ರಾಷ್ಟ್ರೀಯ

ಪಂಜಾಬ್, ಗೋವಾ ಶಾಂತಿಯುತ ಮತದಾನ

Pinterest LinkedIn Tumblr


ಚಂಡೀಗಢ/ ಗೋವಾ, ಫೆ. ೪- ರಾಷ್ಟ್ರ ರಾಜಕಾರಣದ ಭವಿಷ್ಯದ ದಿಕ್ಸೂಚಿಯೆಂದೆ ಪರಿಗಣಿಸಲಾಗಿರುವ ಪಂಚರಾಜ್ಯಗಳ ಚುನಾವಣೆಗಳ ಪೈಕಿ ಪಂಜಾಬ್ ಹಾಗೂ ಗೋವಾ ವಿಧಾನಸಭಾ ಕ್ಷೇತ್ರಗಳಿಗೆ ಇಂದು (ಫೆ. ೪) ಮತದಾನ ಶಾಂತಿಯುತವಾಗಿ ನ‌ಡೆದಿದ್ದು, ಮಧ್ಯಾಹ್ನದವರೆಗೂ ಯಾವುದೇ ಅಹಿತಕರ ಘಟನೆಗಳು ನಡೆದ ಬಗ್ಗೆ ವರದಿಯಾಗಿಲ್ಲ.
ಮಧ್ಯಾಹ್ನದ ವೇಳೆಗೆ ಪಂಜಾಬಿನಲ್ಲಿ ಶೇ. 40 ರಷ್ಟು, ಗೋವಾದಲ್ಲಿ ಶೇ. 45 ರಷ್ಟು ಮತದಾನ ಆಗಿದೆ. ಪಂಜಾಬ್‌ನ 117 ವಿಧಾನಸಭಾ ಕ್ಷೇತ್ರ ಹಾಗೂ ಗೋವಾದ 40 ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ಇಂದು ಬೆಳಗ್ಗಿನಿಂದಲೇ ಆರಂಭವಾಗಿದ್ದು, ಪಂಜಾಬ್‌ನಲ್ಲಿ 1145 ಅಭ್ಯರ್ಥಿಗಳು ಹಾಗೂ ಗೋವಾದ ವಿಧಾನಸಭಾ ಕ್ಷೇತ್ರಗಳ 250 ಅಭ್ಯರ್ಥಿಗಳ ರಾಜಕೀಯ ಭವಿಷ್ಯಕ್ಕೆ ಮತದಾರ ಇಂದು ಮುದ್ರೆ ಒತ್ತಿದ್ದಾನೆ.
ಪಂಜಾಬಿನಲ್ಲಿ ಆಡಳಿತಾರೂಢ ಶಿರೋಮಣಿ ಅಕಾಲಿದಳ ಹಾಗೂ ಬಿಜೆಪಿ ನೇತೃತ್ವದ ಮೈತ್ರಿಕೂಟ ಅಧಿಕಾರ ಉಳಿಸಿಕೊಂಡು 4ನೇ ಬಾರಿಗೆ ಅಧಿಕಾರ ಗದ್ದುಗೆ ಹಿಡಿಯಲು ಕಸರತ್ತು ನಡೆಸಿವೆ. ಈ ಮೈತ್ರಿಕೂಟಕ್ಕೆ ಕಾಂಗ್ರೆಸ್ ಹಾಗೂ ಆಮ್ ಆದ್ಮಿಗಳು ಪಕ್ಷಗಳು ಪ್ರಬಲ ಪೈಪೋಟಿ ಹೊಂದಿದ್ದು, ಅಧಿಕಾರ ಹಿಡಿಯುವ ಕನಸು ಕಾಣುತ್ತಿವೆ.
ಪಂಜಾಬ್‌ನಲ್ಲಿ ಶಿರೋಮಣಿ ಅಕಾಲಿ ದಳ 94 ಸ್ಥಾನಗಳಲ್ಲಿ ಬಿಜೆಪಿ 23 ಸ್ಥಾನಗಳಲ್ಲಿ ಕಣಕ್ಕಿಳಿದಿವೆ,. ಕಾಂಗ್ರೆಸ್ ಎಲ್ಲಾ 117 ಸ್ಥಾನಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಇದೇ ಮೊದಲ ಬಾರಿಗೆ ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿರುವ ಆಮ್ ಆದ್ಮಿ ಪಕ್ಷ 112 ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ನಿಲ್ಲಿಸಿದೆ.
