ರಾಷ್ಟ್ರೀಯ

ಕಾಂಗ್ರೆಸ್ ವಿರುದ್ಧ ತೀವ್ರ ಟೀಕಾ ಪ್ರಹಾರ ನಡೆಸಿದ ಮೋದಿ ಹೇಳಿದ್ದು ಹೀಗೆ….!

Pinterest LinkedIn Tumblr

ನವದೆಹಲಿ: ಬಜೆಟ್ ಅಧಿವೇಶನದ ಸಂಸತ್ ಕಲಾಪದಲ್ಲಿ ರಾಷ್ಟ್ರಪತಿಗಳ ಭಾಷಣಕ್ಕೆ ವಂದನಾ ನಿರ್ಣಯ ಮಂಡಿಸಿ ಫೆ.7 ರಂದು ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್ ವಿರುದ್ಧ ತೀವ್ರ ಟೀಕಾ ಪ್ರಹಾರ ನಡೆಸಿದ್ದಾರೆ.

ಫೆ.6 ರಂದು ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಸ್ವಾತಂತ್ರ್ಯ, ಪ್ರಜಾಪ್ರಭುತ್ವ ರಕ್ಷಣೆಯ ಹೇಳಿಕೆಗಳಿಗೆ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿರುವ ಪ್ರಧಾನಿ ನರೆಂದ್ರ ಮೋದಿ, ಸ್ವಾತಂತ್ರ್ಯ ಒಂದು ಕುಟುಂಬದಿಂದ ಬಂದಿಲ್ಲ. ಅನೇಕರ ಬಲಿದಾನದಿಂದ ಸ್ವಾತಂತ್ರ್ಯ ಸಿಕ್ಕಿದೆ. ಆದರೆ ಕಾಂಗ್ರೆಸ್ ಪ್ರಕಾರ ಸ್ವಾತಂತ್ರ್ಯಕ್ಕಾಗಿ ಇಡೀ ದೇಶ ಒಂದು ಕುಟುಂಬಕ್ಕೆ ಋಣಿಯಾಗಿರಬೇಕಿದೆ ಎಂದು ತಿರುಗೇಟು ನೀಡಿದ್ದಾರೆ.

ಪ್ರಜಾಪ್ರಭುತ್ವವವನ್ನು ರಕ್ಷಿಸಿದ್ದಾಗಿ ಹೇಳುತ್ತಿರುವ ಕಾಂಗ್ರೆಸ್ ಪಕ್ಷ 1975 ರಲ್ಲಿ ಒಂದು ಕುಟುಂಬಕ್ಕಾಗಿ ಪ್ರಜಾಪ್ರಭುತ್ವವವನ್ನು ಅಡವಿಟ್ಟಿತ್ತು. ಈ ಮೂಲಕ ಪ್ರಜಾಪ್ರಭುತ್ವವನ್ನು ಕಾಂಗ್ರೆಸ್ ಪಕ್ಷ ಹೈಜಾಕ್ ಮಾಡಿತ್ತು ಎಂದು ಮೋದಿ ವಾಗ್ದಾಳಿ ನಡೆಸಿದ್ದಾರೆ.

ಬಿಜೆಪಿಯಿಂದ ಒಂದು ನಾಯಿಯಾದರೂ ದೇಶಕ್ಕೆ ಬಲಿದಾನ ನೀಡಿದೆಯೇ ಎಂಬ ಹೇಳಿಕೆಗೂ ಪ್ರಧಾನಿ ನರೇಂದ್ರ ಮೋದಿ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದು, ನಾವು ನಾಯಿ ಸಂಸ್ಕೃತಿಯಲ್ಲಿ ಬೆಳೆದುಬಂದವರಲ್ಲ. ಕಾಂಗ್ರೆಸ್ ಪಕ್ಷ ಸ್ವಚ್ಛತೆಯಿಂದ ಹಿಡಿದು ಪ್ರತಿಯೊಂದು ವಿಷಯದಲ್ಲೂ ಸಹ ರಾಜಕೀಯ ಮಾಡುತ್ತಿದೆ. ಕಾಂಗ್ರೆಸ್ ಗೆ ಬಡವರಿಗಿಂತ ಚುನಾವಣೆಗಳ ಮೇಲೆಯೇ ಹೆಚ್ಚು ಚಿಂತೆ ಎಂದಿದ್ದಾರೆ.

