ರಾಷ್ಟ್ರೀಯ

ಅರುಣಾಚಲ ಪ್ರದೇಶದ ಈ ಪಟ್ಟಣದಲ್ಲಿ ಸಿಮೆಂಟ್‌ ಚೀಲಕ್ಕೆ 8,000 ರೂ.

Pinterest LinkedIn Tumblr


ಇಟಾನಗರ: ನಂಬಿದ್ರೆ ನಂಬಿ, ಬಿಟ್ರೆ ಬಿಡಿ; ಅರುಣಾಚಲ ಪ್ರದೇಶದ ವಿಜಯನಗರ ಪಟ್ಟಣದಲ್ಲಿ ಜನರು ಒಂದು ಚೀಲ ಸಿಮೆಂಟ್‌ಗೆ 8,000 ರೂ. ತೆರುತ್ತಾರೆ – ಅದೂ ಸಿಮೆಂಟ್‌ ಸಿಗುತ್ತದೆ ಎಂದಾದರೆ !

ಶಾಂಗ್‌ಲಾಂಗ್‌ ಜಿಲ್ಲೆಯ ಉಪ ವಿಭಾಗೀಯ ಪಟ್ಟಣವಾಗಿರುವ ವಿಜಯನಗರದಲ್ಲಿರುವುದು ಕೇವಲ 1,500 ಮಂದಿ. ಈ ಪಟ್ಟಣವನ್ನು ತಲುಪಲು ಸರಿಯಾದ ರಸ್ತೆ ಇಲ್ಲ. ಜನರು ಸಮೀಪದ ಮಿಯಾವೋ ಪಟ್ಟಣವನ್ನು ತಲುಪಲು ಐದು ದಿನಗಳ ಕಾಲ ನಡೆದುಕೊಂಡೇ ಸಾಗಬೇಕಾಗುತ್ತದೆ.

ವಾರಕ್ಕೊಮ್ಮೆ ವಿಜಯನಗರ ಪಟ್ಟಣಕ್ಕೆ ಆವಶ್ಯಕ ವಸ್ತುಗಳನ್ನು ಹೆಲಿಕಾಪ್ಟರ್‌ ಮೂಲಕ ಪೂರೈಸುವ ವ್ಯವಸ್ಥೆ ಇದೆ; ಆದರೆ ಹವಾಮಾನ ಪರಿಸ್ಥಿತಿ ಅನುಕೂಲಕರವಾಗಿ ಇದ್ದರೆ ಮಾತ್ರವೇ ಇದು ಸಾಧ್ಯ. ಇಲ್ಲದಿದ್ದರೆ ಅದೂ ಇಲ್ಲ !

ವಿಜಯನಗರ ಪಟ್ಟಣದಲ್ಲಿ ಬಹುತೇಕ ನಿವಾಸಿಗಳು ಚಕ್‌ಮಾ ಮತ್ತು ಹಜೋಂಗ್‌ ಸಮುದಾಯದವರು. ಇವರು ಸಿಮೆಂಟ್‌ ಚೀಲ ಒಂದಕ್ಕೆ 8,000 ರೂ. ಕೊಡಬೇಕಾಗುತ್ತದೆ. ಒಂದು ಡಬ್ಲ್ಯು.ಸಿ. ಪ್ಯಾನ್‌ ಕೊಳ್ಳಲು 2,000 ರೂ. ಕೊಡಬೇಕಾಗುತ್ತದೆ ಎಂದು ಸಾರ್ವಜನಿಕ ಆರೋಗ್ಯ ಇಂಜಿನಿಯರಿಂಗ್‌ ಡಿಪಾರ್ಟ್‌ಮೆಂಟ್‌ನ ಜೂನಿಯರ್‌ ಇಂಜಿನಿಯರ್‌ ಜುಮ್‌ಲೀ ಅಡೋ ಹೇಳುತ್ತಾರೆ.

ಪಿಎಚ್‌ಇ ಇಲಾಖೆಯು ಇಲ್ಲಿನ ಜನರಿಗೆ ಪ್ರತೀ ಮನೆಗೆ ಈಗ ಶೌಚಾಲಯವನ್ನು ನಿರ್ಮಿಸಿಕೊಡಲು ಮುಂದಾಗಿದೆ. ಇದಕ್ಕೆ ಕೇಂದ್ರದಿಂದ ತಲಾ 10,800 ರೂ. ಮತ್ತು ರಾಜ್ಯ ಸರಕಾರದಿಂದ 9,200 ರೂ. ಸಹಾಯಧನ ಸಿಗುತ್ತಿದೆ.

ವಿಜಯನಗರ ಪಟ್ಟಣಕ್ಕೆ ಬರುವ ಎಲ್ಲ ಆವಶ್ಯಕ ಸಾಮಗ್ರಿಗಳು ಭಾರತ-ಚೀನ-ಮ್ಯಾನ್‌ಮಾರ್‌ ಟ್ರೈ ಜಂಕ್ಷನ್‌ ಮಾರ್ಗವಾಗಿ ನಾಮ್‌ದಫಾ ನ್ಯಾಶನಲ್‌ ಪಾರ್ಕ್‌ ಮೂಲಕ ಚಕ್‌ಮಾಗಳಿಂದ ಬರಬೇಕಾಗುತ್ತದೆ. ಹಾಗಾಗಿಯೇ ಇಲ್ಲಿ 150 ಕಿಲೋ ಸಿಮೆಂಟ್‌ ಚೀಲಕ್ಕೆ 8,000 ರೂ. ಬೆಲೆ ಎಂದು ಅಡೋ ಹೇಳುತ್ತಾರೆ.

ಚಕ್‌ಮಾಗಳು ಎಲ್ಲ ಆವಶ್ಯಕ ಸಾಮಗ್ರಿಗಳನ್ನು ಐದು ದಿನಗಳ ಕಾಲ್ನಡಿಗೆಯಲ್ಲಿ ಸಾಗಿ 156 ಕಿ.ಮೀ. ದೂರವನ್ನು ಕ್ರಮಿಸುವುದು ಅನಿವಾರ್ಯ. ಅಂತೆಯೇ ಪರ್ವತಮಯ ಅರುಣಾಚಲ ಪ್ರದೇಶದ ಜನರ ಸಂಪರ್ಕ ದುಸ್ಥಿತಿಗಳು ದೇವರಿಗೇ ಪ್ರೀತಿ.

ಹಾಗಿದ್ದರೂ ವಿಜಯ ನಗರ ಪಟ್ಟಣಕ್ಕೆ ಈಗಿನ್ನು ರಸ್ತೆ ನಿರ್ಮಾಣದ ಯೋಜನೆಗೆ ರಾಜ್ಯ ಸರಕಾರ ಅನುಮೋದನೆ ನೀಡಿದೆ; ಬೇಗನೆ ಇದು ಅನುಷ್ಠಾನವಾಗಲಿದೆ ಎಂದು ಮಿಯಾವೋ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ರಾಜ್ಯದ ನಾಗರಿಕ ಪೂರೈಕೆ ಸಚಿವ ಕಮಲೂಂಗ್‌ ಮಸ್ಸಾಂಗ್‌ ಹೇಳುತ್ತಾರೆ.

-ಉದಯವಾಣಿ

Comments are closed.