ರಾಷ್ಟ್ರೀಯ

ಬಿಜೆಪಿಗೆ ಗುಡ್ ಬೈ ಹೇಳಿ ‘ಕೈ’ ಹಿಡಿಯಲು ಮುಂದಾಗಿರುವ ವರುಣ್‌ ಗಾಂಧಿ !

Pinterest LinkedIn Tumblr

ಹೊಸದಿಲ್ಲಿ: ಮಹತ್ವದ ರಾಜಕೀಯ ವಿದ್ಯಮಾನವೊಂದರಲ್ಲಿ ಬಿಜೆಪಿ ಸಂಸದ ವರುಣ್‌ ಗಾಂಧಿ ಅವರು ಕಾಂಗ್ರೆಸ್‌ ಸೇರ್ಪಡೆಯಾಗಲಿದ್ದಾರೆ ಎನ್ನಲಾಗಿದೆ.

ರಾಹುಲ್‌ ಗಾಂಧಿ ಅವರು ಪಕ್ಷದ ಅಧ್ಯಕ್ಷರಾಗುತ್ತಿದ್ದಂತೆ ಸುಲ್ತಾನ್‌ಪುರದ ಸಂಸದ ವರುಣ್‌ ಗಾಂಧಿ ಕಾಂಗ್ರೆಸ್‌ನತ್ತ ಮುಖ ಮಾಡಲಿದ್ದಾರೆ ಎನ್ನಲಾಗಿದೆ.

ಹಿರಿಯ ಕಾಂಗ್ರೆಸ್‌ ನಾಯಕ ಹಾಜಿ ಮಂಜೂರ್‌ ಅಹಮದ್‌ ಅವರು ಇಂಡಿಯಾ ಟುಡೇಗೆ ನೀಡಿದ ಸಂದರ್ಶನದಲ್ಲಿ ‘ವರುಣ್ ಅವರನ್ನು ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಸದಸ್ಯರನ್ನಾಗಿ ಇಲ್ಲವೆ ಅಥವಾ ಕಚೇರಿಯ ಪ್ರಮುಖರನ್ನಾಗಿ ನೇಮಕ ಮಾಡಿಕೊಳ್ಳಬಹುದು’ ಎಂದಿದ್ದಾರೆ.

ಇದೇ ವೇಳೆ ‘ಪ್ರಿಯಾಂಕಾ ಗಾಂಧಿ ವಾದ್ರಾ ಅವರು ವರುಣ್‌ ಗಾಂಧಿ ಅವರ ಪಕ್ಷ ಸೇರ್ಪಡೆಯಲ್ಲಿ ವೇಗವರ್ಧಕವಾಗಿ ಪಾತ್ರ ವಹಿಸಲಿದ್ದಾರೆ’ಎಂದಿದ್ದಾರೆ.

ಇನ್ನೊಂದೆಡೆ ಆಗ್ರಾದ ನಗರ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ರಾಮ್‌ ಟೆಂಡನ್‌ ಅವರೂ ವರುಣ್‌ ಕಾಂಗ್ರೆಸ್‌ ಸೇರ್ಪಡೆಯಾಗಲಿದ್ದಾರೆ ಎಂದು ಬಹಿರಂಗ ಹೇಳಿಕೆ ನೀಡಿದ್ದಾರೆ.

2009 ರ ಲೋಕಸಭಾ ಚುನಾವಣೆ ವೇಳೆ ಹಿಂದುತ್ವದ ಪರವಾಗಿ ಪ್ರಚೋದನಕಾರಿ ಭಾಷಣ ಮಾಡುವ ಮೂಲಕ ಫೈರ್‌ ಬ್ರ್ಯಾಂಡ್‌ ಆಗಿ ಭಾರೀ ಸುದ್ದಿಯಾಗಿದ್ದ ವರುಣ್‌ ಗಾಂಧಿ ಇತ್ತೀಚೆಗೆ ರೋಹಿಂಗ್ಯಾ ಮುಸ್ಲಿಮರ ಪರ ಮಾತನಾಡುವ ಮೂಲಕ ಕೇಂದ್ರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು ಮತ್ತು ಸಾಮಾಜಿಕ ತಾಣಗಳಲ್ಲಿ ಟ್ರೋಲ್‌ ಆಗಿದ್ದರು.

ವರುಣ್‌ ಅವರ ತಾಯಿ ಮನೇಕಾ ಗಾಂಧಿ ಅವರು ಪ್ರಧಾನಿ ಮೋದಿ ಅವರ ಸಂಪುಟದ ಪ್ರಮುಖ ಸಚಿವೆಯಾಗಿದ್ದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ನಿರ್ವಹಿಸುತ್ತಿದ್ದಾರೆ.

Comments are closed.