ರಾಷ್ಟ್ರೀಯ

ಹತ ಉಗ್ರ ಕಂದಹಾರ್‌ ವಿಮಾನ ಅಪಹರಣದ ಸಂಚುಕೋರನ ಮಗ

Pinterest LinkedIn Tumblr


ಶ್ರೀನಗರ/ಹೊಸದಿಲ್ಲಿ: ಕಾಶ್ಮೀರದಲ್ಲಿ ಭದ್ರತಾ ಪಡೆಗಳು ಸೋಮವಾರ ಹೊಡೆದುರುಳಿಸಿದ ಮೂವರು ಉಗ್ರರಲ್ಲಿ ಒಬ್ಬ 1999ರ ಕಂದಹಾರ್‌ ವಿಮಾನ ಅಪಹರಣ ಪ್ರಕರಣದ ಸಂಚುಕೋರ ಅಬ್ದುಲ್‌ ರೌಫ್‌ ಎಂಬಾತನ ಮಗ ಎಂದು ತಿಳಿದುಬಂದಿದೆ. ಅಲ್ಲದೇ ಪುಲ್ವಾಮ ಜಿಲ್ಲೆಯಲ್ಲಿ ಹತ ಉಗ್ರರಿಂದ ವಶಪಡಿಸಿಕೊಳ್ಳಲಾದ ಶಸ್ತ್ರಾಸ್ತ್ರಗಳಲ್ಲಿ ಅಮೆರಿಕ ತಯಾರಿತ ಎಂ4 ರೈಫಲ್‌ ಒಂದು ಸೇರಿದೆ. ಕಾಶ್ಮೀರ ಕಣಿವೆಯಲ್ಲಿ ಅಮೆರಿಕ ತಯಾರಿತ ರೈಫಲ್‌ಅನ್ನು ಉಗ್ರರು ಬಳಸಿರುವುದು ಇದೇ ಮೊದಲು ಎಂದು ಹೇಳಲಾಗಿದೆ.

ಏರ್‌ ಇಂಡಿಯಾ ವಿಮಾನವನ್ನು ಉಗ್ರರು ಅಪಹರಿಸಿ ಅದನ್ನು ಅಫಘಾನಿಸ್ತಾನದ ಕಂದಹಾರ್‌ನಲ್ಲಿ ಇಳಿಸಿ ಪ್ರಯಾಣಿಕರನ್ನು ಒತ್ತೆಯಾಗಿರಿಸಿಕೊಂಡಿದ್ದರು. ಪ್ರಕರಣ ಸುಖಾಂತ್ಯಗೊಳ್ಳಬೇಕೆಂದರೆ ಜೈಷೆ ಮೊಹಮ್ಮದ್‌ ಮುಖ್ಯಸ್ಥ ಮೌಲಾನ ಮಸೂದ್‌ ಅಜರ್‌ನನ್ನು ಬಿಡುಗಡೆಗೊಳಿಸಬೇಕೆಂದು ಅಂದಿನ ಪ್ರಧಾನಿ ವಾಜಪೇಯಿ ನೇತೃತ್ವದ ಸರಕಾರಕ್ಕೆ ಷರತ್ತು ಹಾಕಿ, ಅದರಲ್ಲಿ ಯಶಸ್ವಿಯಾಗಿದ್ದರು. ಅಜರ್‌ನ ಸಹೋದರನೇ ಅಬ್ದುಲ್‌ ರೌಫ್‌.

ಪುಲ್ವಾಮಾದ ಕಾರ್ಯಚರಣೆಯಲ್ಲಿ ಸೇನೆ ಗುಂಡಿಗೆ ಬಲಿಯಾದ ಭಯೋತ್ಪಾದಕರನ್ನು ಮೆಹಮೂದ್‌ ಭಾಯ್‌, ತಲ್ಲಾ ರಶೀದ್‌ ಮತ್ತು ವಾಸಿಮ್‌ ಅಹ್ಮದ್‌ ಗೈನಿ ಎಂದು ಗುರುತಿಸಲಾಗಿದೆ. ಈ ಮೂವರ ಪೈಕಿ ತಲ್ಲಾ ರಶೀದ್‌, ಮಸೂದ್‌ ಅಜರ್‌ನ ಸಹೋದರನ ಮಗ ಎಂದು ಸ್ವತಃ ಜೈಷೆ ಮೊಹಮ್ಮದ್‌ ಸಂಘಟನೆ ಹೇಳಿಕೆ ನೀಡಿತ್ತು. ಆದರೆ ಈಗ ವಶಪಡಿಸಿಕೊಳ್ಳಲಾದ ಅಮೆರಿಕ ನಿರ್ಮಿತ ರೈಫಲ್‌ ಈ ಹೇಳಿಕೆಯನ್ನು ದೃಢಪಡಿಸಿದೆ ಎನ್ನುತ್ತಾರೆ ಪೊಲೀಸರು. ಅಂದಹಾಗೆ ಈ ರೈಫಲ್‌ಅನ್ನು ಅಮೆರಿಕ ನೇತೃತ್ವದ ನೇಟೊ ಪಡೆಗಳು ಆಫ್ಘನ್‌ ಮತ್ತು ಇರಾಕ್‌ ಯುದ್ಧದಲ್ಲಿ ವ್ಯಾಪಕವಾಗಿ ಬಳಸಿದ್ದವು.

Comments are closed.