
ಹೊಸದಿಲ್ಲಿ: ಅಂತರ್ಜಾತಿ ವಿವಾಹವನ್ನು ಪ್ರೋತ್ಸಾಹಿಸಿ, ದೇಶದಲ್ಲಿರುವ ಜಾತಿ ವ್ಯವಸ್ಥೆಯನ್ನು ನಿರ್ಮೂಲನೆ ಮಾಡುವ ಉದ್ದೇಶದಿಂದ ದಲಿತರನ್ನು ವರಿಸುವವರಿಗೆ 2.5 ಲಕ್ಷ ರೂ. ಪ್ರೋತ್ಸಾಹ ಧನ ನೀಡುವುದಾಗಿ ಕೇಂದ್ರ ಸರಕಾರ ಜಾರಿಗೆ ತಂದಿದೆ. ಇದೀಗ ಈ ಯೋಜನೆಗಿದ್ದ 5 ಲಕ್ಷ ರೂ. ಗರಿಷ್ಠ ವಾರ್ಷಿಕ ಆದಾಯ ಮಿತಿಯನ್ನು ಸರಕಾರ ಸಡಿಲಗೊಳಿಸಿದ್ದು, ಯಾರೇ ದಲಿತರನ್ನು ವರಿಸಿದರೂ ಈ ಪ್ರೋತ್ಸಾಹ ಧನ ಸಿಗಲಿದೆ.
ಡಾ.ಅಂಬೇಡ್ಕರ್ ಅಂತಾರ್ಜಾತಿ ವಿವಾಹ ಸಾಮಾಜಿಕ ಸಮನ್ವಯ ಯೋಜನೆಯಡಿಯಲ್ಲಿ ವಾರ್ಷಿಕ ಕನಿಷ್ಠ 500 ಅಂತರ್ಜಾತಿ ವಿವಾಹಗಳಿಗೆ ಪ್ರೋತ್ಸಾಹ ದನ ನೀಡುವ ಗುರಿ ಸರಕಾರಕ್ಕಿತ್ತು. ಆದರೆ, ಈ ಯೋಜನೆ ಫಲಾನುಭವಿಗಳು ವಾರ್ಷಿಕ ಆದಾಯ ಮಿತಿ 5 ಲಕ್ಷ ರೂ. ಮೀರಿರಬಾರದೆಂಬ ಷರತ್ತು ಇತ್ತು. ಇದೀಗ ಇದನ್ನು ಸಡಿಲಿಸಿದ್ದು, ಎಷ್ಟೇ ಆದಾಯವಿದ್ದರೂ ದಲಿತರನ್ನು ಮದುವೆಯಾದರೆ, ಯೋಜನೆಯ ಫಲಾನುಭವಿಗಳಾಗಬಹುದು. ಆಧಾರ್ ಹಾಗೂ ಬ್ಯಾಂಕ್ ಖಾತೆ ಮಾಹಿತಿ ನೀಡುವುದು ಮಾತ್ರ ಕಡ್ಡಾಯ.
ಇಂಥ ಯೋಜನೆ ಜಾರಿಯಲ್ಲಿರುವ ಅನೇಕ ರಾಜ್ಯಗಳಲ್ಲಿ ಯಾವುದೇ ಆದಾಯ ಮಿತಿಯಿರಲಿಲ್ಲ. ಅದಕ್ಕಾಗಿಯೇ ಕೇಂದ್ರವೂ ಈ ಯೋಜನೆಯನ್ನು ಸರಳೀಕರಣಗೊಳಿಸಿದೆ.
ಹೊಸದಾಗಿ ದಾಂಪತ್ಯಕ್ಕೆ ಕಾಲಿರಿಸಿದ ಜೋಡಿಗೆ ಮೊದಲು ಜೀವನ ನಡೆಸಲು ಅನುಕೂಲವಾಗುವಂತೆ ಈ ಯೋಜನೆ ಜಾರಿಗೊಳಿಸಿದ್ದೇ ಹೊರತು, ಇದು ಉದ್ಯೋಗ ಸೃಷ್ಟಿ ಅಥವಾ ಬಡತನ ನಿರ್ಮೂಲನಾ ಯೋಜನೆಯ ಭಾಗವಲ್ಲವೆಂದು ಸರಕಾರ ಸ್ಪಷ್ಟಪಡಿಸಿದೆ.
ಷರತ್ತುಗಳೇನು?
– ಹಿಂದು ವಿವಾಹ ಕಾಯಿದೆ 1955ರಡಿಯಲ್ಲಿ ಮದುವೆ ಕಾನೂನೂಬದ್ಧವಾಗಿದ್ದು, ನೋಂದಣಿಯಾಗಿರಬೇಕು.
– ವೈವಾಹಿಕ ಮೈತ್ರಿಗೆ ಸಂಬಂಧಿಸಿದಂತೆ ಜೋಡಿಯು ಅಫಿಡವಿಟ್ ಸಲ್ಲಿಸಬೇಕು.
– ಎರಡನೇ ಅಥವಾ ಮತ್ತೊಂದು ಮದುವೆಯಾದರೆ ಯಾವುದೇ ಪ್ರೋತ್ಸಾಹ ಧನ ನೀಡಲಾಗುವುದಿಲ್ಲ.
– ದಾಂಪತ್ಯಕ್ಕೆ ಕಾಲಿರಿಸಿದ ವರ್ಷದೊಳಗೆ ಮದುವೆಗೆ ಸಂಬಂಧಿಸಿದಂತೆ ದಾಖಲೆಗಳನ್ನು ಸಲ್ಲಿಸಿದರೆ ಮಾತ್ರ ಈ ಯೋಜನೆಯ ಲಾಭ ಪಡೆಯಬಹುದು.
Comments are closed.