
ನವದೆಹಲಿ: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರ ಟ್ವಿಟರ್ ಖಾತೆಯ ಜನಪ್ರಿಯತೆ ಸಂಬಂಧ ಕೇಂದ್ರ ಸಚಿವೆ ಸ್ಮೃತಿ ಇರಾನಿ ಹಾಗೂ ಕಾಂಗ್ರೆಸ್ ಪಕ್ಷದ ಸಾಮಾಜಿಕ ಮಾಧ್ಯಮ ಮತ್ತು ಡಿಜಿಟಲ್ ಸಂವಹನದ ನೇತೃತ್ವ ವಹಿಸಿಕೊಂಡಿರುವ ನಟಿ ರಮ್ಯಾ ನಡುವಿನ ಟ್ವೀಟ್ ವಾರ್ ಇದೀಗ ವೈರಲ್ ಆಗಿದೆ.
ರಾಹುಲ್ ಗಾಂಧಿ ಟ್ವಿಟರ್ ಜನಪ್ರಿಯತೆಗೆ ರಷ್ಯಾ ಮೂಲದ ಸಂಸ್ಥೆ ಕಾರಣ ಎಂದು ಸ್ಮೃತಿ ಇರಾನಿ ಆರೋಪಿಸಿದ್ದು, ರಷ್ಯಾ ಮೂಲದ ಬಾಟ್ ರಾಹುಲ್ ಗಾಂಧಿ ಅವರ ಟ್ವಿಟರ್ ಖಾತೆಯನ್ನು ನಿರ್ವಹಿಸುತ್ತಿದ್ದು, ರಾಹುಲ್ ಗಾಂಧಿ ಅವರ ಪ್ರತಿಯೊಂದು ಟ್ವೀಟ್ ಗಳನ್ನು ರಷ್ಯಾ ಮೂಲದ ಸಂಸ್ಥೆ ನಿಯಂತ್ರಿಸುತ್ತಿದೆ ಎಂದು ಆರೋಪಿಸಿದ್ದಾರೆ. ಇದಕ್ಕೆ ಕೆಲ ಪುರಾವೆಗಳನ್ನು ಹಾಗೂ ಕೆಲ ಪತ್ರಕರ್ತರು ಹಂಚಿಕೊಂಡಿರುವ ದಾಖಲೆಗಳನ್ನು ಸಾಕ್ಷಿಯಾಗಿ ಸ್ಮೃತಿ ನೀಡಿದ್ದಾರೆ.
ಟ್ವಿಟರ್ ಬಾಟ್ ಸಂಸ್ಥೆ ಒಂದು ತಂತ್ರಾಂಶವಾಗಿದ್ದು, ಟ್ವಿಟರ್ ಎಪಿಐ (ಅಪ್ಲಿಕೇಷನ್ ಪ್ರೊಗ್ರಾಮಿಂಗ್ ಇಂಟರ್ಫೇಸ್) ಮೂಲಕ ಖಾತೆಯನ್ನು ನಿಯಂತ್ರಿಸುತ್ತದೆ. ಇದರ ಮೂಲಕ ಖಾತೆಗೆ ಬರುವ ಟ್ವೀಟ್ ಗಳನ್ನು ನಿಯಂತ್ರಿಸುತ್ತದೆ. ಅಲ್ಲದೆ ಟ್ವೀಟ್ ಮಾಡುವುದು, ಟೀಟ್ ಗಳಿಗೆ ಪ್ರತಿಕ್ರಿಯೆ ನೀಡುವುದು, ಟ್ವೀಟ್ ಗಳನ್ನು ಲೈಕಿಸುವುದು, ಟ್ವೀಟ್ ಖಾತೆಯನ್ನು ನಕಲಿ ಖಾತೆಗಳ ಮೂಲಕ ಹಿಂಬಾಲಿಸುವುದು ಇಂತಹ ಕಾರ್ಯಗಳನ್ನು ಮಾಡುತ್ತದೆ ಎಂದು ಸ್ಮೃತಿ ಆರೋಪಿಸಿದ್ದಾರೆ.
