ಅಹಮದಾಬಾದ್: ಪಾಟಿದಾರ್ ಆಂದೋಲನದ ಮುಖ್ಯಸ್ಥ ಹಾರ್ದಿಕ್ ಪಟೇಲ್ ಇನ್ನೊಬ್ಬ ಕೇಶುಭಾಯ್ ಪಟೇಲ್ ಆಗ್ತಾರಾ? ಗುಜರಾತ್ ರಾಜಕೀಯ ವಲಯದಲ್ಲಿ ಇಂತಹದೊಂದು ಪ್ರಶ್ನೆ ಮೂಡಿದೆ.
ಹಿರಿಯ ಬಿಜೆಪಿ ನಾಯಕರಾಗಿದ್ದ ಕೇಶುಭಾಯ್ ಪಟೇಲ್ ಪಕ್ಷ ತೊರೆದು ಗುಜರಾತ್ ಪರಿವರ್ತನ್ ಪಾರ್ಟಿ ಕಟ್ಟಿ 2012ರ ಚುನಾವಣೆಗೆ ಸ್ಪರ್ಧಿಸಿದರು. ಬಿಜೆಪಿಯಿಂದ ರೋಸಿಹೋದ ಪಟೇಲ್ ಸಮುದಾಯದ ಗಣನೀಯ ಮತಗಳನ್ನು ಸೆಳೆದುಕೊಂಡರು.
2012ರ ಚುನಾವಣೆಯಲ್ಲಿ ಜಿಪಿಪಿಗೆ ಬಿದ್ದ ವೋಟುಗಳ ಪ್ರಮಾಣ ಶೇ 3.63. ಈ ಮತಗಳು ಸುಲಭವಾಗಿ ಕಾಂಗ್ರೆಸ್ಗೆ ಬೀಳುತ್ತಿದ್ದ ಮತಗಳಾಗಿದ್ದವು. ಈ ರೀತಿ ಕಾಂಗ್ರೆಸ್ ಬುಟ್ಟಿಗೆ ಕೈ ಹಾಕುವ ಮೂಲಕ ಬಿಜೆಪಿ ಮತಗಳನ್ನು ಮತ್ತಷ್ಟು ಭದ್ರಪಡಿಸಿ ಅದರ ಭರ್ಜರಿಗೆ ಗೆಲುವಿಗೆ ಪರೋಕ್ಷ ಕಾರಣರಾದರು ಕೇಶುಭಾಯ್. ಪಾಟಿದಾರ್ ಭದ್ರ ಕೋಟೆಯೆನಿಸಿದ ಸೌರಾಷ್ಟ್ರದಲ್ಲಿ ಬಿಜೆಪಿ ಭರ್ಜರಿ ಜಯಗಳಿಸಿತ್ತು. ಜಿಪಿಪಿ ಕೇವಲ 2 ಸೀಟುಗಳನ್ನು ಗೆಲ್ಲಲು ಶಕ್ತವಾಯಿತು. ಆದರೆ ಕಾಂಗ್ರೆಸ್ ಮತ ವಿಭಜನೆಯಾಗಿ ಅದು ಗೆಲ್ಲಬಹುದಾಗಿದ್ದ ಡಜನ್ಗೂ ಹೆಚ್ಚು ಸ್ಥಾನಗಳನ್ನು ಬಿಜೆಪಿ ಗೆದ್ದುಕೊಂಡಿತು.
ಈ ಬಾರಿ ಪಾಟೀದಾರ್ ಆಂದೋಲನದ ರೂವಾರಿ ಹಾರ್ದಿಕ್ ಪಟೇಲ್ ಸರದಿ. ಪಟೇಲ್ ಸಮುದಾಯವನ್ನು ಓಬಿಸಿ ಕೋಟಾಗೆ ಸೇರಿಸಬೇಕು ಎಂಬ ಹಾರ್ದಿಕ್ ಪಟೇಲ್ ಬೇಡಿಕೆ ಕಾಂಗ್ರೆಸ್ ಅನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಓಬಿಸಿ ಮುಖಂಡ ಅಲ್ಪೇಶ್ ಠಾಕೂರ್ ಇದನ್ನು ಬಲವಾಗಿ ವಿರೋಧಿಸುತ್ತಿರುವುದರಿಂದ ಕಾಂಗ್ರೆಸ್ ಗೊಂದಲಕ್ಕೆ ಬಿದ್ದಿದೆ.
