ಬೆಂಗಳೂರು: ಪತ್ನಿ ಹತ್ಯೆಗೆ ಸುಪಾರಿ ನೀಡಿದ್ದ ಪತಿ ಹಾಗೂ ಆತನ ಮೂವರು ಸ್ನೇಹಿತರನ್ನು ವೈಯಾಲಿಕಾವಲ್ ಪೊಲೀಸರು ಬಂಧಿಸಿದ್ದಾರೆ.
ಪತಿ ನರೇಂದ್ರಬಾಬು, ಚಿನ್ನಸ್ವಾಮಿ, ಅಭಿಲಾಷ್ ಹಾಗೂ ಶ್ರೀಧರ್ ಬಂಧಿತ ಆರೋಪಿಗಳು. ಪತ್ನಿಯನ್ನು ದೂರ ಮಾಡಲು ಕಸರತ್ತು ನಡೆಸಿ ವಿಫಲನಾಗಿದ್ದ ಪತಿ, ಕೊಲೆ ಮಾಡಲು ತನ್ನ ಸ್ನೇಹಿತರಿಗೆ 15 ಲಕ್ಷ ರೂ. ಸುಪಾರಿ ನೀಡಿದ್ದ. ಮುಂಗಡವಾಗಿ 2 ಲಕ್ಷ ರೂ. ಕೊಟ್ಟಿದ್ದ. ವಿನುತಾಳನ್ನು ಕೊಲೆ ಮಾಡಲು ಸಂಚು ರೂಪಿಸಿದ್ದ ಸ್ನೇಹಿತರು ಮಾರಕಾಸ್ತ್ರಗಳೊಂದಿಗೆ ಆಟೋದಲ್ಲಿ ಹೊಂಚು ಹಾಕಿ ಕುಳಿತಿರುವ ಮಾಹಿತಿ ಪಡೆದ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.
ನರೇಂದ್ರ ಬಾಬು ಮತ್ತು ವಿನುತಾ 11 ವರ್ಷದ ಹಿಂದೆ ವಿವಾಹವಾಗಿದ್ದು, ದಂಪತಿಗೆ 9 ವರ್ಷದ ಮಗಳಿದ್ದಾಳೆ. ದಂಪತಿ ವೈಯಾಲಿಕಾವಲ್ನಲ್ಲಿ ವಾಸವಿದ್ದಾರೆ. ನಾಲ್ಕೈದು ವರ್ಷದ ಹಿಂದೆ ದಂಪತಿ ನಡುವೆ ಕಲಹ ಏರ್ಪಟ್ಟಿತ್ತು. ನಿತ್ಯವೂ ಜಗಳವಾಡುತ್ತಿದ್ದರು. ಈ ಹಿಂದೆ ಪತಿ ವಿರುದ್ಧ ವಿನುತಾ ವೈಯಾಲಿಕಾವಲ್ ಠಾಣೆಯಲ್ಲಿ ಐದು ದೂರು ದಾಖಲಿಸಿದ್ದರು. ಪತಿ ಕೂಡ ಪ್ರತಿ ದೂರು ನೀಡಿದ್ದ.
ಆತ್ಮಹತ್ಯೆ ಯತ್ನ
ಎರಡು ತಿಂಗಳ ಹಿಂದೆ ವಿನುತಾ ‘ನನ್ನ ಪತಿ ಕಿರುಕುಳ ನೀಡುತ್ತಿದ್ದು, ನನಗೆ ರಕ್ಷಣೆ ನೀಡಿ’ ಎಂದು ವೈಯಾಲಿಕಾವಲ್ ಠಾಣೆ ಆವರಣದಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಪೊಲೀಸರು ತಕ್ಷಣ ಆಸ್ಪತ್ರೆಗೆ ಸೇರಿಸಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದರು.
ವಿಚ್ಛೇದನ ನೀಡಿದ್ದಕ್ಕೆ ಸಿಟ್ಟು
ವೈಯಾಲಿಕಾವಲ್ನಲ್ಲಿ ತಂದೆ-ತಾಯಿಯ ಹೆಸರಿನಲ್ಲಿರುವ ಮನೆಯಲ್ಲಿ ನರೇಂದ್ರಬಾಬು ವಾಸವಾಗಿದ್ದರು. ಪತ್ನಿ ಜತೆ ಹೊಂದಾಣಿಕೆಯಿಂದ ಬಾಳ್ವೆ ನಡೆಸಲು ಆಗದ ಕಾರಣ ವಿಚ್ಛೇದನಕ್ಕೆ ಮುಂದಾಗಿದ್ದರು. ವಿಚ್ಛೇದನಕ್ಕೆ ಸಹಿ ಹಾಕುವಂತೆ ಪತ್ನಿಯನ್ನು ಹಲವು ಬಾರಿ ಒತ್ತಾಯಿಸಿದ್ದರೂ ಸಮ್ಮತಿಸಿರಲಿಲ್ಲ. ಇದರಿಂದ ಬೇಸತ್ತು ಪಾಲಕರೊಂದಿಗೆ ಬೇರೊಂದು ಮನೆಯಲ್ಲಿ ವಾಸವಿದ್ದರು. ವೈಯಾಲಿಕಾವಲ್ನಲ್ಲಿದ್ದ ಮತ್ತೊಂದು ಮನೆಯಲ್ಲಿ ವಿನುತಾ ಒಬ್ಬರೆ ಇದ್ದರು. ವಿಚ್ಛೇದನಕ್ಕೂ ಒಪ್ಪದೆ, ಮನೆಯನ್ನೂ ಖಾಲಿ ಮಾಡದ ಪತ್ನಿ ವರ್ತನೆಯಿಂದ ನರೇಂದ್ರಬಾಬು ಸಿಟ್ಟಿಗೆದ್ದು ಕೊಲೆಗೆ ಸುಪಾರಿ ನೀಡಿದ್ದರು ಎಂಬುದು ವಿಚಾರಣೆಯಲ್ಲಿ ತಿಳಿದುಬಂದಿದೆ.