
ಹೊಸದಿಲ್ಲಿ: ವಿಶ್ವದ 7 ಅದ್ಭುತಗಳಲ್ಲಿ ಸ್ಥಾನ ಪಡೆದಿರುವ ಜಗತ್ಪ್ರಸಿದ್ಧ ಸ್ಮಾರಕ ತಾಜ್ ಮಹಲ್ ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದು, ಪ್ರೇಮಸೌಧ ಸುತ್ತ ರಾಜಕೀಯ ಕೆಸರೆರಚಾಟ ತೀವ್ರಗೊಂಡಿದೆ. ಈ ಬೆನ್ನಲ್ಲೇ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಈ ಐತಿಹಾಸಿಕ ಸ್ಮಾರಕದ ಪರ ಬ್ಯಾಟಿಂಗ್ ಮಾಡಿದ್ದು, ವಿವಾದವನ್ನು ತಿಳಿಗೊಳಿಸಲು ಯತ್ನಿಸಿದ್ದಾರೆ.
‘ಮೊಘಲ್ ಸ್ಮಾರಕವನ್ನು ಯಾರು, ಯಾವ ಉದ್ದೇಶವನ್ನಿಟ್ಟುಕೊಂಡು ಕಟ್ಟಿದರೆಂಬುವುದು ಮುಖ್ಯವಾಗುವುದಿಲ್ಲ, ಆದರೆ, ಈ ಅದ್ಭುತ ಸ್ಮಾರಕ ನಿರ್ಮಾಣದಲ್ಲಿ ಭಾರತೀಯರು ರಕ್ತ ಹಾಗೂ ಬೆವರು ಸುರಿಸಿರುವುದು ಸ್ಪಷ್ಟ. ವಿಶ್ವದಲ್ಲಿಯೇ ಉತ್ತಮ ಪ್ರವಾಸಿ ತಾಣವೆಂದು ತಾಜ್ ಮಹಲನ್ನು ಪರಿಗಣಿಸಿದ್ದು, ಅದನ್ನು ಅಭಿವೃದ್ಧಿ ಪಡಿಸುವುದು ಸರಕಾರದ ಹೊಣೆ,’ ಎಂದು ಯೋಗಿ ಹೇಳಿದ್ದಾರೆ.
ರಾಜ್ಯ ಪ್ರವಾಸೋದ್ಯಮ ಇಲಾಖೆ ಆಗ್ರಾದಲ್ಲಿ ಸುಮಾರು 175 ಕೋಟಿ ರೂ. ಮೊತ್ತದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳುತ್ತಿದ್ದು, ಇದರ ಪರಿಶೀಲನೆಗಾಗಿ ಅಕ್ಟೋಬರ್ 26ರಂದು ಯೋಗಿ ಆಗ್ರಾಗೆ ಭೇಟಿ ನೀಡಲಿದ್ದು, ತಾಜ್ ಮಹಲ್‌ಗೂ ಭೇಟಿ ನೀಡುವುದಾಗಿ ಹೇಳಿದ್ದಾರೆ.
ಶಾಸಕ ಹೇಳಿದ್ದೇನು?
ದೇಶದ ಸಾಂಸ್ಕೃತಿಕ ಚರಿತ್ರೆಯಲ್ಲಿ ತಾಜ್‌ಮಹಲ್‌ನ ಸ್ಥಾನವನ್ನು ಪ್ರಶ್ನಿಸಿ ಉತ್ತರಪ್ರದೇಶದ ಬಿಜೆಪಿ ಶಾಸಕ ಸಂಗೀತ್ ಸೋಮ್ ಅವರು ನೀಡಿರುವ ಹೇಳಿಕೆ ಭಾರಿ ವಿವಾದ ಸೃಷ್ಟಿಸಿದ್ದು, ಪ್ರತಿಪಕ್ಷಗಳು, ಸಾಮಾಜಿಕ ಜಾಲತಾಣಗಳು ಸೇರಿದಂತೆ ಎಲ್ಲಾ ವಲಯಗಳಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದೆ.
‘ತಾಜ್ ಮಹಲ್ ನಿರ್ಮಿಸಿದ್ದು ತಂದೆಯನ್ನೇ ಕೊನೆಗಾಲದವರೆಗೂ ಬಂಧನದಲ್ಲಿಟ್ಟ ಒಬ್ಬ ದೇಶದ್ರೋಹಿ. ಈ ಸ್ಮಾರಕ ಭಾರತದ ಸಂಸ್ಕೃತಿಗೆ ಒಂದು ಕಪ್ಪುಚುಕ್ಕೆ,’ ಎಂದು ಸೋಮ್ ಹೇಳಿದ್ದರು.
ಪ್ರವಾಸಿ ತಾಣ ಪಟ್ಟಿಯಿಂದಲೂ ಕೈಬಿಡಲಾಗಿತ್ತು
ಇತ್ತೀಚೆಗಷ್ಟೇ ಉತ್ತರ ಪ್ರದೇಶ ಸರಕಾರ ಪ್ರಕಟಿಸಿದ ರಾಜ್ಯದ ಪ್ರವಾಸಿ ತಾಣಗಳ ಪಟ್ಟಿಯಲ್ಲಿ ತಾಜ್ ಹೆಸರು ಕೈಬಿಟ್ಟಿದ್ದು ಭಾರಿ ವಿವಾದಕ್ಕೆ ದಾರಿ ಮಾಡಿತ್ತು. ತೀವ್ರ ಆಕ್ರೋಶದ ಬಳಿಕ ಮತ್ತೊಮ್ಮೆ ಪ್ರಕಟಣೆ ಹೊರಡಿಸಿದ ಆದಿತ್ಯನಾಥ್ ಸರಕಾರ, ತಾಜ್‌ಮಹಲ್ ಮತ್ತು ಸುತ್ತಮುತ್ತಲಿನ ಪ್ರದೇಶಗಳ ಅಭಿವೃದ್ಧಿಗೆ ಯೋಜನೆ ರೂಪಿಸಿದ್ದಾಗಿ ಹೇಳಿತ್ತು.
Comments are closed.