ರಾಷ್ಟ್ರೀಯ

ಪಾಕ್‌ ಹಿಂದೂ ಯುವತಿಗೆ 26 ವರ್ಷಗಳ ಬಳಿಕ ಸಿಕ್ತು ಭಾರತೀಯ ಪೌರತ್ವ

Pinterest LinkedIn Tumblr


ಅಹಮದಾಬಾದ್‌: ಪಾಕಿಸ್ತಾನದ ಸಿಂಧ್‌ ಪ್ರಾಂತ್ಯದಿಂದ ಗುಜರಾತ್‌ಗೆ 1990ರಲ್ಲಿ ವಲಸೆ ಬಂದಿದ್ದ ಡಿಂಪಲ್ ವಿರಂದಾನಿ (41) ಇದೀಗ ಬಿಜೆಪಿ ಕಾರ್ಯಕರ್ತೆಯಾಗಿ ಪಕ್ಷ ಸೇರಿದ್ದಾರೆ.

ತನ್ನ 13 ವರ್ಷ ವಯಸ್ಸಿನಲ್ಲಿ ಭಾರತಕ್ಕೆ ಓಡಿ ಬಂದ ಈಕೆ 26 ವರ್ಷಗಳ ಕಠಿಣ ಶ್ರಮದ ಬಳಿಕ ಭಾರತೀಯ ಪೌರತ್ವ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಪಾಕಿಸ್ತಾನದಲ್ಲಿರುವ ಹಿಂದೂಗಳ ಬಗ್ಗೆ ವಿಶೇಷ ಒಲವು ಹೊಂದಿರುವ ಬಿಜೆಪಿಗೆ ಸಾಮಾನ್ಯ ಕಾರ್ಯಕರ್ತೆಯಾಗಿ ಈಕೆ ಸೇರಿಕೊಂಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರಕಾರ 2015ರಲ್ಲಿ, ಪಾಕ್‌ ಮತ್ತು ಬಾಂಗ್ಲಾದೇಶಗಳಿಂದ ಭಾರತಕ್ಕೆ ವಲಸೆ ಬರುವ ಹಿಂದೂಗಳಿಗೆ ನೆರವಾಗಲು ಕಾನೂನು ತಿದ್ದುಪಡಿ ಮಾಡಿತ್ತು. ಹೀಗೆ ಬರುವ ಹಿಂದೂಗಳಿಗೆ ಭಾರತೀಯ ಪೌರತ್ವ ನೀಡುವ ಪ್ರಕ್ರಿಯೆಯನ್ನು ಮೋದಿ ಸರಕಾರ ಸರಳಗೊಳಿಸಿತ್ತು.

‘ಈ ಸರಕಾರ ನಮ್ಮ ಅಳಲನ್ನು ಆಲಿಸುತ್ತದೆ. ನಮ್ಮ ನೋವಿಗೆ ಸ್ಪಂದಿಸುತ್ತಿದೆ’ ಎಂದು ಡಿಂಪಲ್‌ ಹೇಳುತ್ತಾರೆ. ಸದ್ಯ ಅವರು ಪಾಕಿಸ್ತಾನದಿಂದ ವಲಸೆ ಬರುವ ಹಿಂದೂಗಳಿಗೆ ದೀರ್ಘಾವಧಿ ವೀಸಾ ಹಾಗೂ ಭಾರತೀಯ ಪೌರತ್ವಕ್ಕೆ ಅರ್ಜಿ ಹಾಕಲು ನೆರವಾಗುವ ಎನ್‌ಜಿಓ ಒಂದನ್ನು ನಡೆಸುತ್ತಿದ್ದಾರೆ.

