ರಾಷ್ಟ್ರೀಯ

25 ಮಕ್ಕಳ ಉಳಿಸಲು ಶಾಲಾ ವ್ಯಾನ್​ನ ಚಕ್ರಕ್ಕೆ ಅಡ್ಡಲಾಗಿ ಮಲಗಿದ ಚಾಲಕ

Pinterest LinkedIn Tumblr

ರಾಯ್ಪುರ: ಇಳಿಜಾರಲ್ಲಿ ಹಿಮ್ಮುಖವಾಗಿ ಚಲಿಸುತ್ತಿದ್ದ ಶಾಲಾ ವ್ಯಾನ್​ನ ಚಕ್ರಕ್ಕೆ ಅಡ್ಡಲಾಗಿ ಮಲಗಿ ನಿಲ್ಲಿಸುವ ಮೂಲಕ ಚಾಲಕನೋರ್ವ 25 ಶಾಲಾ ಮಕ್ಕಳನ್ನು ರಕ್ಷಿಸಿರುವ ಸಿನಿಮೀಯ ಮಾದರಿ ಘಟನೆಗೆ ಛತ್ತೀಸ್​ಗಢದ ರಾಯ್ಪುರ ಸಾಕ್ಷಿಯಾಗಿದೆ.

ಶಿವ ಯಾದವ್ (30) ಸಾಹಸಿ ಚಾಲಕ. ಕುನ್​ಕುರಿ ಪ್ರಾಂತ್ಯದ ನಾರಾಯಣಪುರದಲ್ಲಿ ಮಂಗಳವಾರ ಆಂಗ್ಲ ಶಾಲೆಯ ವಾಹನವನ್ನು ಅದರ ಚಾಲಕ ತುಸು ಇಳಿಜಾರಿನ ಪ್ರದೇಶದಲ್ಲಿ ಫಸ್ಟ್​ಗೇರ್​ನಲ್ಲಿ ನಿಲ್ಲಿಸಿ ವಿರಾಮಕ್ಕಾಗಿ ಕೆಳಗೆ ಇಳಿದು ಹೋಗಿದ್ದ.

ಈ ವೇಳೆ ವ್ಯಾನ್​ನಲ್ಲಿದ್ದ ಮಗುವೊಂದು ಗೇರ್ ಅನ್ನು ನ್ಯೂಟ್ರಲ್​ಗೆ ಹಾಕಿದ್ದರಿಂದಾಗಿ ವಾಹನ ಹಿಂದಕ್ಕೆ ಚಲಿಸಲಾರಂಭಿಸಿತು. ಆ ಸಂದರ್ಭದಲ್ಲಿ ಅಲ್ಲೇ ವಿಶ್ರಾಂತಿ ಪಡೆಯುತ್ತಿದ್ದ ಮತ್ತೊಂದು ಶಾಲಾ ವಾಹನದ ಚಾಲಕ ಶಿವ ಯಾದವ್ ಇದನ್ನು ಗಮನಿಸಿದ. ದಿಢೀರ್ ಆಘಾತದಿಂದ ಗೊಂದಲಕ್ಕೀಡಾದ ಈತನಿಗೆ ತಕ್ಷಣಕ್ಕೆ ಏನು ಮಾಡಬೇಕೆಂದು ತೋಚಲಿಲ್ಲ. ಸುತ್ತಮುತ್ತ ಹುಡುಕಾಡಿದರೂ ಕಲ್ಲು ಸಿಗದಿದ್ದಾಗ ಕೊನೆಗೆ ತಾನೇ ವಾಹನಕ್ಕೆ ಅಡ್ಡಲಾಗಿ ಮಲಗಿದ್ದಾನೆ. ತಾನೇ ಚಕ್ರಕ್ಕೆ ಸ್ಪೀಡ್ ಬ್ರೇಕರ್ ಆಗಿ ವಾಹನದಲ್ಲಿದ್ದ 25 ಮಕ್ಕಳನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾನೆ. ಕೆಲ ಮಕ್ಕಳಿಗೆ ಸಣ್ಣಪುಟ್ಟ ಗಾಯಗಳಾದವಷ್ಟೆ. ಶಿವ ಯಾದವ್​ಗೆ ಸಣ್ಣಪುಟ್ಟ ಗಾಯವಾಗಿದ್ದು, ಆತನನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.

Comments are closed.