ರಾಷ್ಟ್ರೀಯ

ಕೇರಳದಲ್ಲಿ ಭಾರಿ ಮಳೆ: 150 ಬೆಸ್ತರ ರಕ್ಷಣೆ

Pinterest LinkedIn Tumblr


ತಿರುವನಂತಪುರ: ತಮಿಳುನಾಡು ಮತ್ತು ಕೇರಳದಲ್ಲಿ ಅನಾಹುತಗಳನ್ನು ಸೃಷ್ಟಿಸಿರುವ ಓಖೀ ಚಂಡಮಾರುತದ ಪ್ರಭಾವ ಇನ್ನೂ ಮುಂದುವರಿದಿದ್ದು, ಕೇರಳದ ಕರಾವಳಿಯಲ್ಲಿ ಭಾರಿ ಮಳೆ ಸುರಿಯುತ್ತಿದೆ, ರಕ್ಷಣಾ ಕಾರ್ಯಾಚರಣೆ ಬಿರುಸುಗೊಂಡಿದೆ.

ಭಾರಿ ಮಳೆಯಿಂದ ಜನಜೀವನಕ್ಕೆ ತೊಂದರೆಯಾಗಿದೆ. ಚಂಡಮಾರುತವು ಲಕ್ಷದ್ವೀಪದ ಮಿನಿಕೋಯ್‌ನಲ್ಲಿ ಕೇಂದ್ರೀಕೃತಗೊಂಡಿದೆ ಎಂದು ತಜ್ಞರು ತಿಳಿಸಿದ್ದಾರೆ. ಮೀನುಗಾರಿಕೆಗೆ ಇಳಿದಿದ್ದ ದಕ್ಷಿಣ ಜಿಲ್ಲೆಗಳ 150 ಮೀನುಗಾರರನ್ನು ರಕ್ಷಿಸಲಾಗಿದೆ ಎಂದು ತಿರುವನಂತಪುರ ಜಿಲ್ಲಾ ಆಯುಕ್ತ ಕೆ. ವಾಸುಕಿ ತಿಳಿಸಿದ್ದಾರೆ.

ಚಂಡಮಾರುತದ ಅಬ್ಬರಕ್ಕೆ ಗುರುವಾರ 8 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಚಂಡಮಾರುತದ ಪರಿಣಾಮವಾಗಿ ಬೆಂಗಳೂರು, ಕರಾವಳಿ ಭಾಗ ಸೇರಿದಂತೆ ರಾಜ್ಯದಲ್ಲೂ ಮಳೆಯಾಗುತ್ತಿದೆ. ಸಮುದ್ರ ಮಧ್ಯೆ ಜಪಾನ್‌ನ ಸರಕು ಸಾಗಣೆ ಹಡಗಿನಲ್ಲಿದ್ದ 60 ಮಂದಿಯನ್ನು ಕೂಡ ರಕ್ಷಿಸಿ ತೀರಕ್ಕೆ ಕರೆ ತರಲಾಗಿದೆ ಎಂದು ಅವರು ತಿಳಿಸಿದ್ದಾರೆ. ರಕ್ಷಿಸಲಾದ ಬೆಸ್ತರಿಗೆ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ನೌಕಾಪಡೆ, ಕರಾವಳಿ ಕಾವಲು ಪಡೆ, ವಾಯುಪಡೆ ಪರಿಹಾರ ಕಾರ್ಯಾಚರಣೆಯಲ್ಲಿ ತೊಡಗಿದೆ. ಲಕ್ಷದ್ವೀಪದಲ್ಲಿ ರಕ್ಷಣೆ ಮತ್ತು ಪರಿಹಾರ ಕಾರ್ಯಾಚರಣೆಗೆ ನೌಕೆಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸುವಂತೆ ಮತ್ತು ಅಗತ್ಯವಿರುವವರನ್ನು ಶಾಲೆಗಳಿಗೆ ಸ್ಥಳಾಂತರಗೊಳಿಸುವಂತೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಆದೇಶಿಸಿದ್ದಾರೆ. ನಾಪತ್ತೆಯಾದವರ ಕುಟುಂಬಗಳಿಂದ ಪ್ರತಿಭಟನೆ ನಡೆದು ಸಂಚಾರಕ್ಕೆ ತೊಡಕುಂಟಾಯಿತು. ರಕ್ಷಣಾ ಕಾರ್ಯಾಚರಣೆಯಲ್ಲಿ ವಿಳಂಬವಾಗಿದೆ ಎಂದು ಆಕ್ರೋಶವ್ಯಕ್ತಪಡಿಸಿದರು.

Comments are closed.