ರಾಷ್ಟ್ರೀಯ

ಉತ್ತರ ಪ್ರದೇಶ ಚುನಾವಣೆ: SCAM(ಸಮಾಜವಾದಿ, ಕಾಂಗ್ರೆಸ್‌, ಅಖಿಲೇಶ್‌, ಮಾಯಾವತಿ)ವಿರುದ್ಧ ನಮ್ಮ ಹೋರಾಟ: ಮೋದಿ

Pinterest LinkedIn Tumblr
Panaji

ಮೀರತ್‌: ‘ಪರಸ್ಪರ ಭ್ರಷ್ಟಾಚಾರ ಆರೋಪದಲ್ಲಿ ತೊಡಗಿದ್ದ ಕಾಂಗ್ರೆಸ್‌ ಹಾಗೂ ಸಮಾಜವಾದಿ ಪಕ್ಷಗಳು ಒಂದಾಗಿ ಚುನಾವಣೆ ಎದುರಿಸುತ್ತಿವೆ. ಈ ಚುನಾವಣೆಯಲ್ಲಿ ನಾವು SCAMವಿರುದ್ಧ ಹೋರಾಟ ನಡೆಸುತ್ತಿದ್ದೇವೆ. SCAM ಎಂದರೆ ಸಮಾಜವಾದಿ(S) ಕಾಂಗ್ರೆಸ್‌(C), ಅಖಿಲೇಶ್‌ (A), ಮಾಯಾವತಿ(M)’ ಎಂದು ಪ್ರಧಾನ ಮಂತ್ರಿ ನರೇಂದ್ರಮೋದಿ ವಿಪಕ್ಷಗಳ ವಿರುದ್ಧ ಹರಿಹಾಯ್ದಿದ್ದಾರೆ.

ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯನ್ನುದ್ದೇಶಿಸಿ ಮೀರತ್‌ನಲ್ಲಿ ನಡೆದ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ‘ಎರಡೂವರೆ ವರ್ಷದ ನಮ್ಮ ಸರ್ಕಾರದ ಅವಧಿಯಲ್ಲಿ ನನ್ನ ಮೇಲೆ ಯಾವುದೇ ಕಳಂಕವಿಲ್ಲ. ಗೂಂಡಾರಾಜ್‌ನಿಂದ ರಾಜ್ಯವನ್ನು ರಕ್ಷಿಸಬೇಕಾಗಿದೆ’ ಎಂದು ಕರೆನೀಡಿದರು.

‘ಆರೋಗ್ಯ ಸುಧಾರಣೆಗೆ ಸಹಾಯವಾಗುವಂತೆ ₹400ಕೋಟಿ ಬಿಡುಗಡೆ ಮಾಡಿದ್ದೇವೆ. ಆದರೆ ಅಖಿಲೇಶ್‌ ಯಾದವ್‌ ಇದರಲ್ಲಿ ಕನಿಷ್ಠ ₹250ಕೋಟಿ ಹಣವನ್ನು ಬಡವರ ಉದ್ಧಾರಕ್ಕಾಗಿ ಬಳಕೆ ಮಾಡಿಲ್ಲ. ನಂತರದ ದಿನಗಳಲ್ಲಿ ನೀಡಲಾದ ಒಟ್ಟು ₹7000ಕೋಟಿ ಅನುದಾನದಲ್ಲಿ ಬಳಕೆಯಾಗಿರುವುದು ಕೇವಲ ₹280ಕೋಟಿ ಮಾತ್ರ. ಕೇಂದ್ರದಿಂದ ಅನುದಾನ ದೊರೆತರೂ ರಾಜ್ಯ ಸರ್ಕಾರಕ್ಕೆ ಅದನ್ನು ಬಳಸುವ ಅಥವಾ ರಾಜ್ಯದ ಏಳಿಗೆಗಾಗಿ ಶ್ರಮಿಸುವ ಯಾವುದೇ ಉದ್ದೇಶವಿಲ್ಲ’ ಎಂದು ಟೀಕಿಸಿದ್ದಾರೆ.

ಸೀಮಿತ ದಾಳಿಯ ಬಗ್ಗೆ ಮಾತನಾಡಿದ ಅವರು, ‘ನಮ್ಮ ಸೈನಿಕರು ಹೇಗೆ ಪಾಕಿಸ್ತಾನದ ಗಡಿದಾಟಿ ಉಗ್ರರನ್ನು ಸದೆಬಡಿದಿದ್ದರು ಮತ್ತು ಆಗ ನಮ್ಮ ದೇಶದ ಯಾವೊಬ್ಬ ಸೈನಿಕನೂ ಹತನಾಗಿರಲಿಲ್ಲ ಎಂಬುದು ದೇಶದ ಜನತೆಗೆ ಗೊತ್ತಿದೆ’

‘ಕೆಲವು ಪಕ್ಷಗಳು ದೇಶದಲ್ಲಿ ನೋಟು ರದ್ದತಿ ಕ್ರಮದ ಬಳಿಕ ತಮ್ಮ ಅಕ್ರಮ ಸಂಪತ್ತನ್ನು ಕಳೆದುಕೊಂಡು ಗೊಂದಲಕ್ಕೊಳಗಾಗಿವೆ’ ಎಂದು ಮಾಯಾವತಿ ನೇತೃತ್ವದ ಬಹುಜನ ಸಮಾಜವಾದಿ ಪಕ್ಷವನ್ನು ಕುರಿತು ವ್ಯಂಗ್ಯವಾಡಿದರು.

Comments are closed.