ರಾಷ್ಟ್ರೀಯ

‘ಪದ್ಮಾವತಿ’ ಪರ ಎಲ್ ಕೆ ಆಡ್ವಾಣಿ ಬ್ಯಾಟಿಂಗ್

Pinterest LinkedIn Tumblr

ದೇಶದಾದ್ಯಂತ ವಿವಾದಕ್ಕೆ ಗುರಿಯಾಗಿರುವ ‘ಪದ್ಮಾವತಿ’ ಚಿತ್ರದ ಬಗ್ಗೆ ಚರ್ಚಿಸಲು ನಿರ್ದೇಶಕ ಸಂಜಯ್ ಲೀಲಾ ಭನ್ಸಾಲಿ ಹಾಗೂ ಸೆನ್ಸಾರ್ ಮಂಡಳಿ ಮುಖ್ಯಸ್ಥ ಪ್ರಸೂನ್ ಜೋಷಿ ಗುರುವಾರ ಸಂಸದೀಯ ಸಮಿತಿ ಮುಂದೆ ಹಾಜರಾಗಿದ್ದರು. ಭನ್ಸಾಲಿ ಮೇಲೆ ಪ್ರಶ್ನೆಗಳ ಮಳೆಯನ್ನೇ ಸುರಿಸಲಾಯಿತು.

ಸಭೆಯಲ್ಲಿ ಜೋಷಿ, ಸಮಿತಿ ಮುಖ್ಯಸ್ಥ ಅನುರಾಗ್ ಠಾಕೂರ್ ಸಿನಿಮಾ ಬಗ್ಗೆ ಮಾತನಾಡುತ್ತಾ ಭನ್ಸಾಲಿ ವಿರುದ್ಧ ತೀವ್ರ ವಾಗ್ದಾದ ನಡೆಸಿದರು. ಸಿನಿಮಾ ಸೆನ್ಸಾರ್ ಮುಂದೆ ಬರುವುದಕ್ಕೂ ಮುನ್ನ ಮಾಧ್ಯಮಗಳಿಗೆ ಪ್ರದರ್ಶಿಸುವ ಜರೂರತ್ತು ಏನಿತ್ತು ಎಂದು ಪ್ರಶ್ನಿಸಿದರು. ಭನ್ಸಾಲಿ ಸೆನ್ಸಾರ್ ಮಂಡಳಿಯನ್ನು ಅವಮಾನಿಸಿದ್ದಾರೆಂದು ಜೋಷಿ ಆರೋಪಿಸಿದರು.

ಈ ಬಗ್ಗೆ ಭನ್ಸಾಲಿ ಪ್ರತಿಕ್ರಿಯಿಸುತ್ತಾ, ‘ತನಗೆ ಬೇರೆ ದಾರಿ ಇರಲಿಲ್ಲ. ಸಿನಿಮಾದಲ್ಲಿ ಯಾವುದೇ ಕೆಟ್ಟ ಸನ್ನಿವೇಶಗಳನ್ನು ತೋರಿಸಿಲ್ಲ ಎಂದು ನಿರೂಪಿಸಿಕೊಳ್ಳಲು ವಿಶೇಷ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಿದ್ದಾಗಿ’ ಹೇಳಿದ್ದಾರೆ. ಸಿನಿಮಾ ಬಗ್ಗೆ ದೇಶದಾದ್ಯಂತ ಪ್ರತಿಭಟನೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಈಗಾಗಲೆ ತನಗೆ ತುಂಬಾ ನಷ್ಟವಾಗಿದೆ ಎಂದು ಸಮಿತಿಗೆ ಭನ್ಸಾಲಿ ವಿವರ ನೀಡಿದ್ದಾರೆ.

ಇನ್ನೊಂದು ಕಡೆ ಇಂತಹ ಭಾವನಾತ್ಮಕ ಸಮಸ್ಯೆಯನ್ನೆ ಚಿತ್ರತಂಡ ಲಾಭ ಮಾಡಿಕೊಳ್ಳುತ್ತಿದೆ ಎಂದು ಸಮಿತಿ ಆರೋಪಿಸಿದೆ. ಇದೊಂದು ಕಾಲ್ಪನಿಕ ಚಿತ್ರವಾಗಿರುವ ಕಾರಣ ಮೂಲ ಹೆಸರುಗಳನ್ನು ಬಳಸಬೇಕಾದ ಅಗತ್ಯ ಏನಿತ್ತು ಎಂದು ಸಮಿತಿ ಭನ್ಸಾಲಿಯನ್ನು ಪ್ರಶ್ನಿಸಿದೆ.

‘ಪದ್ಮಾವತಿ’ಗೆ ಆಡ್ವಾಣಿ ಬೆಂಬಲ
ಈ ಸಿನಿಮಾ ಬಗ್ಗೆ ಬಿಜೆಪಿ ಹಿರಿಯ ನೇತಾರ ಎಲ್ ಕೆ ಆಡ್ವಾಣಿ ಅವರು ನಿರ್ದೇಶಕ ಭನ್ಸಾಲಿಗೆ ಬೆಂಬಲ ಸೂಚಿಸಿದ್ದಾರೆ. ಸಿನಿಮಾ ವಿಚಾರವಾಗಿ ಈಗಾಗಲೆ ಬಹಳಷ್ಟು ಮಂದಿ ಬೆಂಬಲಿಸಿದ್ದಾರೆಂದು, ಇನ್ನು ಸಮಿತಿ ಇದರಲ್ಲಿ ಮೂಗು ತೂರಿಸುವ ಅಗತ್ಯ ಇಲ್ಲ ಎಂದು ಠಾಕೂರ್‌ಗೆ ಆಡ್ವಾಣಿ ತಿಳಿಸಿದರು.

Comments are closed.