ಇಂತಹ ಸನ್ನಿವೇಶದಲ್ಲಿ ಹಾರ್ದಿಕ್ ಪಟೇಲ್ ಮತ್ತೊಂದು ಪಕ್ಷದ ಜತೆಗೆ (ಬಹುತೇಕ ಎನ್ಸಿಪಿ) ಒಪ್ಪಂದ ಮಾಡಿಕೊಂಡು ಚುನಾವಣೆಗಿಳಿದಲ್ಲಿ ಕಾಂಗ್ರೆಸ್ ಮತಗಳೇ ವಿಭಜನೆಯಾಗಲಿವೆ. ಇದರಿಂದ ಮತ್ತೆ ಬಿಜೆಪಿಗೇ ಅನುಕೂಲವಾಗಲಿದೆ.
ಜಿಪಿಪಿ ಗೆಲ್ಲಬಹುದಾಗಿದ್ದ ಮಾಂಡ್ವಿ ಬೇಚಾರ್ಜಿ, ರಾಜ್ಕೋಟ್ (ಗ್ರಾಮೀಣ), ಕಾಲವಾಡ್, ಗೊಂಡಾಲ್ ಮತ್ತು ಕೇಶೋಡ್ (ಇವೆಲ್ಲವೂ ಪಟೇಲ್ ಸಮುದಾಯದ ಪ್ರಾಬಲ್ಯವಿರುವ ಕ್ಷೇತ್ರಗಳು) ಗಳಲ್ಲಿ ಜಿಪಿಪಿ ಪಡೆದ ಮತಗಳಿಗಿಂತಲೂ ಹೆಚ್ಚು ಅಂತರದಿಂದ ಬಿಜೆಪಿ ಗೆಲುವು ದಾಖಲಿಸಿತ್ತು.
ಹಾರ್ದಿಕ್ ಬೆಂಬಲಿಗರು ಕಾಂಗ್ರೆಸ್ನಿಂದ ದೂರ ನಿಂತರೆ ಕಳೆದ ಎರಡು ವರ್ಷಗಳಿಂದ ಪಟೇಲ್ ಸಮುದಾಯದ ಮನವೊಲಿಸಲು ಕಾಂಗ್ರೆಸ್ ಮಾಡಿರುವ ಪ್ರಯತ್ನಗಳೆಲ್ಲ ನೀರ ಮೇಲಿಟ್ಟ ಹೋಮದಂತಾಗಲಿದೆ.
22 ವರ್ಷಗಳಿಂದ ಗುಜರಾತ್ನಲ್ಲಿ ಅಧಿಕಾರವಿಲ್ಲದೆ ಕಂಗೆಟ್ಟಿರುವ ಕಾಂಗ್ರೆಸ್, ಈ ಬಾರಿ ಹೇಗಾದರೂ ಮಾಡಿ ಪಟೇಲ್ ಸಮುದಾಯದವರ ಬೆಂಬಲದೊಂದಿಗೆ ಬಿಜೆಪಿ ಸರಕಾರವನ್ನು ಉರುಳಿಸಬೇಕೆಂದು ಹವಣಿಸುತ್ತಿದೆ. ಆದರೆ ಅದರ ಲೆಕ್ಕಾಚಾರ ಕೈಗೂಡುವುದು ದಿನೇ ದಿನೇ ಕಠಿಣವಾಗುತ್ತಿದೆ.
2012ರಲ್ಲಿ ಜಿಪಿಪಿ 164 ಕ್ಷೇತ್ರಗಳಲ್ಲಿ ಸ್ಪರ್ಧಿಸಿತ್ತು. ಆದರೆ ಕೇವಲ 2 ಸೀಟುಗಳಲ್ಲಿ ಗೆದ್ದಿತ್ತು. ಮತಗಳ ಗಳಿಕೆಯಲ್ಲಿ ಶೇ 3.63ರ ಮತ ಪ್ರಮಾಣದೊಂದಿಗೆ ಮೂರನೇ ದೊಡ್ಡ ಪಕ್ಷವಾಗಿ ಮೂಡಿಬಂದಿತ್ತು. ಬಿಜೆಪಿ ಶೇ 47.9, ಕಾಂಗ್ರೆಸ್ ಶೇ 38.9 ಮತ ಗಳಿಸಿದ್ದವು.