ಇದೇ ವೇಳೆ ರಾಹುಲ್ ಗಾಂಧಿ ಹಗರಣಗಳಿಗೆ ಸ್ಕ್ಯಾಮ್ ಗಳಿಗೆ ನೀಡಿದ್ದ ಹೊಸ ವ್ಯಾಖ್ಯಾನ( ಸೇವೆ, ಆತ್ಮವಿಶ್ವಾಸ, ಸಾಮರ್ಥ್ಯ, ನಮ್ರತೆ) ಎಂಬ ಹೇಳಿಕೆಯ ಬಗ್ಗೆಯೂ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, ಹಗರಣಗಳಲ್ಲಿ ಸೇವೆ ಇದ್ಯಾ? ಸ್ಕ್ಯಾಂ ಗಳಲ್ಲಿ ಸೇವೆಯನ್ನು ನೋಡುವುದು ಹೇಗೆ? ಎಂದು ಪ್ರಶ್ನಿಸಿದ್ದು, ಕಾಂಗ್ರೆಸ್ ಪಕ್ಷ ತಾಯ್ನಾಡನ್ನೇ ಲೂಟಿ ಮಾಡಿದೆ ಎಂದು ಟೀಕಿಸಿದ್ದಾರೆ.

ಇನ್ನು ಸರ್ಕಾರದ ಪ್ರತಿ ಯೋಜನೆಯನ್ನು ವಿಪಕ್ಷಗಳು ಟೀಕೆ ಮಾಡುತ್ತಿರುವುದಕ್ಕೂ ಅಸಮಾಧಾನ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ಪಕ್ಷ ಮೊಬೈಲ್ ಫೋನ್, ದೂರವಾಣಿ ಸಂಪರ್ಕ ಕ್ಷೇತ್ರದಲ್ಲಿ ಕ್ರಾಂತಿಯಾಗಲು ತಮ್ಮ ಪಕ್ಷದ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಕಾರಣ ಎನ್ನುತದೆ. ಆದರೆ ಅದೇ ಮೊಬೈಲ್ ಫೋನ್ ಮೂಲಕ ನಗದು ರಹಿತ ವಹಿವಾಟು ವ್ಯವಸ್ಥೆಯನ್ನು ಜಾರಿಗೊಳಿಸಿದರೆ ಅದನ್ನು ಪ್ರಶ್ನಿಸುತ್ತದೆ. ಈ ದ್ವಂದ್ವ ಏಕೆ ಎಂದು ಪ್ರಶ್ನಿಸಿದ್ದಾರೆ.

ನೋಟು ನಿಷೇಧದ ಬಗ್ಗೆ ಚರ್ಚೆಗೆ ಸರ್ಕಾರ ಸಿದ್ಧವಿತ್ತು. ಆದರೆ ಚರ್ಚೆ ನಡೆಸಲು ವಿಪಕ್ಷಗಳು 1 ದಿನವೂ ಅವಕಾಶ ನೀಡಲಿಲ್ಲ, ಕಾಂಗ್ರೆಸ್ ಗೆ ಕೇವಲ ಚುನಾವಣೆಯ ಚಿಂತೆ, ಬಡವರ ಬಗ್ಗೆ ಕಾಳಜಿ ಇಲ್ಲ ಎಂದು ಪ್ರಧಾನಿ ಮೋದಿ ಆರೋಪಿಸಿದ್ದಾರೆ. ಇದೇ ವೇಳೆ ಬೇನಾಮಿ ಆಸ್ತಿ ಹೊಂದಿರುವವರಿಗೂ ಎಚ್ಚರಿಕೆ ನೀಡಿರುವ ಪ್ರಧಾನಿ, ಈ ವರೆಗೂ ಸಾಲ ಮಾಡಿ ತುಪ್ಪ ತಿನ್ನು ಎಂಬ ಮನಸ್ಥಿತಿ ಇತ್ತು. ಆದರೆ ಇನ್ನು ಮುಂದೆ ಅಂತಹ ಮಾತುಗಳಿಗೆ ಅವಕಾಶ ಇರುವುದಿಲ್ಲ. ಸಾಲ ಮಾಡಿದವರು ಸಾಲವನ್ನು ವಾಪಸ್ ನೀಡಲೇಬೇಕಾಗುತ್ತದೆ. ಬೇನಾಮಿ ವ್ಯವಹಾರ ಕಪ್ಪುಹಣ ಸಂಗ್ರಹದ ಮೂಲವಾಗಿದ್ದು, ಸರ್ಕಾರ ಕಪ್ಪುಹಣ ಸಂಗ್ರಹ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಿದೆ. ಕಪ್ಪುಹಣ ಹೊಂದಿರುವವರು ಶೀಘ್ರವೇ ನಿಮ್ಮ ಸಿಎ(ಲೆಕ್ಕ ಪರಿಶೋಧಕರನ್ನು) ಸಂಪರ್ಕಿಸಿ ಎಂದು ಎಚ್ಚರಿಸಿದ್ದಾರೆ.

Comments are closed.