ರಾಷ್ಟ್ರೀಯ

5 ದಶಕಗಳ ಬಳಿಕ ಕಾಲೇಜು ಸೇರಿದ 67ರ ಚೆಲ್ಲತಾಯಿ

Pinterest LinkedIn Tumblr

ಕಲಿಯುವ ಬಯಕೆ ಇದ್ದರೆ ಅಡೆತಡೆಗಳು, ವಯಸ್ಸು ಒಂದು ಮಿತಿಯೇ ಅಲ್ಲ ಎಂದು ಸಾಬೀತು ಪಡಿಸಿದ್ದಾರೆ ತಮಿಳುನಾಡಿನ 76 ವರ್ಷದ ಎಂ. ಚೆಲ್ಲತಾಯಿ. ತಮಿಳುನಾಡಿನ ಮುಕ್ತ ವಿಶ್ವ ವಿದ್ಯಾನಿಲಯದಲ್ಲಿ ಇತಿಹಾಸದಲ್ಲಿ ಸ್ನಾತಕೋತರ ಪದವಿಗೆ ಸೇರುವ ಮೂಲಕ ಅವರ 5 ದಶಕಗಳ ಕನಸು ನನಸಾಗಿದೆ.

ಈ ತಾಯಿಯ ಕಲಿಕೆಯ ದಾಹದ ಕತೆ ತುಂಬಾ ವಿಶೇಷವಾದದು. ಇವರ ಕತೆಯೂ ಓದುವ ಬಯಕೆ ಇರುವ ಪ್ರತಿಯೊಬ್ಬರಿಗೂ ಸ್ಫೂರ್ತಿ ತುಂಬುವಂಥದ್ದು.

5 ದಶಕಗಳ ಹಿಂದೆ ಕ್ವೀನ್ ಮೇರಿ ಕಾಲೇಜಿಗೆ ಸೇರಲೆಂದು ತಂದ ಅರ್ಜಿಯನ್ನು ಚೆಲ್ಲತಾಯಿಯ ತಂದೆ ಹರಿದು ಹಾಕಿ , ನಮ್ಮ ಕುಟುಂಬದಲ್ಲಿ ಹೆಣ್ಣು ಮಕ್ಕಳು ಹೆಚ್ಚು ಓದುವಂತಿಲ್ಲ ಎಂದು ತಾಕೀತು ಮಾಡುತ್ತಾರೆ. ತಾನು ಮುಂದೆ ಓದಲು ಸಾಧ್ಯವಿಲ್ಲ ಎಂದು ಗೊತ್ತಿದ್ದರೂ ಓದಬೇಕೆಂಬ ಬಯಕೆ ಮಾತ್ರ ದೂರಾಗಲಿಲ್ಲ.

ತವರು ಮನೆಯಿಂದ ಕೆಲವೇ ಕಿಲೋ ಮೀಟರ್‌ ದೂರದಲ್ಲಿರುವ ಊರಿಗೆ ಇವರನ್ನು ಮದುವೆ ಮಾಡಿ ಕಳುಹಿಸಿಕೊಡಲಾಗಿರುತ್ತದೆ. ಅಲ್ಲಿಯೂ ಅವರ ಓದುವ ಬಯಕೆಗೆ ಕವಡೆ ಕಾಸಿನ ಬೆಲೆ ಸಿಗಲಿಲ್ಲ.

ತಂದೆ ತೀರಿ ಹೋದ ಹಲವು ವರ್ಷಗಳ ಬಳಿಕ ಅವರ ಪತಿ ಅವರನ್ನು ಕೆಲಸಕ್ಕೆ ಹೋಗಲು ಅನುಮತಿ ನೀಡಿದರು. ತಮಿಳುನಾಡಿನ ಗೋಪಾಲಪುರಂನಲ್ಲಿರುವ ನಾಗರಿಕ ಪೂರೈಕೆ ನಿಗಮದಲ್ಲಿ ಕ್ಲರ್ಕ್ ಆಗಿ ಕೆಲಸಕ್ಕೆ ಸೇರಿದರು. ಆದರೂ ಓದಲು ಅನುಮತಿ ಸಿಕ್ಕಿರಲಿಲ್ಲ. 2009ರಲ್ಲಿ ಕೆಲಸದಿಂದ ನಿವೃತಿಯಾದರು.

2013ರಲ್ಲಿ ಪತಿಯೂ ತೀರಿ ಹೋದರು. ಅದಾದ ಬಳಿಕ ಆಕೆ ಓದಬೇಕೆಂಬ ಬಯಕೆ ವ್ಯಕ್ತ ಪಡಿಸಿದಾಗ ಮಕ್ಕಳು ಬೆಂಬಲ ಸೂಚಿಸಿದರು. ಕೊನೆಗೂ ಅವರ ಕನಸು ನನಸಾಗಿದ್ದು, ಸಾಧಿಸುವ ಛಲ ಇದ್ದರೆ ನಮ್ಮಿಂದ ಸಾಧ್ಯ ಎನ್ನುವ ಸ್ಪೂರ್ತಿ ತುಂಬುತ್ತಾರೆ ಚೆಲ್ಲತಾಯಿ.

Comments are closed.