ರಾಷ್ಟ್ರೀಯ

ಮೊಬೈಲ್ ಸಂಖ್ಯೆಗೆ ಆಧಾರ್ ಜೋಡಣೆಗಾಗಿ ಮೊಬೈಲ್ ಅಂಗಡಿಗೆ ತೆರಳುವ ಅಗತ್ಯವಿಲ್ಲ: ಯುಐಡಿಎಐ

Pinterest LinkedIn Tumblr


ನವದೆಹಲಿ: ಮೊಬೈಲ್ ಸಂಖ್ಯೆಗೆ ಆಧಾರ್ ಜೋಡಣೆ ಕಡ್ಡಾಯ ಮಾಡಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದ ಬೆನ್ನಲ್ಲೇ ಆಧಾರ್ ಸಂಖ್ಯೆ ವಿತರಣಾ ಸಂಸ್ಥೆ ಯುಐಡಿಎಐ ಮೊಬೈಲ್ ಸಂಖ್ಯೆದಾರರಿಗೆ ಕೊಂಚ ರಿಲೀಫ್ ನೀಡಿದೆ.

ಅದೇನೆಂದರೆ ಗ್ರಾಹಕರು ತಮ್ಮ ಮೊಬೈಲ್ ಸಂಖ್ಯೆಗೆ ಆಧಾರ್ ಸಂಖ್ಯೆ ಜೋಡಿಸಲು ಮೊಬೈಲ್ ಅಂಗಡಿಗೆ ಖುದ್ಧ ತೆರಳ ಬೇಕಿಲ್ಲ. ಬದಲಿಗೆ ಮನೆಯಲ್ಲೇ ಕುಳಿತು ಒಟಿಪಿ ಮೂಲಕ ಆಧಾರ್ ಸಂಖ್ಯೆಯನ್ನು ಮೊಬೈಲ್ ಸಿಮ್ ಕಾರ್ಡ್ ಗೆ ಸುಲಭವಾಗಿ ಜೋಡಣೆ ಮಾಡಬಹುದಾಗಿದೆ. ಈ ಬಗ್ಗೆ ಸಂಸ್ಥೆ ಕಾರ್ಯಪ್ರವೃತ್ತವಾಗಿದ್ದು, ಶೀಘ್ರದಲ್ಲೇ ಇದನ್ನು ಅನುಷ್ಠಾನಗೊಳಿಸಲಾಗುತ್ತದೆ ಎಂದು ಆಧಾರ್ ಪ್ರಾಧಿಕಾರ ಹೇಳಿದೆ.

ಈ ಬಗ್ಗೆ ಪ್ರಾಧಿಕಾರ ಟ್ವೀಟ್ ಮಾಡಿದ್ದು, ಜನರು ತಮ್ಮ ಆಧಾರ್‌ ಕಾರ್ಡ್‌ನಲ್ಲಿ ನೋಂದಣಿಯಾಗಿರುವ ಒನ್ ಟೈಮ್ ಪಾಸ್‌ ವರ್ಡ್(ಒಟಿಪಿ) ಬಳಸಿ ತಮ್ಮ ಮೊಬೈಲ್ ಮೂಲಕವೇ ಈ ಕಾರ್ಯ ಮಾಡಬಹುದಾಗಿದೆ. ಇದರ ಜೊತೆಗೆ ಆ್ಯಪ್ ಬಳಸಿ ಅಥವಾ ಇಂಟರ್ ಆ್ಯಕ್ಟಿವ್ ವಾಯ್ಸ್ ರೆಸ್ಪಾನ್ಸ್ (ಐವಿಆರ್‌ಎಸ್) ಬಳಸಿಕೊಂಡು ತಮ್ಮ ಮೊಬೈಲ್‌ನಲ್ಲಿ ಮನೆಯಲ್ಲಿಯೇ ಆಧಾರ್‌ ಗೆ ಮೊಬೈಲ್ ನಂಬರ್ ಜೋಡಿಸಬಹುದಾಗಿದೆ.

ಪ್ರಮುಖವಾಗಿ ದೇಶದ ಹಿರಿಯ ನಾಗರಿಕರನ್ನು ದೃಷ್ಟಿಯಲ್ಲಿಟ್ಟುಕೊಂಡು ಯುಐಎಡಿಎಐ ಈ ನಿರ್ಧಾರಕ್ಕೆ ಬಂದಿದೆ ಎಂದು ಹೇಳಲಾಗುತ್ತಿದೆ. ಅಲ್ಲದೆ ಚಂದಾದಾರರ ಇ-ಕೆವೈಸಿ ದತ್ತಾಂಶಗಳು ಟೆಲಿಕಾಂ ಸೇವೆ ಒದಗಿಸುವ ಸಂಸ್ಥೆಗಳಿಗೆ ಲಭ್ಯವಾಗಬಾರದು . ಕೇವಲ ಹೆಸರು ಮತ್ತು ವಿಳಾಸ ದೊರೆತರೆ ಸಾಕು ಎಂದೂ ದೂರವಾಣಿ ಇಲಾಖೆ ಆದೇಶಿಸಿದೆ. ದೇಶದ ಯಾವುದೇ ಮೂಲೆಯಲ್ಲಿದ್ದರೂ ಚಂದಾದಾರರು(ಮೊಬೈಲ್ ಸಂಪರ್ಕ ಯಾವ ಸೇವಾ ವ್ಯಾಪ್ತಿಗೆ ಸೇರಿದ್ದರೂ ) ತಮ್ಮ ಮೊಬೈಲ್ ನಂಬರ್ ಪರಿಶೀಲನೆ, ಮರುಪರಿಶೀಲನೆ ನಡೆಸಬಹುದಾಗಿದೆ ಎಂದು ಟೆಲಿಕಾಂ ಇಲಾಖೆ ತಿಳಿಸಿದೆ ಎನ್ನಲಾಗಿದೆ.

Comments are closed.