯ್ನಾಡಿಗಾಗಿ ಸೇವೆ ಸಲ್ಲಿಸುವುದರಿಂದ ಸಿಗುವ ಧನ್ಯತಾಭಾವ ಎಷ್ಟು ಹಣ ಕೊಟ್ಟರೂ ಸಿಗದು’ ಎಂದು ಅವರು ನುಡಿದರು.

ತಮ್ಮ ಕನಸಿಂತೆ ಸೇನಾಧಿಕಾರಿಯಾದ ಬಳಿಕ ಮುಂದಿನ ಗುರಿಯೇನು ಎಂಬುದರ ಬಗ್ಗೆ ಅವರು ಹೇಳಿದ್ದಿಷ್ಟು: ‘ಕಠಿಣ ಪರಿಶ್ರಮದ ಗುಣ ನನ್ನ ರಕ್ತದಲ್ಲೇ ಇದೆ. ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ತೊಡಗಿಕೊಳ್ಳುವ ಮೂಲಕ ದೇಶವೇ ಹೆಮ್ಮೆಪಡುವಂತೆ ನನ್ನ ಕರ್ತವ್ಯ ನಿಭಾಯಿಸುತ್ತೇನೆ’.

Comments are closed.