ರಾಷ್ಟ್ರೀಯ

ರೈಲುಗಳಲ್ಲಿ ಆಮ್ಲಜನಕ ಸಿಲಿಂಡರ್‌ ಪೊರೈಕೆಗೆ ಸುಪ್ರೀಂಕೋರ್ಟ್ ಆದೇಶ

Pinterest LinkedIn Tumblr

ಹೊಸದಿಲ್ಲಿ, ಅ. 19: ತುರ್ತು ಸಂದರ್ಭಗಳಲ್ಲಿ ಉಸಿರಾಟದ ಸಮಸ್ಯೆಯಿಂದ ಬಳಲುವ ಪ್ರಯಾಣಿಕರಿಗೆ ಜೀವರಕ್ಷಕ ಅನಿಲ ಪೂರೈಸುವ ಸಲುವಾಗಿ ಎಲ್ಲ ರೈಲುಗಳಲ್ಲಿ ಆಮ್ಲಜನಕ ಸಿಲಿಂಡರ್ಗಳನ್ನು ಹೊಂದಿರುವುದು ಕಡ್ಡಾಯ ಎಂದು ಸುಪ್ರೀಂಕೋರ್ಟ್ ಸೂಚಿಸಿದೆ.

ಚಲಿಸುವ ರೈಲಿನಲ್ಲಿ ಈ ವ್ಯವಸ್ಥೆಯನ್ನು ಕಲ್ಪಿಸಿ, ತೀವ್ರ ಅನಾರೋಗ್ಯಕ್ಕೆ ಒಳಗಾದ ರೋಗಿಗಳಿಗೆ ಚಿಕಿತ್ಸೆ ಒದಗಿಸುವ ಸಂಬಂಧ ಎಐಐಎಂಎಸ್ ವೈದ್ಯರ ನೆರವು ಪಡೆಯುವಂತೆ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಮತ್ತು ನ್ಯಾಯಮೂರ್ತಿಗಳಾದ ಎ.ಎಂ.ಖನ್ವೀಲ್ಕರ್ ಹಾಗೂ ಡಿ.ವೈ.ಚಂದ್ರಚೂಡ್ ಅವರನ್ನು ಒಳಗೊಂಡ ತಂಡ ಸಲಹೆ ಮಾಡಿದೆ.

“ರೈಲುಗಳಲ್ಲಿ ಆಮ್ಲಜನಕ ಸಿಲಿಂಡರ್ ವ್ಯವಸ್ಥೆಗೊಳಿಸುವುದರಿಂದ ಉಸಿರಾಟದ ತೊಂದರೆ ಎದುರಿಸುವ ಪ್ರಯಾಣಿಕರಿಗೆ ನೆರವು ನೀಡಬಹುದು. ಯಾರೇ ಪ್ರಯಾಣಿಕ ಅಥವಾ ಅವರ ಜತೆಗಿರುವವರು ಟಿಟಿ ಅಥವಾ ಸಹಾಯಕರಿಗೆ ಆರೋಗ್ಯ ಸಮಸ್ಯೆ ಬಗ್ಗೆ ದೂರು ನೀಡಿದರೆ, ತಕ್ಷಣ ಗಮನ ನೀಡುವುದು ಅಗತ್ಯ. ತಕ್ಷಣ ಆ ಬಗ್ಗೆ ಮುಂದಿನ ರೈಲು ನಿಲ್ದಾಣಕ್ಕೆ ಮಾಹಿತಿ ನೀಡಿ, ಆಸ್ಪತ್ರೆ ಇರುವಲ್ಲಿ ಸೂಕ್ತ ಚಿಕಿತ್ಸೆಗೆ ವ್ಯವಸ್ಥೆ ಮಾಡುವುದು ಅಧಿಕಾರಿಗಳ ಕರ್ತವ್ಯ” ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.

ಧೀರ್ಘ ದೂರದ ರೈಲುಗಳಲ್ಲಿ ಒಬ್ಬ ವೈದ್ಯ, ನರ್ಸ್ ಹಾಗೂ ಸಹಾಯಕರ ತಂಡ ಇರುವಂತೆ ನೋಡಿಕೊಳ್ಳಬೇಕು ಎಂದು ರಾಜಸ್ಥಾನ ಹೈಕೋರ್ಟ್ ನೀಡಿದ ತೀರ್ಪಿನ ವಿರುದ್ಧ ಕೇಂದ್ರ ಸರ್ಕಾರ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಪೀಠ ಈ ಮಹತ್ವದ ಆದೇಶ ಹೊರಡಿಸಿದೆ.

ರೈಲುಗಳಲ್ಲಿ ವೈದ್ಯರನ್ನು ನಿಯೋಜಿಸುವುದು ಕಾರ್ಯಸಾಧುವಲ್ಲ ಹಾಗೂ ಅನಾರೋಗ್ಯಪೀಡಿತ ಪ್ರಯಾಣಿಕರ ತಪಾಸಣೆಗಾಗಿ ವೈದ್ಯಕೀಯ ಸಾಧನ ಅಳವಡಿಸುವುದು ಸಾಧ್ಯವಿಲ್ಲ. ಈ ಸಂಬಂಧ ಹಿಂದೆ ನಡೆಸಿದ ಪ್ರಯತ್ನ ವಿಫಲವಾಗಿತ್ತು ಎಂದು ಕೇಂದ್ರ ಸರ್ಕಾರ ವಾದ ಮಂಡಿಸಿತ್ತು.

Comments are closed.