ರಾಷ್ಟ್ರೀಯ

ಮುಖ್ಯಮಂತ್ರಿಯಾಗುವ ಸಮಸ್ಯೆಯ ಸುಳಿಯಲ್ಲಿ ಶಶಿಕಲಾ!

Pinterest LinkedIn Tumblr


ಚೆನ್ನೈ, ಫೆ. ೭- ತಮಿಳುನಾಡಿನ ರಾಜಕೀಯ ಇತಿಹಾಸದಲ್ಲಿ ನಡೆದ ಮೌನ ಕ್ಷಿಪ್ರ ಕ್ರಾಂತಿಯ ನಾಯಕಿ ಚಿನ್ನಮ್ಮ- ಶಶಿಕಲಾ ತಮಿಳುನಾಡು ಮುಖ್ಯಮಂತ್ರಿಯಾಗಿ ಇಂದೇ ಪ್ರಮಾಣ ವಚನ ಸ್ವೀಕರಿಸಲು ಸಿದ್ಧರಾಗಿ ನಿಂತಿದ್ದರೂ ಅದೃಷ್ಟ ಅವರಿಗೆ ಇದ್ದಂತಿಲ್ಲ. ಹಲವಾರು ಸಮಸ್ಯೆ – ಸವಾಲುಗಳನ್ನು ದಾಟಿ ಅವರು ಗದ್ದುಗೆ ಏರಬೇಕಾದ ಅನಿವಾರ್ಯ ಪರಿಸ್ಥಿತಿ ಉಂಟಾಗಿದ್ದು ಅಮ್ಮನ ಕುರ್ಚಿಯಲ್ಲಿ ಮಿಂಚುವ ಶಶಿಕಲಾ ಆಸೆ ಕೇವಲ ಕನಸಾಗುವಂತಿದೆ.

ತಮಿಳುನಾಡಿನ 14ನೇ ಮುಖ್ಯಮಂತ್ರಿಯಾಗಲು ಸಿದ್ಧರಾಗಿರುವ ಚಿನ್ನಮ್ಮ ಶಶಿಕಲಾ ತಮ್ಮ ವಿರುದ್ಧ ಇರುವ ಅಕ್ರಮ ಆಸ್ತಿಗಳಿಕೆ ಸಂಬಂಧದ ಸುಪ್ರೀಂಕೋರ್ಟ್ ತೀರ್ಪು ಹಾಗೂ ಇನ್ನಿತರ ಹಲವಾರು ರಾಜಕೀಯ ಮತ್ತು ಆಡಳಿತಾತ್ಮಕ ಸಮಸ್ಯೆಗಳಿಂದ ಹೊರಬರಬೇಕಾಗಿದೆ.

ನಾಳೆ ಸುಪ್ರೀಂಕೋರ್ಟ್ ಚಿನ್ನಮ್ಮ ಮುಖ್ಯಮಂತ್ರಿಯಾಗಿ ಅಧಿಕಾರ ಗ್ರಹಣ ಮಾಡುವುದರ ವಿರುದ್ಧ ಸಲ್ಲಿಸಲಾಗಿರುವ ಅರ್ಜಿಯನ್ನು ನಾಳೆ ಕೈಗೆತ್ತಿಕೊಳ್ಳಲಿದೆ. ಎರಡು ದಶಕಗಳಷ್ಟು ಹಳೆಯದಾದ ಅಕ್ರಮ ಆಸ್ತಿಗಳಿಕೆ ಮೊಕದ್ದಮೆಯ ತೀರ್ಪು ಮುಂದಿನ ವಾರ ಬರಲಿದ್ದು ಚಿನ್ನಮ್ಮ ಕಳೆದ ತಿಂಗಳು ನಿಧನರಾದ ಜಯಲಲಿತಾ ಅವರೊಂದಿಗೆ ಈ ಪ್ರಕರಣದಲ್ಲಿ ಸಹ ಆರೋಪಿಯಾಗಿದ್ದಾರೆ.

ಜಯಲಲಿತ ಸಾವಿನ ನಂತರ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿಯಾದಾಗಲೇ ಮುಖ್ಯಮಂತ್ರಿ ಸ್ಥಾನದ ಮೇಲೂ ಹದ್ದಿನ ಕಣ್ಣು ಹಾಕಿದ್ದ ಶಶಿಕಲಾಗೆ ಆ ಗಾದಿ ಲಭ್ಯವಾಗಬೇಕಾದರೆ ಅಕ್ರಮ ಸಂಪತ್ತು ಗಳಿಕೆ ಪ್ರಕರಣದಲ್ಲಿ ಖುಲಾಸೆಯಾಗಬೇಕು. ಒಮ್ಮೆ ಅವರೇನಾದರೂ ತಪ್ಪಿತಸ್ಥರೆಂದು ತೀರ್ಪು ಬಂದಲ್ಲಿ ಅವರು ಮುಖ್ಯಮಂತ್ರಿಯಾಗಲು ಅನರ್ಹರಾಗುತ್ತಾರೆ.

