ರಾಷ್ಟ್ರೀಯ

ಪ್ರೇಯಸಿ ಕೊಂದು ಸಮಾಧಿ ಮಾಡಿ ಮಲಗುತ್ತಿದ್ದ ಕೊಲೆಗಾರ ಸೈಕೋ ಕಿಲ್ಲರ್!

Pinterest LinkedIn Tumblr

ಭೋಪಾಲ್: ಪ್ರೇಯಸಿಯನ್ನು ಕೊಂದು, ಮನೆಯಲ್ಲೇ ಸಮಾಧಿ ಮಾಡಿ ಅದರ ಮೇಲೆ ಮಲಗುತ್ತಿದ್ದ ಭೋಪಾಲ್‌ನ ಸೈಕೋ ಕಿಲ್ಲರ್ ವಿಚಾರಣೆ ವೇಳೆ ಬೆಚ್ಚಿಬೀಳಿಸುವ ಸತ್ಯವನ್ನು ಬಾಯ್ಬಿಟ್ಟಿದ್ದಾನೆ. ಆತ ಹೊರಹಾಕುತ್ತಿದ್ದ ಒಂದೊಂದೆ ರಹಸ್ಯಗಳನ್ನು ಕೇಳುತ್ತಿದ್ದ ಪೊಲೀಸರೇ ಒಂದು ಕ್ಷಣ ಬೆಚ್ಚಿ ಬಿದ್ದಿದ್ದಾರೆ.

ತಾನು ತನ್ನ ಪ್ರೇಯಸಿಯನ್ನಷ್ಟೇ ಅಲ್ಲ, ತಂದೆ-ತಾಯಿಯರನ್ನು ಕೊಂದು ಮನೆ ಆವರಣದಲ್ಲೇ ಸಮಾಧಿ ಮಾಡಿದ್ದೆ ಎಂದಾತ ಹೇಳಿದ್ದಾನೆ.

32 ವರ್ಷದ ಉದ್ಯಾನ್ ದಾಸ್ ತನ್ನ ಜೊತೆ ಲಿವಿಂಗ್ ಟುಗೆದರ್ ಸಂಬಂಧದಲ್ಲಿದ್ದ ಆಕಾಂಕ್ಷಾ ಶರ್ಮಾ(28) ಳನ್ನು ಕಳೆದ ವರ್ಷ ಜುಲೈ- ಆಗಸ್ಟ್ ತಿಂಗಳಲ್ಲಿ ಕೊಲೆ ಮಾಡಿದ್ದ. ಮೃತಳ ಪೋಷಕರು ನೀಡಿದ್ದ ದೂರಿನ ಮೇರೆಗೆ ತನಿಖೆ ನಡೆಸಿದ ಪೊಲೀಸರು ಕಳೆದೆರಡು ದಿನಗಳ ಹಿಂದೆ ಆರೋಪಿಯನ್ನು ಬಂಧಿಸಿದ್ದರು.

ಆತನ ವಿಚಾರಣೆ ಸಂದರ್ಭದಲ್ಲಿ ಈ ಹಿಂದೆ ನಡೆಸಿದ ಅಪರಾಧ ಕೃತ್ಯವನ್ನೆಲ್ಲವನ್ನಾತ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾನೆ. 2012ರಲ್ಲಿ ಉದ್ಯಾನ್ ತಂದೆ-ತಾಯಿ ಇದ್ದಕಿದ್ದಂತೆ ನಾಪತ್ತೆಯಾಗಿದ್ದರು. ನಾನು ತಂದೆ-ತಾಯಿಯನ್ನು ಕೊಂದಿದ್ದೆ, ಎಂದಾತ ಹೇಳಿದ್ದಾನೆ.

ಆತನ ತಾಯಿ ಛತ್ತೀಸ್‌ಗಡ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದರು. ಪತಿ ಪಿ.ಕೆ.ದಾಸ್ ಮತ್ತು ಮಗನ ಜತೆ ರಾಯ್ಪುರದಲ್ಲಿ ತಮ್ಮ ನಿವೃತ್ತ ಜೀವನವನ್ನುನಡೆಸುತ್ತಿದ್ದ ಅವರು ಇದ್ದಕ್ಕಿದ್ದಂತೆ ಕಾಣೆಯಾಗಿದ್ದರು. ಈ ಬಗ್ಗೆ ನೆರೆಹೊರೆಯವರು ಮಗನಲ್ಲಿ ವಿಚಾರಿಸಲಾಗಿ ಅವರು ಆಸ್ಪತ್ರೆಯಲ್ಲಿ ಸಾವನ್ನಪ್ಪಿರುವುದಾಗಿ ನಂಬಿಸಿದ್ದ.

ಬಳಿಕ ತಾಯಿಯ ನಕಲಿ ಮರಣಪತ್ರ ಮಾಡಿಸಿದ್ದ ಆತ ರಾಯ್ಪುರದಲ್ಲಿನ ಆಸ್ತಿಯನ್ನು ಮಾರಿ 2013ರಲ್ಲಿ ಭೋಪಾಲ್‌ಗೆ ಹೋಗಿ ನೆಲಸಿದ್ದ.

ಬಳಿಕ 200 ಫೇಸ್‌ಬುಕ್ ಖಾತೆಯನ್ನು ತೆರೆದ ಆತ ತಾನು ಆನಿವಾಸಿ ಭಾರತೀಯ ಮತ್ತು ತಾನು ಅಮೇರಿಕಾದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ, ಈಗಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರಂತಹ ದಿಗ್ಗಜರ ಜತೆ ಸಂಪರ್ಕ ಹೊಂದಿರುವುದಾಗಿ ಬಿಂಬಿಸಿ ಯುವತಿಯರ ಸ್ನೇಹವನ್ನು ಸಂಪಾದಿಸುತ್ತಿದ್ದ. ಹೀಗೆ ಬಲೆಗೆ ಬಿದ್ದು ಬಂದ ಆಕಾಂಕ್ಷಾಳನ್ನು ಸಹ ಆತ ಕಳೆದ ವರ್ಷ ಕೊಂದು ಹಾಕಿದ್ದ.

ಆತನ ಹೇಳಿಕೆಯನ್ನಾಧರಿಸಿ ರಾಯ್ಪುರಕ್ಕೆ ಹೋಗಿ ಆತ ವಾಸವಾಗಿದ್ದ ಸ್ಥಳದಲ್ಲಿ ಪರಿಶೀಲನೆ ನಡೆಸಿದ ಪೊಲೀಸರಿಗೆ ದಂಪತಿಯ ಶವದ ಎಲುಬುಗಳು ಪತ್ತೆಯಾಗಿದ್ದು, ಅವುಗಳನ್ನು ಡಿಎನ್ಎ ಪರೀಕ್ಷೆಗೊಳಪಡಿಸಲಾಗಿದೆ. ಈ ಕೃತ್ಯದ ಹಿಂದಿನ ಕಾರಣವೇನೆಂದು ಇನ್ನುವರೆಗೂ ತಿಳಿದು ಬಂದಿಲ್ಲ. ಆತ ಸೈಕೋ ಕಿಲ್ಲರ್ ಎಂದು ಪೊಲೀಸರು ಅನುಮಾನ ವ್ಯಕ್ತ ಪಡಿಸಿದ್ದಾರೆ.

Comments are closed.