ರಾಷ್ಟ್ರೀಯ

ಪತ್ನಿ ಶವವನ್ನು 10 ಕಿ.ಮೀ ಹೊತ್ತೊಯ್ದಿದ್ದ ವ್ಯಕ್ತಿ ಈಗ ಹೇಗಿದ್ದಾರೆ ಗೊತ್ತಾ?

Pinterest LinkedIn Tumblr

ಭುವನೇಶ್ವರ: ಕಳೆದ ವರ್ಷ ಆಸ್ಪತ್ರೆಯಲ್ಲಿ ಆಂಬುಲೆನ್ಸ್ ವ್ಯವಸ್ಥೆ ಸಿಗದೇ ಸುಮಾರು 10 ಕಿ.ಮೀ ದೂರದವರೆಗೆ ತನ್ನ ಹೆಗಲ ಮೇಲೆ ಪತ್ನಿಯ ಶವ ಸಾಗಿಸಿ ಸುದ್ದಿಯಾಗಿದ್ದ ಒಡಿಶಾದ ದಾನಾ ಮಾಝಿ ಜೀವನ ಇದೀಗ ಪೂರ್ತಿ ಬದಲಾಗಿದೆ.

ಹೌದು. ಹೊಸ ಮನೆ ಕಟ್ಟುತ್ತಿರೋ ಮಾಝಿ, ಎರಡನೇ ಮದುವೆಯಾಗಿ ಸದ್ಯ 65 ಸಾವಿರ ರೂ. ಮೌಲ್ಯದ ಹೊಸ ಹೊಂಡಾ ಬೈಕ್ ಕೂಡ ಖರೀದಿ ಮಾಡಿದ್ದಾರೆ. ಕಳೆದ ಆಗಸ್ಟ್ ತಿಂಗಳಿನಲ್ಲಿ ಮಾಝಿ ಪತ್ನಿ ಅಮಾಂಗ್ ಡಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಆದ್ರೆ ಇವರ ಮೃತ ದೇಹವನ್ನು ಮನೆಗೆ ಸಾಗಿಸಲು ಆಸ್ಪತ್ರೆ ಸಿಬ್ಬಂದಿ ಆಂಬುಲೆನ್ಸ್ ವ್ಯವಸ್ಥೆ ಕಲ್ಪಿಸಿರಲಿಲ್ಲ. ಹೀಗಾಗಿ ಮಾಝಿ , ಬಟ್ಟೆಯಿಂದ ಸುತ್ತಲಾಗಿದ್ದ ತನ್ನ ಪತ್ನಿಯ ಮೃತದೇಹವನ್ನ ಹೆಗಲ ಮೇಲೆ ಹೊತ್ತು, ಮಗಳೊಂದಿಗೆ 10 ಕಿ. ಮೀ ದೂರದವರೆಗೆ ನಡೆದಿದ್ದರು. ಈ ರೀತಿ ಸಾಗುತ್ತಿರುವ ಮಾಝಿ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಇಡೀ ದೇಶವೇ ಮರುಕ ವ್ಯಕ್ತಪಡಿಸಿತ್ತು. ಈ ಫೋಟೋವನ್ನು ನೋಡಿದ ಬಹ್ರೈನ್ ಪ್ರಧಾನಿ ಮಾಝಿಯ ಅಸಾಹಯಕ ಸ್ಥಿತಿಯನ್ನು ಕಂಡು ಅವರೂ ಸಹಾಯಕ್ಕೆ ಮುಂದಾದ್ರು.

