ರಾಷ್ಟ್ರೀಯ

ರ‍್ಯಾಗಿಂಗ್‌: ಬಿಹಾರದ ಮೆಡಿಕಲ್‌ ಕಾಲೇಜಿನ 54 ವಿದ್ಯಾರ್ಥಿನಿಯರಿಗೆ ತಲಾ 25,000 ರೂ ದಂಡ

Pinterest LinkedIn Tumblr


ದರ್ಭಾಂಗ (ಬಿಹಾರ): ರ‍್ಯಾಗಿಂಗ್‌ ಪ್ರಕರಣದ ಹಿನ್ನೆಲೆಯಲ್ಲಿ ದರ್ಭಾಂಗ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ (ಡಿಎಂಸಿಎಚ್‌) 54 ವಿದ್ಯಾರ್ಥಿನಿಯರಿಗೆ ತಲಾ 25,000 ರೂ.ಗಳ ದಂಡ ವಿಧಿಸಲಾಗಿದೆ.

ಎರಡು ವಾರಗಳ ಅವಧಿಯಲ್ಲಿ ರಾಜ್ಯದಲ್ಲಿ ರ‍್ಯಾಗಿಂಗ್‌ಗೆ ಸಂಬಂಧಿಸಿ ಮೆಡಿಕಲ್‌ ವಿದ್ಯಾರ್ಥಿಗಳಿಗೆ ದಂಡ ವಿಧಿಸಿರುವ ಎರಡನೇ ಪ್ರಕರಣ ಇದಾಗಿದೆ.

ದಂಡ ವಿಧಿಸಲಾದ ವಿದ್ಯಾರ್ಥಿಗಳಲ್ಲಿ ದ್ವಿತೀಯ ವರ್ಷ ಹಾಗೂ ಪ್ರಥಮ ವರ್ಷದ ವಿದ್ಯಾರ್ಥಿನಿಯರೂ ಸೇರಿದ್ದಾರೆ. ಹಿರಿಯ ವಿದ್ಯಾರ್ಥಿಗಳು ರ‍್ಯಾಗಿಂಗ್‌ ನಡೆಸಿದ್ದಕ್ಕೆ ದಂಡ ವಿಧಿಸಲಾಗಿದ್ದರೆ, ತಮಗೆ ಕಿರುಕುಳ ನೀಡಿದವರ ಗುರುತು ತಿಳಿಸಲು ನಿರಾಕರಿಸಿದ್ದಕ್ಕೆ ಕಿರಿಯ ವಿದ್ಯಾರ್ಥಿಗಳಿಗೆ ದಂಡ ವಿಧಿಸಲಾಗಿದೆ.

ರ‍್ಯಾಗಿಂಗ್‌ ಕುರಿತು ಪ್ರಥಮ ವರ್ಷದ ವಿದ್ಯಾರ್ಥಿಯೊಬ್ಬರು ಭಾರತೀಯ ವೈದ್ಯ ಮಂಡಳಿ (ಎಂಸಿಐ)ಗೆ ದೂರು ನೀಡಿದ್ದಾರೆ ಎಂದು ಡಿಎಂಸಿಎಚ್‌ ಪ್ರಿನ್ಸಿಪಾಲ್‌ ಡಾ. ಆರ್‌.ಕೆ ಸಿನ್ಹಾ ತಿಳಿಸಿದರು.

‘ಎಂಸಿಐ ಶುಕ್ರವಾರ ಈ ವಿಚಾರವನ್ನು ನನ್ನ ಗಮನಕ್ಕೆ ತಂದಿದ್ದು, ತಪ್ಪಿತಸ್ಥರ ವಿರುದ್ಧ ಕೈಗೊಂಡ ಕ್ರಮದ ವರದಿ ಕೇಳಿದೆ. ತಕ್ಷಣವೇ ಕಾಲೇಜಿನ ರ‍್ಯಾಗಿಂಗ್‌ ವಿರೋಧಿ ಸಮಿತಿಯ ಸಭೆ ಕರೆದು ಶಿಸ್ತುಕಲ್ರಮದ ನಿರ್ಧಾರ ಕೈಗೊಳ್ಳಲಾಯಿತು’ ಎಂದು ಅವರು ತಿಳಿಸಿದರು.

ಸಮಿತಿಯ ಸದಸ್ಯರು ವಿದ್ಯಾರ್ಥಿನಿಯರ ಹಾಸ್ಟೆಲ್‌ಗೆ ಭೇಟಿ ನೀಡಿ ತನಿಖೆ ನಡೆಸಿದರು. ಆದರೆ ಯಾವ ವಿದ್ಯಾರ್ಥಿಗಳೂ ರ‍್ಯಾಗಿಂಗ್‌ ನಡೆದಿರುವುದನ್ನು ದೃಢೀಕರಿಸಲಿಲ್ಲ.

‘ಎಂಸಿಐ ನಿಯಮದಂತೆ, ಇಂತಹ ಪ್ರಕರಣಗಳಲ್ಲಿ ಹಾಸ್ಟೆಲ್‌ನ ಎಲ್ಲ ವಿದ್ಯಾರ್ಥಿನಿಯರಿಗೂ ತಲಾ 25,000 ರೂ ದಂಡ ವಿಧಿಸಲಾಗಿದೆ. ನವೆಂಬರ್‌ 25ರ ಒಳಗೆ ಈ ದಂಡ ಪಾವತಿಸಬೇಕು, ಇಲ್ಲದಿದ್ದರೆ ಮುಂದಿನ ಶಿಸ್ತುಕ್ರಮವನ್ನು ತೀರ್ಮಾನಿಸಲಾಗುವುದು’ ಎಂದು ಪ್ರಿನ್ಸಿಪಾಲ್‌ ವಿವರಿಸಿದರು.

ಈ ತಿಂಗಳ ಆರಂಭದಲ್ಲಿ ಭಾಗಲ್ಪುರದ ಜವಾಹರಲಾಲ್ ನೆಹರೂ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲೂ ಇಂತಹದೇ ರ‍್ಯಾಗಿಂಗ್‌ ಪ್ರಕರಣದ ದೂರು ಬಂದಿತ್ತು. ಅಲ್ಲಿಯೂ ರ‍್ಯಾಗಿಂಗ್‌ ನಡೆಸಿದ 33 ಹಿರಿಯ ವಿದ್ಯಾರ್ಥಿಗಳಿಗೆ ತಲಾ 25,000 ರೂ ದಂಡ ವಿಧಿಸಲಾಗಿತ್ತು.

Comments are closed.