1991-96ರ ನಡುವಿನ ಅವಧಿಯಲ್ಲಿ ಜಯಲಲಿತಾ ಮೊದಲ ಬಾರಿಗೆ ಮುಖ್ಯಮಂತ್ರಿಯಾದಾಗ 66 ಕೋಟಿ ರೂ. ಅಕ್ರಮ ಸಂಪತ್ತು ಗಳಿಸಿದ್ದಾರೆಂಬ ಮೊಕದ್ದಮೆಯಲ್ಲಿ ವಿಶೇಷ ನ್ಯಾಯಾಲಯ ಅವರಿಬ್ಬರನ್ನೂ ತಪ್ಪಿತಸ್ಥರೆಂದು ಘೋಷಿಸಿ 4 ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು. ಈ ಪ್ರಕರಣಕ್ಕೆ ಸುಪ್ರೀಂಕೋರ್ಟ್ ಮುಂದಿನ ವಾರ ತೀರ್ಪು ನೀಡಲಿದೆ.

ಚಿನ್ನಮ್ಮ ಏನೇನೋ ಕಸರತ್ತು ಮಾಡಿ ಇಂದೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಪಡೆಯಲು ತರಾತುರಿಯಲ್ಲಿ ನಿಂತಿದ್ದರಾದರೂ, ಎಲ್ಲ ಸಿದ್ಧತೆ ಮಾಡಿಕೊಂಡಿದ್ದರೂ ಅಲ್ಲಿನ ರಾಜ್ಯಪಾಲರು ಈ ವಿಷಯದಲ್ಲಿ ಕಾನೂನು ಇಲಾಖೆ ಅಭಿಪ್ರಾಯ ಪಡೆಯಬಯಸಿದ್ದರಿಂದ ಮಾಡಿದ ವಿಳಂಬ ಅವರ ಕನಸನ್ನು ನುಚ್ಚು ನೂರು ಮಾಡಿದೆ.

ತಮಿಳುನಾಡನ್ನು ಹೆಚ್ಚುವರಿಯಾಗಿ ಹೊಂದಿರುವ ಮಹಾರಾಷ್ಟ್ರ ರಾಜ್ಯಪಾಲ ವಿದ್ಯಾಸಾಗರ್ ರಾವ್ ರಾಜಕೀಯ ಅವ್ಯವಸ್ಥೆಗಳ ನಡುವೆ ಆತುರಾತರುವಾಗಿ ದೆಹಲಿಯಿಂದ ನಿರೀಕ್ಷಿಸಿದಂತೆ ಚೆನ್ನೈಗೆ ತೆರಳುವ ಬದಲು ಮುಂಬೈಗೆ ಹೋಗಿದ್ದು ಅಲ್ಲಿಂದಲೇ ಅವರು ತಮಿಳುನಾಡಿನಲ್ಲಿ ಉದ್ಭವಿಸಿರುವ ಹೊಸ ರಾಜಕೀಯ ಪರಿಸ್ಥಿತಿಯ ಬಗ್ಗೆ ಕಾನೂನು ತಜ್ಞರ ಸಲಹೆ ಪಡೆಯುತ್ತಿದ್ದಾರೆ.

ಚಿನ್ನಮ್ಮ ಈಗ ವಿಧಾನಸಭಾ ಸದಸ್ಯರಲ್ಲದ ಕಾರಣ ಅವರು ಮುಖ್ಯಮಂತ್ರಿಯಾದರೆ ಮುಂದಿನ ಆರು ತಿಂಗಳಲ್ಲಿ ಅವರು ವಿಧಾನಸಭೆಗೆ ಆಯ್ಕೆಯಾಗಬೇಕಾದ ಅನಿವಾರ್ಯತೆಯಿದೆ. ಆದರೆ ಈಗ ತಮಿಳುನಾಡಿನಲ್ಲಿ ಚಿನ್ನಮ್ಮನ ಈ ರಾಜಕೀಯ ನಡೆಗೆ ಪ್ರಬಲ ವಿರೋಧ ಕಂಡು ಬಂದಿದ್ದು ರಾಜಕೀಯದ ಅನುಭವವೇ ಇಲ್ಲದೆ ಹೇಗೆ ಆಡಳಿತ ನಡೆಸುತ್ತಾರೆ ಎಂಬ ವಿರೋಧಿಗಳ ಕಟು ಟೀಕೆಯನ್ನು ಎದುರಿಸಬೇಕಾಗಿದೆ.

