ರಾಷ್ಟ್ರೀಯ

ಉ.ಪ್ರ ಸ್ಥಳೀಯ ಚುನಾವಣೆ: 16 ಸ್ಥಾನಗಳಲ್ಲಿ 14 ಬಿಜೆಪಿಗೆ, ಕಾಂಗ್ರೆಸ್‌ಗೆ ಮುಖಭಂಗ

Pinterest LinkedIn Tumblr

ಲಖನೌ: ಮುಖ್ಯಮಂತ್ರಿಯಾಗಿ ಯೋಗಿ ಆದಿತ್ಯನಾಥ್ ಅಧಿಕಾರ ಸ್ವೀಕರಿಸಿದ ನಂತರ ಇದೇ ಮೊದಲ ಬಾರಿಗೆ ಉತ್ತರ ಪ್ರದೇಶದಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಬಾರಿಸಿದೆ. 16 ಸ್ಥಾನಗಳಲ್ಲಿ 14 ಬಿಜೆಪಿ ಪಾಲಾಗಿದ್ದು, ಕಾಂಗ್ರೆಸ್‌ ನೆಲ ಕಚ್ಚಿದೆ. ಈ ಫಲಿತಾಂಶವನ್ನು ಯೋಗಿ ಸರಕಾರಕ್ಕೆ ಸಿಕ್ಕಿರುವ ಜನಾದೇಶವೆಂದು ಪರಿಗಣಿಸಲಾಗುತ್ತಿದೆ.

ಕಾಂಗ್ರೆಸ್ ಭದ್ರಕೋಟೆ ಎಂದೇ ಪರಿಗಣಿಸಲ್ಪಟ್ಟ, ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಪ್ರತಿನಿಧಿಸುತ್ತಿರುವ ಅಮೇಥಿಯಲ್ಲಿಯೂ ಕಾಂಗ್ರೆಸ್‌ ಮುಖಭಂಗ ಅನುಭವಿಸಿದ್ದು.ಅಮೇಥಿ ನಗರ ಪಂಚಾಯತಿ ಚುನಾವಣೆಯಲ್ಲಿ ಸೋತಿದೆ. ಸಮಾಜವಾದಿ ಪಕ್ಷವೂ ಈ ಚುನಾವಣೆಯಲ್ಲಿ ತನ್ನ ಅಸ್ತಿತ್ವ ತೋರುವಲ್ಲಿ ವಿಫಲವಾಗಿದೆ.

ಇದುವರೆಗೆ ಬಿಜೆಪಿಯ 12 ಮೇಯರ್ ಅಭ್ಯರ್ಥಿಗಳು ಮುನ್ನಡೆ ಸಾಧಿಸಿದ್ದು, ಬಿಎಸ್‌ಪಿ ಒಂದು ಕ್ಷೇತ್ರವನ್ನು ಗೆದ್ದರೆ, ಮತ್ತೊಂದರಲ್ಲಿ ಮುನ್ನಡೆ ಸಾಧಿಸಿದೆ. ವಾರಾಣಾಸಿ, ಗೋರಖ್‌ಪುರ, ಕಾನ್ಪುರ್, ಘಜಿಯಾಬಾದ್, ಅಲಹಾಬಾದ್, ಲಖನೌ, ಫಿರೋಜಾಬಾದ್, ಅಯೋಧ್ಯಾ, ಮಥುರಾ, ಸಹರಾಣ್‌ಪುರ್ ಮತ್ತು ಮೊರಾದಾಬಾದ್‌ನಲ್ಲಿ ಬಿಜೆಪಿಯ ಮೇಯರ್ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಆಲಿಘಡ್‌ನಲ್ಲಿ ಬಿಎಸ್‌ಪಿ ಅಭ್ಯರ್ಥಿಗೆ ಜಯಲಕ್ಷ್ಮಿ ಒಲಿದರೆ, ಮೀರತ್‌ನಲ್ಲಿ ಪಕ್ಷ ಗೆಲುವಿನ ದಾರಿಯಲ್ಲಿದೆ.

ನವೆಂಬರ್ 22, 26 ಮತ್ತು 29ರಂದು ಮೂರು ಹಂತಗಳಲ್ಲಿ ನಡೆದ ಚುನಾವಣೆಯ ಮತ ಎಣಿಕೆ ಕಾರ್ಯ ನಡೆಯುತ್ತಿದ್ದು, ಬಿಗಿ ಭದ್ರತೆ ಒದಗಿಸಲಾಗಿದೆ. ಕೇಂದ್ರ ಅರೆ ಸೇನಾ ಪಡೆಯನ್ನು ನಿಯೋಜಿಸಿದ್ದು, ಮತ ಎಣಿಕೆಯನ್ನು ಅಂತರ್ಜಾಲದಲ್ಲಿ ಭಿತ್ತರಿಸಲಾಗುತ್ತಿದೆ.

Comments are closed.