ರಾಷ್ಟ್ರೀಯ

ಕಾಂಗ್ರೆಸ್ ಗೆ ನೀಡಿರುವ ಬೆಂಬಲ ಹಿಂಪಡೆಯುತ್ತೇವೆ, ಕೈ ವಿರುದ್ಧ ಪ್ರತಿಭಟನೆ: ಪಟೇಲ್ ಸಮುದಾಯ

Pinterest LinkedIn Tumblr

ಅಹ್ಮದಾಬಾದ್: ಟಿಕೆಟ್ ಹಂಚಿಕೆ ವಿಚಾರ ಸಂಬಂಧ ಪಾಟಿದಾರ್ ಸಮುದಾಯ ಹಾಗೂ ಕಾಂಗ್ರೆಸ್ ಪಕ್ಷದ ನಡುವೆ ಅಸಮಾಧಾನ ಸ್ಫೋಟಗೊಂಡಿದ್ದು, ಕಾಂಗ್ರೆಸ್ ಪಕ್ಷಕ್ಕೆ ನೀಡಿರುವ ಬೆಂಬಲವನ್ನು ಹಿಂಪಡೆಯುತ್ತೇವೆ ಎಂದು ಪಟೇಲ್ ಸಮುದಾಯದ ಮುಖಂಡರು ಹೇಳಿದ್ದಾರೆ.

ಟಿಕೆಟ್ ಹಂಚಿಕೆ ವಿಚಾರವಾಗಿ ಪಾಟಿದಾರ್ ಸಮುದಾಯದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಕಾಂಗ್ರೆಸ್ ಕಾರ್ಯಕರ್ತರು ನಿನ್ನೆ ಸೂರತ್ ಮತ್ತು ಅಹ್ಮದಾಬಾದ್ ನಲ್ಲಿ ಅವರ ಮೇಲೆ ದಾಳಿ ನಡೆಸಿದ್ದರು. ಅಂತೆಯೇ ತಮ್ಮದೇ ಪಕ್ಷದ ಕಚೇರಿಗಳ ಮೇಲೆ ದಾಳಿ ಮಾಡಿ ಪೀಠೋಪಕರಣಗಳನ್ನು ಧ್ವಂಸ ಮಾಡಿದ್ದರು. ಕಾಂಗ್ರೆಸ್ ಪಾಟಿದಾರ್ ಸಮುದಾಯದ ನಡುವಿನ ಟಿಕೆಟ್ ಹಂಚಿಕೆ ಒಪ್ಪಂದದಿಂದಾಗಿ ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೆ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿದ್ದರು.

ಈ ಹಿನ್ನಲೆಯಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಪಟೇಲ್ ಸಮುದಾಯದ ಮುಖಂಡ ಹಾಗೂ ಪಾಸ್ (ಪಾಟಿದಾರ್ ಅನಾಮತ್ ಆಂದೋಲನ್ ಸಮಿತಿ) ಸದಸ್ಯ ದಿನೇಶ್ ಪಟೇಲ್, ಕಾಂಗ್ರೆಸ್ ಪಕ್ಷಕ್ಕೆ ನೀಡಿರುವ ಬೆಂಬಲವನ್ನು ನಾವು ವಾಪಸ್ ಪಡೆಯುವ ಕುರಿತು ಯೋಚಿಸುತ್ತಿದ್ದೇವೆ. ನಿನ್ನೆ ಪಟೇಲ್ ಸಮುದಾಯದ ಕಾರ್ಯಕರ್ತರ ಮೇಲೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ದಾಳಿ ನಡೆಸಿದ್ದು, ಅಕ್ಷಮ್ಯ. ಹೀಗಾಗಿ ಕಾಂಗ್ರೆಸ್ ಪಕ್ಷದ ವಿರುದ್ಧ ಪಾಸ್ ಸಂಘಟನೆ ಪ್ರತಿಭಟನೆ ನಡೆಸಲಿದೆ. ಈಗಾಗಲೇ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ತೆಗೆದುಕೊಂಡಿರುವ ಸಮುದಾಯದ ನಾಯಕರು ನಾಮಪತ್ರ ಸಲ್ಲಿಸದಂತೆ ಹೇಳಲಾಗಿದೆ. ಒಂದು ವೇಳೆ ಸಮುದಾಯದ ಮಾತು ಮೀರಿ ಯಾರಾದರೂ ನಾಮಪತ್ರ ಸಲ್ಲಿಕೆ ಮಾಡಿದರೆ ಅವರ ವಿರುದ್ಧವೂ ಪ್ರತಿಭಟನೆ ನಡೆಸುತ್ತೇವೆ. ಸಣ್ಣ ಸಮಸ್ಯೆಯನ್ನು ಬಗೆಹರಿಸದ ಪಕ್ಷದಿಂದ ರಾಜ್ಯದ ಜನತೆ ಮತ್ತು ಅವರ ಸಮಸ್ಯೆಗಳನ್ನು ಹೇಗೆ ನಿಯಂತ್ರಿಸಲು ಸಾಧ್ಯ ಎಂದು ದಿನೇಶ್ ಪಟೇಲ್ ಪ್ರಶ್ನಿಸಿದರು.

Comments are closed.