ಆಡಳಿತಾರೂಢ ಎಐಎಡಿಎಂಕೆಯಲ್ಲೂ ಚಿನ್ನಮ್ಮನ ಈ ಕ್ಷಿಪ್ರ ಕ್ರಾಂತಿಗೆ ವಿರೋಧ ಕಂಡು ಬಂದಿದ್ದು, ಮೊದಲು ಅದರ ಶಮನಕ್ಕೆ ಗಮನಹರಿಸಬೇಕಾಗಿದೆ. ಕೇವಲ ಮನೆಯ ಕೆಲಸದಾಳೊಬ್ಬಳು ರಾಜ್ಯದ ಆಡಳಿತ ಚುಕ್ಕಾಣಿ ಹಿಡಿಯುವುದನ್ನು ವಿರೋಧ ಪಕ್ಷವಾದ ಡಿಎಂಕೆ ಪ್ರಬಲ ಅಸ್ತ್ರವನ್ನಾಗಿ ಮಾಡಿಕೊಂಡು ಹೋರಾಟಕ್ಕೆ ಧುಮುಕಿದೆ. ಬಿಜೆಪಿ ಸಹ ಇದೇ ನಿಲುವು ತಳೆದಿದ್ದು ಪ್ರಧಾನಿ ಮೋದಿ ಮತ್ತೆ ಯಾವ ರಾಜಕೀಯ ತಂತ್ರ ರೂಪಿಸುವರೋ ಎಂದು ಎಲ್ಲರೂ ನಿರೀಕ್ಷಿಸುತ್ತಿದ್ದಾರೆ.

ಶಶಿಕಲಾ ಗದ್ದುಗೆ ಏರಿದರೂ ಜಯಲಲಿತಾರಂತೆ ಸಮರ್ಥ ಆಡಳಿತ ನೀಡುವ ಬಗ್ಗೆ ಎಲ್ಲರಿಗೂ ಸಂಶಯವಿದೆ. ಕೇವಲ ಜಾತಿ ಆಧಾರದ ಮೇಲೆ ರಾಜ್ಯಕ್ಕೆ ನಾಯಕತ್ವ ಕೊಡಲು ಸಾಧ್ಯವಾಗದು, ಬದಲಿಗೆ ಅಪರಿಮಿತವಾದ ರಾಜಕೀಯ ತಂತ್ರಗಾರಿಕೆಯ ಅಗತ್ಯವಿದ್ದು ಜಯಲಲಿತಾ ನೆರಳಿನಂತೇ ಇದ್ದ ಚಿನ್ನಮ್ಮನಿಗೆ ಇದು ಸಿದ್ಧಿಸುವುದೇ ಎಂದು ವಿರೋಧಿಗಳು ಲೆಕ್ಕಾಚಾರ ಹಾಕುತ್ತಿದ್ದಾರೆ.

ಜನತಂತ್ರ ವ್ಯವಸ್ಥೆಯಲ್ಲಿ ಕೆಲಸದಾಳೂ ಸಾರ್ವಭೌಮನಾಗಬಹುದಾದ ಈ ದೇಶದ ವ್ಯವಸ್ಥೆಯಲ್ಲಿ ಇಂತಹ ಸೂಕ್ಷ್ಮ ರಾಜಕೀಯ ಬೆಳವಣಿಗೆಗಳು ಪ್ರಬಲವಾಗಿ ಬೆಳೆಯಲೂಬಹುದು ಇಲ್ಲವೆ ನಿರ್ಲಕ್ಷಕ್ಕೆ ಒಳಗಾಗಿ ಕ್ಷೀಣಿಸಲೂಬಹುದು.

ಇಷ್ಟೆಲ್ಲಾ ಆದರೂ ಚಿನ್ನಮ್ಮ ಕೋರ್ಟಿಗೆ ಮತ್ತು ಜನರ ಕಣ್ಣಿಗೆ ಮಣ್ಣೆರಚಿ ಹಿಂಬಾಗಿಲಿನಿಂದ ಅಧಿಕಾರದ ಲಗಾಮು ಹಿಡಿಯಲು ಹೊರಟಿರುವುದು ಹೇಗಾದರೂ ಅಧಿಕಾರ ಪಡೆಯುವ ಅವರ ಆತುರಕ್ಕೆ ಸಾಕ್ಷಿಯಾಗಿದೆ.

Comments are closed.