ರಾಷ್ಟ್ರೀಯ

ಮೇಲಧಿಕಾರಿಗಳ ಕಿರುಕುಳ ಸಹಿಸಲಾಗುತ್ತಿಲ್ಲ ಎಂದು ರಾಜ್ ನಾಥ್ ಸಿಂಗ್ ಗೆ ಪತ್ರ ಬರೆದ ಯೋಧ

Pinterest LinkedIn Tumblr


ನವದೆಹಲಿ: ಇತ್ತೀಚೆಗೆ ಮೇಲಧಿಕಾರಿಗಳ ಹಿಂಸೆ ಕುರಿತು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಪ್ರಕಟಿಸಿ ಯೋಧರು ಸುದ್ದಿ ಮಾಡುತ್ತಿದ್ದರೆ, ಇಲ್ಲೊಬ್ಬ ಯೋಧ ನೇರವಾಗಿ ಗೃಹ ಸಚಿವ ರಾಜ್ ನಾಥ್ ಸಿಂಗ್ ಗೆ ಪತ್ರ ಬರೆದಿದ್ದಾರೆ.

ಬಿಹಾರ ಮೂಲದ ಸಿಆರ್ ಪಿಎಫ್ ಯೋಧ ಸಂಜೀವ್ ರಂಜನ್ ಸಿಂಗ್ ಮೇಲಧಿಕಾರಿಗಳ ಕಿರುಕುಳ ಸಹಿಸಲಾಗುತ್ತಿಲ್ಲ. ದಯಮಾಡಿ ಸಹಾಯ ಮಾಡಿ ಎಂದು ಪತ್ರ ಬರೆದಿದ್ದಾರೆ. ರಜೆಯ ಮೇಲೆ ತೆರಳಿದ್ದ ರಂಜನ್ ಜನವರಿ 23 ರಂದು ಕರ್ತವ್ಯಕ್ಕೆ ಹಾಜರಾಗಬೇಕಿತ್ತು.

ಆದರೆ ತಡವಾಗಿ ಹಾಜರಾಗಿದ್ದಕ್ಕೆ ಅಧಿಕಾರಿಗಳು ಇನ್ನಿಲ್ಲದಂತೆ ತೊಂದರೆ ಕೊಡುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ತವರು ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ರಂಜನ್ ರನ್ನು ಕೆಲವು ದಿನಗಳ ಮಟ್ಟಿಗೆ ತೆಲಂಗಾಣ ಜಿಲ್ಲೆಗೆ ವರ್ಗಾಯಿಸಲಾಗಿತ್ತು. ಆದರೆ ನಾನು ನನ್ನ ತಾಯಿ, ಪತ್ನಿ ಮತ್ತು ಮಗನನ್ನು ಕಳೆದುಕೊಂಡಿದ್ದೇನೆ. ಅವರನ್ನು ಸರಿಯಾಗಿ ನೋಡಿಕೊಳ್ಳಲೂ ನನ್ನಿಂದಾಗಲಿಲ್ಲ.

ಮತ್ತೆ ಮೊದಲಿನ ಸ್ಥಳಕ್ಕೇ ನನ್ನನ್ನು ವರ್ಗ ಮಾಡಿ ಎಂದು ಕೇಳಿಕೊಂಡರೂ ಮೇಲಧಿಕಾರಿಗಳು ಕಿವಿ ಮೇಲೆ ಹಾಕಿಕೊಂಡಿಲ್ಲ. ನನ್ನ ಜತೆ ಮೇಲಧಿಕಾರಿಗಳು ಅನುಚಿತವಾಗಿ ವರ್ತಿಸಿದರು ಎಂಬುದು ಯೋಧನ ಆರೋಪ.

ಆದರೆ ಇದನ್ನು ನಿರಾಕರಿಸಿರುವ ಸಿಆರ್ ಪಿಎಫ್ ಕಮಾಂಡೆಂಟ್ ಧೀರೇಂದ್ರ ವರ್ಮಾ ಆತನ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಆತನ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.

Comments are closed.