ರಾಷ್ಟ್ರೀಯ

ಬಿಹಾರದಲ್ಲಿ ಕಾರ್ತಿಕ ಪೂರ್ಣಿಮೆ ಆಚರಣೆ ವೇಳೆ ನೂಕುನುಗ್ಗಲು: ಮೂವರು ಮಹಿಳೆಯರ ಸಾವು

Pinterest LinkedIn Tumblr

ಪಟ್ನಾ: ಕಾರ್ತಿಕ ಪೂರ್ಣಿಮೆ ಧಾರ್ಮಿಕ ಆಚರಣೆ ವೇಳೆ ನೂಕುನುಗ್ಗಲು ಉಂಟಾಗಿ ಮೂವರು ಮಹಿಳೆಯರು ಮೃತಪಟ್ಟಿರುವ ದುರಂತ ಬಿಹಾರದಲ್ಲಿ ಸಂಭವಿಸಿದೆ. ಈ ವೇಳೆ ಹತ್ತಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

ಗಂಗಾ ನದಿ ದಂಡೆಯಲ್ಲಿರುವ ಬಿಹಾರದ ಬೆಗುರ್ಸೈ ಪಟ್ಟಣದಿಂದ 19ಕಿಮೀ ದೂರದಲ್ಲಿರುವ ಸಿಮಾರಿಯಾ ಘಾಟಿಯಲ್ಲಿ ಶನಿವಾರ ದುರಂತ ಸಂಭವಿಸಿದೆ. ಸ್ಥಳದಲ್ಲಿ ಯಾತ್ರಿಗಳಿಗೆ ಸಂಬಂಧಿಸಿದ ವಸ್ತುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿರುವುದು ಕಂಡುಬಂದಿದೆ.

ಧಾರ್ಮಿಕ ಕಾರ್ಯಕ್ರಮಗಳ ಆಯೋಜಕರು ಹಾಗೂ ಪೊಲೀಸರ ಕಳಪೆ ನಿರ್ವಹಣೆಯಿಂದಾಗಿ ಇಂತಹ ದುರಂತಗಳು ಪದೇಪದೆ ಸಂಭವಿಸುತ್ತವೆ ಎಂಬ ಆರೋಪಗಳು ಕೇಳಿಬಂದಿವೆ.

ಬೆಗುರ್ಸೈ ಪೊಲೀಸ್‌ ಅಧೀಕ್ಷಕ ಆದಿತ್ಯ ಕುಮಾರ್‌, ಮಹಿಳೆಯರು ಮೃತಪಟ್ಟಿರುವುದನ್ನು ದೃಢಪಡಿಸಿದ್ದು, ನೂಕುನುಗ್ಗಲು ಉಂಟಾಗಿರುವುದನ್ನು ಅಲ್ಲಗಳೆದಿದ್ದಾರೆ.

‘ಸಾವಿಗೀಡಾಗಿರುವ ಎಲ್ಲಾ ಮಹಿಳೆಯರು 80 ವರ್ಷ ವಯಸ್ಸಿನ ಮೇಲ್ಪಟ್ಟವರಾಗಿದ್ದಾರೆ. ವಯೋಸಹಜ ಕಾರಣಕ್ಕೆ ದೈಹಿಕವಾಗಿ ದುರ್ಬಲರಾಗಿದ್ದವರು. ಇಲ್ಲಿನ ಕಿರಿದಾದ ಘಾಟಿ ರಸ್ತೆಯಲ್ಲಿ ಅಧಿಕ ಸಂಖ್ಯೆಯ ಯಾತ್ರಿಗಳು ವಾಪಾಸ್ಸಾಗುವ ವೇಳೆ ಉಸಿರಾಟ ಸಮಸ್ಯೆ ಉಂಟಾಗಿ ಸಾವಿಗೀಡಾಗಿದ್ದಾರೆ’ ಎಂದು ಅವರು ಹೇಳಿದ್ದಾರೆ.

ಮುಖ್ಯಮಂತ್ರಿ ನಿತೀಶ್ ಕುಮಾರ್ ಮೃತರ ಕುಟುಂಬದವರಿಗೆ ನಾಲ್ಕು ಲ‌ಕ್ಷ ಪರಿಹಾರ ಘೋಷಿಸಿದ್ದು, ಗಾಯಗೊಂಡಿರುವವರಿಗೆ ಉಚಿತ ಚಿಕಿತ್ಸೆಗೆ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

Comments are closed.