ಭಾರತದಲ್ಲಿ ವಾಸಿಸುತ್ತಿರುವ ಪಾಕ್‌ ಹಿಂದೂಗಳಿಗೆ ದೀರ್ಘಾವಧಿ ವೀಸಾ ಹಾಗೂ ಭಾರತೀಯ ಪೌರತ್ವ ಒದಗಿಸುವ ಪ್ರಕ್ರಿಯೆಗಳನ್ನು ತ್ವರಿತಗೊಳಿಸಲು ಜಿಲ್ಲಾಮಟ್ಟದಲ್ಲಿ ಗೃಹಸಚಿವಾಲಯ ವಿಶೇಷ ಶಿಬಿರಗಳನ್ನು ನಡೆಸುತ್ತಿದೆ. ಇದಕ್ಕಾಗಿ ಎನ್‌ಡಿಎ ಸರಕಾರ ಪ್ರತ್ಯೇಕ ಕಾರ್ಯಪಡೆಯನ್ನೇ ರಚಿಸಿದೆ ಎನ್ನುತ್ತಾರೆ ಡಿಂಪಲ್‌.

1990ರಲ್ಲಿ ಪಾಕಿಸ್ತಾನದಿಂದ ತಮ್ಮ ತಂದೆ-ತಾಯಿ ನಾಲ್ವರು ಮಕ್ಕಳ ಜತೆಗೆ ಭಾರತಕ್ಕೆ ಹೇಗೆ ಪಲಾಯನ ಮಾಡಿದರೆಂಬುದನ್ನು ಅವರು ಸ್ಮರಿಸಿಕೊಳ್ಳುತ್ತಿದ್ದಾರೆ. 1999ರಲ್ಲಿ ಹಿಂದೂ ಯುವಕನ ಜತೆ ಡಿಂಪಲ್‌ ಮದುವೆಯಾದರು. ಬಳಿಕ ಭಾರತೀಯ ಪೌರತ್ವ ಪಡೆಯುವಲ್ಲಿನ ತೊಡಕಿನಿಂದಾಗಿ ದುಬೈಗೆ ಸ್ಥಳಾಂತರಗೊಂಡರು.

‘ಮದುವೆಯಾಗಿ 5 ವರ್ಷಗಳ ಬಳಿಕ ಭಾರತೀಯ ಪೌರತ್ವಕ್ಕೆ ಅರ್ಜಿ ಸಲ್ಲಿಸಬಹುದು ಎಂಬ ನಿಯಮದಂತೆ ಭಾಋತೀಯ ಕಾನ್ಸುಲೇಟ್‌ಗೆ ಅರ್ಜಿ ಹಾಕಿಕೊಂಡರೂ ಪ್ರಯೋಜನವಾಗಲಿಲ್ಲ. ಬಳಿಕ ಮದುವೆಯಾಗಿ ಏಳು ವರ್ಷಗಳ ಬಳಿಕ ಭಾರತೀಯ ಪೌರತ್ವಕ್ಕೆ ಅರ್ಜಿ ಹಾಕಬಹುದು ಎಂದು ಯುಪಿಎ ಸರಕಾರ ನಿಯಮ ತಿದ್ದುಪಡಿ ಮಾಡಿತು. ಏಳು ವರ್ಷದ ಬಳಿಕ ಅರ್ಜಿ ಹಾಕಿಕೊಂಡರೂ ಅಪರೂಪಕ್ಕೊಮ್ಮೆ ಭಾರತಕ್ಕೆ ಭೇಟಿ ನೀಡುವ ಕಾರಣಕ್ಕೆ ಅರ್ಜಿಯನ್ನು ಯುಪಿಎ ಸರಕಾರ ತಿರಸ್ಕರಿಸಿತು. 2016ರಲ್ಲಿ ಎನ್‌ಡಿಎ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಅದೇ ಅರ್ಜಿಯನ್ನು ಅಂಗೀಕರಿಸಿ ಭಾರತೀಯ ಪೌರತ್ವ ದೊರಕಿಸಿ ಕೊಟ್ಟಿತು’ ಎಂದು ಡಿಂಪಲ್‌ ವಿವರಿಸಿದರು.

