ರಾಷ್ಟ್ರೀಯ

ರಸ್ತೆಬದಿ ಮೂತ್ರ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಟೀಕೆಗೆ ಗುರಿಯಾದ ಮಹಾರಾಷ್ಟ್ರ ಸಚಿವ

Pinterest LinkedIn Tumblr

ಮುಂಬೈ: ಬಯಲು ಶೌಚ ಮುಕ್ತ ಭಾರತಕ್ಕಾಗಿ ಕೇಂದ್ರದ ಬಿಜೆಪಿ ಸರ್ಕಾರ ಯೋಜನೆ ರೂಪಿಸಿ ಅದರ ಯಶಸ್ಸಿಗಾಗಿ ಶ್ರಮಿಸುತ್ತಿದ್ದರೆ, ಈಗ ಅದೇ ಬಿಜೆಪಿಯ ಸಚಿವರೊಬ್ಬರು ರಸ್ತೆ ಬದಿಯಲ್ಲಿ ಮೂತ್ರ ಮಾಡುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಟೀಕೆಗೆ ಗುರಿಯಾಗಿದ್ದಾರೆ.

ಮಹಾರಾಷ್ಟ್ರದ ನೀರಾವರಿ ಸಚಿವ ರಾಮ್ ಶಿಂಡೆ ಸೋಲಾಪುರ-ಬಾರ್ಷಿ ಹೆದ್ದಾರಿಯಲ್ಲಿ ಸಾಗುತ್ತಿದ್ದಾಗ ರಸ್ತೆ ಬದಿಯಲ್ಲಿ ಕಾರು ನಿಲ್ಲಿಸಿ ಮೂತ್ರ ಮಾಡಿದ್ದಾರೆ. ಸಚಿವರು ಮೂತ್ರ ಮಾಡುವುದನ್ನು ದಾರಿ ಹೋಕರು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಆಪ್ಲೋಡ್ ಮಾಡಿದ್ದಾರೆ. ಸಚಿವ ಈ ಕ್ರಿಯೆಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಟೀಕೆಗಳು ವ್ಯಕ್ತವಾಗುತ್ತಿವೆ. ಇನ್ನು ಸಚಿವರ ಈ ಯಡವಟ್ಟನ್ನೇ ಹಿನ್ನಲೆಯಾಗಿಟ್ಟುಕೊಂಡ ಎನ್ ಸಿಪಿ ಮುಖಂಡ ಹಾಗೂ ಪಕ್ಷದ ವಕ್ತಾರ ನವಾಬ್ ಮಲ್ಲಿಕ್, ಇದು ಪ್ರಧಾನಿ ನರೇಂದ್ರ ಮೋದಿ ಅವರ ಸ್ವಚ್ಛ ಭಾರತ ಅಭಿಯಾನದ ದೂರದೃಷ್ಟಿಯನ್ನು ತೋರುತ್ತಿದೆ ಎಂದು ವ್ಯಂಗ್ಯವಾಡಿದ್ದಾರೆ.

ಹೆದ್ದಾರಿಗಳಲ್ಲಿ ಶೌಚಾಲಯಗಳಿಲ್ಲದೇ ಸಾರ್ವಜನಿಕರು ಬಯಲಲ್ಲೇ ಶೌಚ ಮಾಡುತ್ತಿದ್ದಾರೆ. ಹೀಗಿರುವಾಗ ಕೇಂದ್ರದ ಯೋಜನೆಯ ಪ್ರತಿಫಲವೇನು ಎಂದು ಪ್ರಶ್ನಿಸಿದ್ದಾರೆ. ಕೇಂದ್ರ ಸರ್ಕಾರ ಸ್ವಚ್ಛ ಭಾರತ ಯೋಜನೆ ಹೆಸರಲ್ಲಿ ಸಾರ್ವಜನಿಕರಿಂದ ಹಣ ಲೂಟಿ ಮಾಡುತ್ತಿದೆ ಎಂದು ಅವರು, ಕೇಂದ್ರ ಸರ್ಕಾರದ ಸ್ವಚ್ಛಭಾರತ ಅಭಿಯಾನ ಯೋಜನೆ ಸಂಪೂರ್ಣ ವಿಫಲ ಎಂದು ಹೇಳಿದರು.

ಅನಾರೋಗ್ಯದಿಂದಾಗಿ ರಸ್ತೆ ಬದಿ ಮಾಡಬೇಕಾಯಿತು: ಸಚಿವ ರಾಮ್ ಶಿಂಡೆ
ಇನ್ನು ತಮ್ಮ ಕೃತ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆಗಳು ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಹಾರಾಷ್ಟ್ರ ನೀರಾವರಿ ಸಚಿವ ರಾಮ್ ಶಿಂಡೆ, ಕಳೆದ ಮೂರು ದಿನಗಳಿಂದ ತಾವು ಸತತವಾಗಿ ಪ್ರಯಾಣ ಮಾಡುತ್ತಿದ್ದೇನೆ. ಹೀಗಾಗಿ ಕೊಂಚ ಆರೋಗ್ಯ ಕೆಟ್ಟಿದ್ದು, ನೆಗಡಿ, ಶೀತ ಹಾಗೂ ಜ್ವರದಿಂದ ಬಳಲುತ್ತಿದ್ದೇನೆ. ದಾರಿ ಮಧ್ಯೆ ಮೂತ್ರಕ್ಕೆ ಅವಸರವಾದಾಗ ಶೌಚಾಲಯದ ವರೆಗೂ ಕಾಯುವ ಶಕ್ತಿ ಇರಲಿಲ್ಲವಾದ್ದರಿಂದ ರಸ್ತೆ ಬದಿಯಲ್ಲಿ ಮೂತ್ರ ಮಾಡಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.

Comments are closed.