ಪಾಪುಮ್ ಪರೆ: ಮುಖ್ಯ ಶಿಕ್ಷಕರ ವಿರುದ್ಧ ಕೆಟ್ಟದಾಗಿ ಬರದ ಕಾರಣಕ್ಕಾಗಿ 88 ವಿದ್ಯಾರ್ಥಿನಿಯರ ಬಟ್ಟೆಯನ್ನು ಮೂವರು ಶಿಕ್ಷಕರು ಬಲವಂತವಾಗಿ ಬಿಚ್ಚಿಸಿ ಅಮಾನವೀಯ ಕೃತ್ಯ ಮೆರೆದ ಘಟನೆ ಅರುಣಾಚಲ ಪ್ರದೇಶ ಪಾಪುಂ ಪರ್ರೆ ಜಿಲ್ಲೆಯ ಗಾಂಧಿ ಬಾಲಿಕ ವಿದ್ಯಾಲಯದಲ್ಲಿ ನಡೆದಿದೆ.
ಮುಖ್ಯ ಶಿಕ್ಷಕರ ಬಗ್ಗೆ ಕೆಟ್ಟ ಪದ ಬಳಕೆ ಮಾಡಿರುವ ಕಾರಣ ಪಾಪುಮ್ ಪರೆ ಜಿಲ್ಲೆಯ ತಾನಿ ಹಪ್ಪಾದಲ್ಲಿರುವ ವಿದ್ಯಾರ್ಥಿನಿಯರ ವಸತಿ ಶಾಲೆಯ 6 ಮತ್ತು 7ನೇ ತರಗತಿಯ ವಿದ್ಯಾರ್ಥಿನಿಯರಿಗೆ ಈ ರೀತಿಯ ಶಿಕ್ಷೆ ನೀಡಲಾಗಿದೆ.
ಘಟನೆಯನ್ನು ಖಂಡಿಸಿ ವಿದ್ಯಾರ್ಥಿನಿಯರು ಅಲ್ ಪಾಪುಮ್ ಪೆರ್ ಡಿಸ್ಟ್ರಿಕ್ಟ್ ಸ್ಟೂಡೆಂಟ್ ಯೂನಿಯನ್ (ಎಪಿಪಿಡಿಎಸ್‌ಯು) ಮತ್ತು ಆಲ್ ಸಗಾಲಿ ಸ್ಟೂಡೆಂಟ್ ಯೂನಿಯನ್ (ಎಎಸ್‌ಎಸ್‌ಯು) ಮೊರೆ ಹೋಗಿದ್ದಾರೆ.
ಎಪಿಪಿಡಿಎಸ್‌ಯು ತಂಡವು ವಿದ್ಯಾರ್ಥಿನಿಯರು ಹಾಗೂ ಶಿಕ್ಷಕರನ್ನು ಮಂಗಳವಾರ ಭೇಟಿ ಮಾಡಿದ್ದು, ವಿದ್ಯಾರ್ಥಿ ಸಂಘಟನೆಯು ಮೂವರು ಶಿಕ್ಷಕರನ್ನು ಅಮಾನತು ಮಾಡುವಂತೆ ಆಗ್ರಹಿಸಿದೆ.
‘ಘಟನೆ ಸಂಬಂಧ ವಿದ್ಯಾರ್ಥಿನಿಯರು ಶಾಲಾ ಅಧ್ಯಕ್ಷರಿಗೆ ದೂರು ನೀಡಿದ್ದಾರೆ. ಆದರೆ, ಅಧ್ಯಕ್ಷರು ವಿದ್ಯಾರ್ಥಿಗಳ ಮನವಿಯನ್ನು ಸ್ವೀಕರಿಸಿಯೇ ಇಲ್ಲ’ ಎಂದು ಎಪಿಪಿಡಿಎಸ್‌ಯು ಪ್ರಧಾನ ಕಾರ್ಯದರ್ಶಿ ಗೊಲ್ಲೋ ಲ್ಯಾಂಟೊ ತಿಳಿಸಿದ್ದಾರೆ.