ಇನ್ನು ಈ ಆರೋಪಕ್ಕೆ ಬೆಂಬಲ ನೀಡಿರುವ ಮತ್ತೋರ್ವ ಕೇಂದ್ರ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್ ಅವರು, ಕ್ರೀಡೆಯಲ್ಲಿ ಇಂತಹ ಕಾರ್ಯಗಳನ್ನು ಡೋಪಿಂಗ್ ಎಂದು ಕರೆಯುತ್ತಾರೆ. ಅಂದರೆ ಮಾದಕ ವಸ್ತುಗಳನ್ನು ತೆಗೆದುಕೊಂಡು ಪಂದ್ಯ ಗೆಲ್ಲುವುದು ಎಂದು ವ್ಯಂಗ್ಯ ಮಾಡಿದ್ದಾರೆ.
ಬಿಜೆಪಿ ಆರೋಪಕ್ಕೆ ಕಾಂಗ್ರೆಸ್ ತೀಕ್ಷ್ಣ ಪ್ರತಿಕ್ರಿಯೆ
ಇನ್ನು ಬಿಜೆಪಿ ಮುಖಂಡರು ಮಾಡಿರುವ ಆರೋಪಗಳನ್ನು ಕಾಂಗ್ರೆಸ್ ಪಕ್ಷ ಅಲ್ಲಗಳೆದಿದ್ದು, ಈ ಬಗ್ಗೆ ಟ್ವಿಟರ್ ನಲ್ಲಿ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ಪಕ್ಷದ ಸಾಮಾಜಿಕ ಮಾಧ್ಯಮ ಮತ್ತು ಡಿಜಿಟಲ್ ಸಂವಹನದ ನೇತೃತ್ವ ವಹಿಸಿಕೊಂಡಿರುವ ನಟಿ ರಮ್ಯಾ ಬಿಜೆಪಿ ಆರೋಪದಲ್ಲಿ ಹುರುಳಿಲ್ಲ. ಟ್ವಿಟರ್ ಖಾತೆಯನ್ನು ತಂತ್ರಾಂಶಗಳ ಮೂಲಕ ನಿಯಂತ್ರಿಸಿಕೊಳ್ಳುವ ಅವಶ್ಯಕತೆ ನಮಗಿಲ್ಲ ಎಂದು ಹೇಳಿದ್ದಾರೆ.
ಅಂತೆಯೇ ಸ್ಮೃತಿ ಇರಾನಿ ಅವರ ಟ್ವೀಟ್ ಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ರಮ್ಯಾ, ರಾಹುಲ್ ಗಾಂಧಿ ಟ್ವಿಟರ್ ಗೆ ಬಂದಿರುವ ಸುಮಾರು 54 ಸಾವಿರ ಪ್ರಿತಿಕ್ರಿಯೆಗಳಲ್ಲಿ ಪತ್ರಕರ್ತೆಯ ಟ್ವೀಟ್ ಅನ್ನು ಮಾತ್ರ ಸ್ಮೃತಿ ಇರಾನಿ ಅದು ಹೇಗೆ ಹೆಕ್ಕಿ ತೆಗೆದರೋ ತಿಳಿಯುತ್ತಿಲ್ಲ. ಅಂತೆಯೇ ರಾಹುಲ್ ವಿರುದ್ಧ ಆರೋಪ ಮಾಡಿ ವರದಿ ಪ್ರಕಟಿಸಿರುವ ಪತ್ರಕರ್ತೆ ಅದಾವ ಮೂಲದಿಂದ ಇಂತಹ ವಿಷಯ ತಿಳಿದರೋ ತಿಳಿಯುತ್ತಿಲ್ಲ ಎಂದು ಟಾಂಗ್ ನೀಡಿದ್ದಾರೆ. ಅಂತೆಯೇ ಟ್ವಿಟರ್ ಖಾತೆಯನ್ನು ತಂತ್ರಾಂಶಗಳ ಮೂಲಕ ನಿಯಂತ್ರಿಸಿಕೊಳ್ಳುವ ಅವಶ್ಯಕತೆ ನಮಗಿಲ್ಲ. ರಾಹುಲ್ ಗಾಂಧಿ ಜನಪ್ರಿಯತೆ ಹೆಚ್ಚಿಸಲು ನೀವೇ ಇರುವಾಗ ಮನಗೆ ಅವುಗಳ ನೆರವೇಕೇ ಎಂದು ರಮ್ಯಾ ಟಾಂಗ್ ನೀಡಿದ್ದಾರೆ.
Comments are closed.