ರಾಷ್ಟ್ರೀಯ

ಮೋದಿಗೆ ಇತರರ ಶೌಚಾಲಯಗಳನ್ನು ಇಣುಕಿ ನೋಡುವುದು ಇಷ್ಟದ ಕೆಲಸ ಎಂದು ಲೇವಡಿ ಮಾಡಿದ ರಾಹುಲ್ ಗಾಂಧಿ

Pinterest LinkedIn Tumblr

ಲಖನೌ: ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇತರರ ಶೌಚಾಲಯಗಳನ್ನು ಇಣುಕಿ ನೋಡುವುದು ಇಷ್ಟದ ಕೆಲಸ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಲೇವಡಿ ಮಾಡಿದ್ದಾರೆ. ಪ್ರಧಾನಿ ತಮ್ಮ ಕೆಲಸದಲ್ಲಿ ಸಂಪೂರ್ಣ ವಿಫಲವಾಗಿರುವ ವ್ಯಕ್ತಿ ಎಂದು ಕೂಡ ಟೀಕಿಸಿದ್ದಾರೆ.

“ಪ್ರಧಾನಿಗೆ ಗೂಗಲ್ ನಲ್ಲಿ ಹುಡುಕುವುದು, ಇತರರ ಶೌಚಾಲಯ ಇಣುಕುವುದು ಇಷ್ಟದ ಕೆಲಸ. ಅದನ್ನು ಅವರು ಬಿಡುವಿನ ಸಮಯದಲ್ಲಿ ಮಾಡಲಿ ಆದರೆ ಅವರ ಮುಖ್ಯ ಕೆಲಸ ಪ್ರಧಾನಿಯಾಗಿ ಸೇವೆ ಸಲ್ಲಿಸುವುದು ಆದರೆ ಆ ಕೆಲಸದಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ” ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರೊಂದಿಗೆ ನಡೆಸಿದ ಜಂಟಿ ಪತ್ರಿಕಾ ಗೋಷ್ಠಿಯಲ್ಲಿ ಹರಿಹಾಯ್ದಿದ್ದಾರೆ.

ನೆನ್ನೆ ಉತ್ತರಪ್ರದೇಶದ ಚುನಾವಣಾ ಪ್ರಚಾರಣ ವೇಳೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿ, ರಾಹುಲ್ ಅಂತರ್ಜಾಲದಲ್ಲಿ ಅತಿ ಹೆಚ್ಚು ಹಾಸ್ಯಕ್ಕೆ ಒಳಗಾದ ವ್ಯಕ್ತಿ ಎಂದಿದ್ದರು.

ಈ ಹಿಂದೆ ಪ್ರಧಾನಿ ಸಂಸತ್ತಿನಲ್ಲಿ ಮಾಡಿದ ಭಾಷಣದ ವೇಳೆಯಲ್ಲಿ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಸ್ನಾನದ ವೇಳೆಯಲ್ಲಿ ರೈನ್ ಕೋಟ್ ಧರಿಸುವಲ್ಲಿ ನಿಪುಣರು ಎಂಬ ಹೇಳಿಕೆ ತೀವ್ರ ಟೀಕೆಗೆ ಗುರಿಯಾಗಿತ್ತು. ನೆನ್ನೆ ಇದರ ಬಗ್ಗೆ ಸ್ಪಷ್ಟಿಕರಣ ನೀಡಿದ್ದ ಗೃಹಮಂತ್ರಿ ರಾಜನಾಥ್ ಸಿಂಗ್, ಅದು ಡಾ.ಸಿಂಗ್ ಅವರನ್ನು ಹೊಗಳಿ ನೀಡಿದ್ದ ಹೇಳಿಕೆ ಎಂದಿದ್ದರು.

“ದೇಶದ ಅತಿ ದೊಡ್ಡ ತೊಂದರೆ ಉದ್ಯೋಗಗಳು ಕಡಿಮೆಯಾಗಿರುವುದು. ಮೋದಿ ಅವರು ೨ ಕೋಟಿ ಉದ್ಯೋಗಗಳನ್ನು ಸೃಷ್ಟಿಸುವುದಾಗಿ ಹೇಳಿದ್ದರು ಆದರೆ ಇದರಲ್ಲಿ ಶೇಕಡಾ ೧ ಕೂಡ ಪೂರೈಸಿಲ್ಲ. ಮೋದಿ ಭದ್ರತೆ, ಭಯೋತ್ಪಾದನೆ ಮತ್ತು ಸರ್ಜಿಕಲ್ ದಾಳಿಯ ಬಗ್ಗೆ ಹೆಚ್ಚೆಚ್ಚು ಮಾತನಾಡುತ್ತಾರೆ.

“ಆದರೆ ಕಳೆದ ಕೆಲವು ವರ್ಷಗಳಲ್ಲಿ ನಮ್ಮ ಮಿಲಿಟರಿಗೆ ಅತಿ ಹೆಚ್ಚು ನಷ್ಟವಾಗಿದೆ. ೯೦ ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿ ಪ್ರಾಣ ಕಳೆದುಕೊಂಡಿದ್ದಾರೆ” ಎಂದು ಕೂಡ ರಾಹುಲ್ ಹರಿಹಾಯ್ದಿದ್ದಾರೆ.

“ಉತ್ತರ ಪ್ರದೇಶ ಚುನಾವಣಾ ಫಲಿತಾಂಶದ ಬಗ್ಗೆ ಪ್ರಧಾನಿ ಬೆದರಿದ್ದಾರೆ. ಈ ಫಲಿತಾಂಶ ಅವರಿಗೆ ಅತಿ ದೊಡ್ಡ ಆಘಾತ ನೀಡಲಿದೆ ಮತ್ತು ಅವರ ಬದ್ಧತೆಯನ್ನು ಪ್ರಶ್ನಿಸಲಿದೆ. ಆದುದರಿಂದಲೇ ಅವರು ಇಂತಹುದನ್ನೆಲ್ಲಾ ಮಾತನಾಡುತ್ತಿದ್ದಾರೆ” ಎಂದಿದ್ದಾರೆ ರಾಹುಲ್.

Comments are closed.