ರಾಷ್ಟ್ರೀಯ

ಮೋದಿ ಸರ್ಕಾರದ ಹೊಸ ಟಾರ್ಗೆಟ್ 1+1+1 ಯೋಜನೆ!

Pinterest LinkedIn Tumblr


ನವದೆಹಲಿ: ಆಧಾರ್ ಸಂಖ್ಯೆಗೆ ಮೊಬೈಲ್ ಸಂಖ್ಯೆ ಹಾಗೂ ಬ್ಯಾಂಕ್ ಖಾತೆಗಳನ್ನು ಜೋಡಿಸುವ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಪರ-ವಿರೋಧ ನಿಲುವುಗಳು ವ್ಯಕ್ತವಾಗುತ್ತಿರುವಂತೆಯೇ, ಕೇಂದ್ರ ಸರ್ಕಾರ ಹೊಸ ಮೂರು ಬಿಲಿಯನ್ ಯೋಜನೆಯೊಂದನ್ನು ಹಾಕಿಕೊಂಡಿದೆ.

ನೋಟು ನಿಷೇಧ, ಜಿಎಸ್‌ಟಿ ಮತ್ತು ಆಧಾರ್ ಜೋಡಣೆಯಂತಹ ಸುಧಾರಣಾ ಕ್ರಮಗಳನ್ನು ಕೈಗೊಂಡಿರುವ ಕೇಂದ್ರ ಸರ್ಕಾರ ಈಗ 1+1+1 ಬಿಲಿಯನ್‌ ಗುರಿಯನ್ನು ಹೊಂದಿದೆ ಎಂದು ಹೇಳಲಾಗಿದೆ. ಆಂಗ್ಲ ದೈನಿಕವೊಂದರ ವರದಿಯಲ್ಲಿರುವಂತೆ 1+1+1 ಬಿಲಿಯನ್‌ ಎಂದರೆ 100 ಕೋಟಿ ಆಧಾರ್‌ ಕಾರ್ಡ್‌, 100 ಕೋಟಿ ಬ್ಯಾಂಕ್‌ ಖಾತೆ, 100 ಕೋಟಿ ಮೊಬೈಲ್‌ ಸಿಮ್‌ ಜತೆ ಜೋಡಣೆ ಮಾಡುವ ಗುರಿಯನ್ನು ಹೊಂದಲಾಗಿದೆ. ಆದರೆ ಈ ಗುರಿ ಸಾಧನೆಗೆ ಕೇಂದ್ರ ಸರ್ಕಾರ ಅಧಿಕಾರಿಗಳಿಗೆ ಯಾವುದೇ ರೀತಿಯ ಗಡವು ಅಥವಾ ಸಮಯಾವಧಿ ನೀಡಿಲ್ಲ ಎಂದು ಹೇಳಲಾಗಿದೆ.

ಮೂಡಿ ರೇಟಿಂಗ್ ಸಂಸ್ಥೆಯಲ್ಲಿ ಭಾರತ ಮೇಲ್ದರ್ಜೆಗೇರಿದ್ದು, ಹಾಗೂ ಸುಗಮ ವಹಿವಾಟು ದೇಶಗಳ ಪಟ್ಟಿಯಲ್ಲಿ 30 ಸ್ಥಾನ ಏರಿಕೆ ಕಂಡಿರುವ ಹಿನ್ನಲೆಯಲ್ಲಿ ಉತ್ತೇಜನಗೊಂಡಿರುವ ಕೇಂದ್ರದ ಮೋದಿ ಸರ್ಕಾರ ಈಗ ಹೊಸದೊಂದು ಯೋಜನೆಗೆ ನಾಂದಿ ಹಾಡಿದೆ. ಅದರಂತೆ ಮುಂದಿನ ದಿನಗಳಲ್ಲಿ ಒಂದು ಬಿಲಿಯನ್ ಆಧಾರ್ ಸಂಖ್ಯೆ ಒಂದು ಬಿಲಿಯನ್ ಮೊಬೈಲ್ ಸಂಖ್ಯೆ ಮತ್ತು ಒಂದು ಬಿಲಿಯನ್ ಬ್ಯಾಂಕ್ ಖಾತೆಗಳನ್ನು ಜೋಡಿಸುವ ಯೋಜನೆ ಹೊಂದಲಾಗಿದೆ. ಈ ಬಗ್ಗೆ ಈ ನೂತನ ಗುರಿಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಸಂಬಂಧ ಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.

ನೋಟು ನಿಷೇಧ ಬಳಿಕ ಭಾರತದಲ್ಲಿ ನಗದು ಚಲಾವಣೆ ಕಡಿಮೆಯಾಗಿದ್ದು, ಡಿಜಿಟಲೀಕರಣದಿಂದಾಗಿ ಕ್ಯಾಶ್ ಲೆಸ್‌ ವ್ಯವಸ್ಥೆ ಹೆಚ್ಚಾಗಿ ಬಳಕೆಯಾಗುತ್ತಿದೆ. ಇದರಿಂದ ಇನ್ನಷ್ಟು ಉತ್ತೇಜನಗೊಂಡಿರುವ ಕೇಂದ್ರ ಸರ್ಕಾರ ಇನ್ನಷ್ಟು ಸುಧಾರಣಾ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ. ಮುಂದಿನ ದಿನಗಳಲ್ಲಿ ಆಧಾರ್‌, ಬ್ಯಾಂಕ್‌, ಮೊಬೈಲ್‌ ಸಿಮ್‌ಗಳನ್ನು ಜೋಡಣೆ ಮಾಡುವುದರಿಂದ ಹೊಸ ಗುರಿಯನ್ನು ತಲುಪಲು ಯೋಜನೆ ರೂಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.

Comments are closed.