ಅಂತೆಯೇ ಪ್ರಧಾನಿ ರಾಜಕುಮಾರ ಖಲಿಫಾ ಬಿನ್ ಸ್ಮಾನ್ ಅಲ್ ಖಲೀಫಾ, ಮಾಝಿಗೆ 9 ಲಕ್ಷ ರೂ. ನೆರವು ನೀಡಿದ್ದರು. ಹಾಗೆಯೇ ಕೆಲ ವ್ಯಕ್ತಿಗಳು ಹಾಗೂ ಹಲವು ಸಂಘ-ಸಂಸ್ಥೆಗಳು ಕೂಡ ಮಾಝಿಗೆ ನೆರವು ನೀಡಿದ್ದವು. ಹೀಗಾಗಿ ಸದ್ಯ ಮಾಝಿ ಆರ್ಥಿಕ ಪರಿಸ್ಥಿತಿ ಸುಧಾರಿಸಿದೆ. ಸರ್ಕಾರದ ಪ್ರಧಾನ ಮಂತ್ರಿ ಗ್ರಾಮೀಣ ಅವಾಜ್ ಯೋಜನೆ ವತಿಯಿಂದ ಮನೆ ಕೂಡ ನಿರ್ಮಾಣವಾಗುತ್ತಿದೆ. ಸದ್ಯ ಅವರು ಗ್ರಾಮದ ಅಂಗನವಾಡಿಯೊಂದರಲ್ಲಿ ವಾಸ್ತವ್ಯ ಹೂಡಿದ್ದಾರೆ.

ಇನ್ನು ಮಾಝಿಯ ಮೂವರು ಹೆಣ್ಣು ಮಕ್ಕಳಿಗೆ ಶಾಲೆಯೊಂದು ಉಚಿತ ಶಿಕ್ಷಣ ನೀಡುತ್ತಿದೆ. ಹೀಗಾಗಿ ಮಕ್ಕಳು ಆ ಶಾಲೆಯ ಹಾಸ್ಟೆಲ್ ನಲ್ಲಿ ವಾಸವಾಗಿದ್ದಾರೆ. ಈ ಮಧ್ಯೆ ಮಾಝಿ ಎರಡನೇ ಮದುವೆಯಾಗಿದ್ದಾರೆ. ಸದ್ಯ ಪತ್ನಿ ಅಲಮಟಿ ಡೀ ಗರ್ಭಿಣಿಯಾಗಿದ್ದಾರೆ.

ಹೊಸ ಮನೆಯ ಬಳಿಕ ಸುತ್ತಾಡಲು ಹೊಸ ಬೈಕ್ ಬೇಕು ಅಂತ ಹೇಳಿದ್ದರು. ಹೀಗಾಗಿ ಅವರು ಸದ್ಯ ಹೊಸ ಹೊಂಡಾ ಬೈಕ್ ಖರೀದಿ ಮಾಡಿದ್ದಾರೆ ಅಂತ ಹೊಂಡಾ ಬೈಕ್ ಶೋ ರೂಮ್ ಮಾಲಕ ಮನೋಜ್ ಅಗರ್‍ವಾಲ್ ಹೇಳಿದ್ದಾರೆ.

ಒಟ್ಟಿನಲ್ಲಿ ಮಾಝಿ ಜೀವನ ಸಂಪೂರ್ಣ ಬದಲಾಗಿದ್ದು, ಗ್ರಾಮಸ್ಥರು ಮಾತ್ರ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಯಾಕಂದ್ರೆ ಮಾಝಿಗೆ ಸರ್ಕಾರ, ಸಂಘ ಸಂಸ್ಥೆಗಳು ನೆರವು ನೀಡಿದ್ದರಿಂದ ಅವರ ಜೀವನ ಶೈಲಿಯೇ ಬದಲಾಗಿದೆ. ಆದರೆ ಗ್ರಾಮಕ್ಕೆ ಯಾವುದೇ ಸವಲತ್ತು ಸಿಕ್ಕಿಲ್ಲ ಅಂತ ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಆದ್ರೆ ಮಾಝಿಗೆ ಬೈಕ್ ಚಾಲನೆ ಬರದ ಕಾರಣ ಸಂಬಂಧಿಯ ಹಿಂದೆ ಬೈಕ್‍ನಲ್ಲಿ ಕೂರಬೇಕಿದೆ. ಹೀಗಾಗಿ ಮಾಝಿಗೆ ಈಗ ಬೈಕ್ ಚಾಲನೆ ಕಲಿಯೋ ಬಗ್ಗೆಯೇ ಚಿಂತೆ.

Comments are closed.