ತನ್ನ ತಂದೆ ತಾಯಿ ಮತ್ತು ಸೋದರರಿಗೆ 2002ರಲ್ಲೇ ಭಾರತೀಯ ಪೌರತ್ವ ದೊರಕಿತ್ತು. ಅಲ್ಲದೆ ತನ್ನ ಪತಿ ಹಾಗೂ ಇಬ್ಬರು ಮಕ್ಕಳಿಗೂ ಭಾರತೀಯ ಪೌರತ್ವ ಸಹಜವಾಗಿಯೇ ದೊರೆತಿತ್ತು. ತನಗೊಬ್ಬಳಿಗೆ ಮಾತ್ರ ಭಾರತೀಯ ಪೌರತ್ವ ದೊರೆಯದೆ ಬಹಳಷ್ಟು ಹತಾಶೆ ಅನುಭವಿಸುವಂತಾಗಿತ್ತು ಎಂದು ಅವರು ನೆನಪಿಸಿಕೊಂಡರು.

ಕೊನೆಗೂ 2016ರಲ್ಲಿ ಡಿಂಪಲ್‌ಗೆ ಭಾರತೀಯ ಪೌರತ್ವ ದೊರಕಿತು. ಅದಾಗಿ ಒಂದು ವರ್ಷದ ಬಳಿಕ ಇದೀಗ ಆಕೆ ಬಿಜೆಪಿ ಕಾರ್ಯರ್ತೆಯಾಗಿ ರಾಜಕೀಯ ಪ್ರವೇಶಿಸಿದ್ದಾರೆ. ‘ನಾನು ಧಾರ್ಮಿಕ ನೆಲೆಯಲ್ಲಿ ಹೇಳಿಕೆ ನೀಡುತ್ತಿಲ್ಲ. ಆದರೆ ಬಿಜೆಪಿ ಆಡಳಿತದಲ್ಲಿ ನಮಗೆ ಸುರಕ್ಷತೆ ಮತ್ತು ನೆಮ್ಮದಿ ಭಾವನೆ ಮೂಡಿದ್ದು ನಿಜ’ ಎಂದು ಅವರು ಹೇಳುತ್ತಾರೆ.

ಪ್ರಸ್ತುತ 10 ಸಾವಿರಕ್ಕೂ ಅಧಿಕ ಪಾಕಿಸ್ತಾನಿ ಹಿಂದೂ ವಲಸಿಗರು ಅಹಮದಾಬಾದ್‌ನಲ್ಲಿ ನೆಲೆಸಿದ್ದಾರೆ.

‘ಬಹುತೇಕ ಹಿಂದೂ ವಲಸಿಗರು ಕಡುಬಡವರು. ತಮ್ಮ ಹಾಗೂ ತಮ್ಮ ಹೆಣ್ಣುಮಕ್ಕಳಿಗೆ ಪಾಕಿಸ್ತಾನದಲ್ಲಿ ಸುರಕ್ಷತೆಯಿಲ್ಲ ಎಂಬ ಕಾರಣಕ್ಕೆ ಭಾರತಕ್ಕೆ ಓಡಿ ಬಂದವರು ಇವರು’ ಎನ್ನುತ್ತಾರೆ ಡಿಂಪಲ್‌.

ರಾಜ್ಯದಲ್ಲಿ ಮತದಾರರು ಜಾತಿವಾರು ವಿಭಜನೆಯಾಗಿದ್ದರೂ, ಬಿಜೆಪಿಯ ಅಭಿವೃದ್ಧಿ ಮಂತ್ರವೇ 2017ರ ಚುನಾವಣೆಯಲ್ಲಿ ಪಕ್ಷಕ್ಕೆ ವರದಾನವಾಗಲಿದೆ ಎನ್ನುತ್ತಾರೆ ಡಿಂಪಲ್‌.

Comments are closed.