ಬಲಿಯಾ (ಉತ್ತರ ಪ್ರದೇಶ): ರಾಮ ಮಂದಿರ ವಿವಾದ ಇತ್ಯರ್ಥಗೊಳಿಸಲು ಅವಿರತ ಶ್ರಮಿಸುತ್ತಿರುವ ಆರ್ಟ್ ಆಫ್ ಲಿವಿಂಗ್ ಸಂಸ್ಥಾಪಕ ಶ್ರೀ ಶ್ರೀ ರವಿಶಂಕರ್ ಗುರೂಜಿ ಅವರನ್ನು ಹಿಂದೂ ಮತ ಬ್ಯಾಂಕ್ ಸೆಳೆಯುವ ನಿಟ್ಟಿನಲ್ಲಿ ಬಿಜೆಪಿ ದಾಳವಾಗಿ ಬಳಸಿಕೊಳ್ಳುತ್ತಿದೆ ಎಂದು ಸಮಾಜವಾದಿ ಪಕ್ಷದ ಹಿರಿಯ ಮುಖಂಡರೊಬ್ಬರು ದೂರಿದ್ದಾರೆ.
ಸುಪ್ರೀಂ ಕೋರ್ಟ್‌ನಲ್ಲಿ ಡಿಸೆಂಬರ್ 5ರಂದು ಅಯೋಧ್ಯೆಯ ರಾಮ ಜನ್ಮಭೂಮಿ-ಬಾಬ್ರಿ ಮಸೀದಿ ಪ್ರಕರಣದ ವಿಚಾರಣೆ ಆರಂಭಗೊಳ್ಳುವುದು ಬಾಕಿ ಇದೆ. ಏತನ್ಮಧ್ಯೆ,ಶ್ರೀ ಶ್ರೀ ರವಿಶಂಕರ್ ಅವರು ವಿವಾದ ಇತ್ಯರ್ಥಕ್ಕೆ ಸ್ವಇಚ್ಚೆಯಿಂದ ಮಧ್ಯಸ್ಥಿಕೆ ವಹಿಸಲು ತೀರ್ಮಾನಿಸಿದ್ದು, ಆ ನಿಟ್ಟಿನಲ್ಲಿ ಈಗಾಗಲೇ ಕಾರ್ಯಪ್ರವೃತ್ತರಾಗಿದ್ದಾರೆ ಕೂಡ.
ಶನಿವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಮಾಜವಾದಿ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮಶಂಕರ ವಿದ್ಯಾರ್ಥಿ ಅವರು, ”ಜನರಿಗೆ ವಾಸ್ತವ ಸಂಗತಿಯ ಅರಿವಾಗಿದೆ ಎಂಬುದು ಬಿಜೆಪಿಗೆ ಈಗಾಗಲೇ ಮನವರಿಕೆಯಾಗಿರುವ ಹಿನ್ನೆಲೆಯಲ್ಲಿ ರವಿಶಂಕರ್ ಅವರು ಇದೀಗ ಅದರ ಪಾಲಿಗೆ ದಾಳವಾಗಿದ್ದಾರೆ. ಹಿಂದೂ ಮತಗಳನ್ನು ಧ್ರುವೀಕರಿಸುವ ಉದ್ದೇಶದಿಂದ ಧಾರ್ಮಿಕ ಗುರುಗಳನ್ನು ಅಖಾಡಕ್ಕಿಳಿಸಿ ರಾಮ ಮಂದಿರ ವಿವಾದದ ಬೆಂಕಿಗೆ ಅವರು ತುಪ್ಪ ಸುರಿಯುತ್ತಿದ್ದಾರೆ,” ಎಂದು ಕಿಡಿ ಕಾರಿದರು.
”ರಾಮ ಮಂದಿರವನ್ನು ನ್ಯಾಯಾಲಯದ ತೀರ್ಪಿನನ್ವಯ ಅಥವಾ ಪರಸ್ಪರ ಒಪ್ಪಿಗೆ ಮೂಲಕ ನಿರ್ಮಿಸುವುದೇ ಆಗಿದ್ದಲ್ಲಿ ಬಿಜೆಪಿ ಏಕೆ ‘ರಥ ಯಾತ್ರೆ’ ಕೈಗೊಳ್ಳಬೇಕಿತ್ತು? ಅಥವಾ ಅದನ್ನು ಏಕೆ ಚುನಾವಣಾ ವಿಷಯವಾಗಿ ಮಾಡಬೇಕಿತ್ತು? ಪ್ರಸ್ತುತ ಕೇಂದ್ರ ಹಾಗೂ ರಾಜ್ಯಗಳೆರಡರಲ್ಲೂ ಬಿಜೆಪಿ ಸರಕಾರಗಳಿವೆ. ಈಗ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮಾಡಲು ಹೊರಟಿರುವ ಬಿಜೆಪಿಗೆ ತಡೆಯೊಡ್ಡಲು ಯಾರಿಗಾದರೂ ಸಾಧ್ಯವಿದೆಯೇ,” ಎಂದು ವಿದ್ಯಾರ್ಥಿ ಪ್ರಶ್ನಿಸಿದ್ದಾರೆ.