
ಅಹ್ಮದಾಬಾದ್: ಇಲ್ಲಿನ ಅಸ್ವಾರದಲ್ಲಿರುವ ಸರಕಾರಿ ಆಸ್ಪತ್ರೆಯಲ್ಲಿ ಕಳೆದ 24 ಗಂಟೆಗಳಲ್ಲಿ 9 ಶಿಶುಗಳು ಸಾವನ್ನಪ್ಪಿವೆ.
ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿದ್ದ ಈ ಶಿಶುಗಳ ಸಾವುಗಳು ಶನಿವಾರ ಸಂಭವಿಸಿದ್ದು, ಈ ಪೈಕಿ ಐದು ಶಿಶುಗಳನ್ನು ಮಹಿಸಾಗರ ಜಿಲ್ಲೆಯ ಲೂನಾವಾಡ ಆಸ್ಪತ್ರೆ, ಸುರೇಂದ್ರನಗರ, ಗಾಂಧಿನಗರ ಜಿಲ್ಲೆಯ ಮನ್ಸಾ, ಅಹ್ಮದಾಬಾದ್ ಜಿಲ್ಲೆಯ ವಿರಾಮಗಾಮ ಹಾಗೂ ಸಬರಕಾಂತ ಜಿಲ್ಲೆ ಹಿಮ್ಮತ್ನಗರದಿಂದ ಸ್ಥಳಾಂತರಿಸಲಾಗಿತ್ತು. ಉಳಿದ ನಾಲ್ಕು ಶಿಶುಗಳು ಇಲ್ಲೇ ಜನಿಸಿದ ಕೂಡಲೇ ಮೃತಪಟ್ಟಿವೆ.
ದೀಪಾವಳಿ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆಯ ವೈದ್ಯರೆಲ್ಲ ರಜೆ ಮೇಲೆ ತೆರಳಿದ್ದರು. ಶಿಶುಗಳಿಗೆ ಸೂಕ್ತ ಸಮಯಕ್ಕೆ ಚಿಕಿತ್ಸೆ ದೊರೆಯದ ಹಿನ್ನೆಲೆಯಲ್ಲಿ ಮೃತಪಟ್ಟಿವೆ ಎಂದು ಪೋಷಕರು ಆರೋಪಿಸಿದ್ದರು. ಆದರೆ ಈ ಆರೋಪವನ್ನು ಸಾರ್ವಜನಿಕ ಆಸ್ಪತ್ರೆಗಳ ವೈದ್ಯಕೀಯ ಅಧೀಕ್ಷಕ ಎಂ ಎಂ ಪ್ರಭಾಕರ್ ನಿರಾಕರಿಸಿದ್ದು, 24 x 7 ಸೇವೆ ನೀಡಲಾಗುತ್ತಿದೆ ಎಂದು ಹೇಳಿದ್ದಾರೆ.
ಕೆಲ ದಿನಗಳ ಹಿಂದೆ ಉತ್ತರ ಪ್ರದೇಶದ ಗೋರಖ್ಪುರದಲ್ಲಿ ನಡೆದ ಶಿಶುಗಳ ಮಾರಣ ಹೋಮದ ಕರಾಳ ನೆನಪು ಮಾಸುವ ಮುನ್ನವೇ ಇಂತ ಪ್ರಕರಣವನ್ನೆ ನೆನಪಿಸುವ ಮತ್ತೊಂದು ಘಟನೆ ನಡೆದಿದೆ.
Comments are closed.