ಆಪ್‌ನ ಮಿತ್ರ ಪಕ್ಷ ಲೋಕ್ ಇನ್ಸಾಫ್ ಪಕ್ಷ 5 ಸ್ಥಾನಗಳಲ್ಲಿ ಸ್ಪರ್ಧಿಸಿದೆ. ಇವುಗಳಲ್ಲದೆ ಬಿಎಸ್‌ಪಿ, ಅಪ್ ನಾ ಪಂಜಾಬ್ ಪಕ್ಷ, ಸಿಪಿಐ, ಸಿಪಿಎಂ, ಶಿರೋಮಣಿ ಅಕಾಲಿದಳ ಅಮೃತಸರ ಪಕ್ಷ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ.
ಪಂಜಾಬ್‌ನ 117 ವಿಧಾನಸಭಾ ಕ್ಷೇತ್ರಗಳಿಗೆ ಒಟ್ಟು 1145 ಅಭ್ಯರ್ಥಿಗಳು ಕಣದಲ್ಲಿದ್ದು, 1.98 ಲಕ್ಷ ಮತದಾರರು ಕಣದಲ್ಲಿರುವ ಅಭ್ಯರ್ಥಿಗಳ ರಾಜಕೀಯ ಹಣೆಬರಹಕ್ಕೆ ಇವರು ಮೊಹರು ಹಾಕಿದರು. ಪಂಜಾಬ್‌ನ ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್, ಉಪಮುಖ್ಯಮಂತ್ರಿ ಸುಖ್‌ವೀರ್ ಸಿಂಗ್ ಬಾದಲ್ ಅವರ ಪತ್ನಿ ಕೇಂದ್ರ ಸಚಿವೆ ಹರ್‌ಸಿಮಿಕ್ ಕೌರ್ ಇಂದು ಬೆಳಿಗ್ಗೆಯೇ ಮತ ಚಲಾಯಿಸಿದರು.
ಗೋವಾದಲ್ಲೂ ಮತದಾನ
ಗೋವಾದ 40 ವಿಧಾನಸಭಾ ಕ್ಷೇತ್ರಗಳಿಗೆ ಇಂದು ನಡೆದಿರುವ ಮತದಾನ ಶಾಂತಿಯುತವಾಗಿದ್ದು, ಅಧಿಕಾರ ಉಳಿಸಿಕೊಳ್ಳಲು ಬಿಜೆಪಿ ಪೈಪೋಟಿ ನಡೆಸಿದೆ. ಬಿಜೆಪಿಗೆ ಕಾಂಗ್ರೆಸ್ ಪಕ್ಷ ಪ್ರಬಲ ಸ್ಪರ್ಧೆ ನೀಡಿದ್ದು, ಅಧಿಕಾರ ಮರಳಿ ಪಡೆಯಲು ಹೋರಾಟ ನಡೆಸಿದೆ. ಇವರ ಜೊತೆಗೆ ಆಮ್ ಆದ್ಮಿ ಪಕ್ಷ ಸಹ ಒಂದು ಕೈ ನೋಡಲು ಮುಂದಾಗಿದೆ. 40 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ, ಕಾಂಗ್ರೆಸ್, ಆಪ್ ಪಕ್ಷ ಸೇರಿದಂತೆ 250 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಕೇಂದ್ರ ಸಚಿವರುಗಳಾದ ಮನೋಹರ್ ಪಾರಿಕ್ಕರ್, ಶ್ರೀಪಾದ್ ನಾಯಕ್ ಹಾಗೂ ಗೋವಾ ಮುಖ್ಯಮಂತ್ರಿ ಲಕ್ಷ್ಮಿಕಾಂತ್ ಪರ್ಸೇಕರ್ ಇವರುಗಳು ಸಹ ಇಂದು ಬೆಳಿಗ್ಗೆ ಮತ ಹಾಕಿದರು.
ಬಿಗಿ ಭದ್ರತೆ
ಈ ಎರಡೂ ರಾಜ್ಯಗಳಲ್ಲಿ ನ್ಯಾಯಸಮ್ಮತ ಹಾಗೂ ಮುಕ್ತ ಚುನಾವಣೆ ನಡೆಸಲು ಚುನಾವಣಾ ಆಯೋಗ ಎಲ್ಲಾ ಸಿದ್ಧತೆ ಕೈಗೊಂಡಿದೆ. ಮತಗಟ್ಟೆಗಳ ಸುತ್ತ ಬಿಗಿ ಭದ್ರತೆಯನ್ನು ಕಲ್ಪಿಸಲಾಗಿದ್ದು, ಭದ್ರತೆಗೆ 200 ಅರೆಸೇನಾ ಪಡೆಯ ತುಕ‌ಡಿಗಳನ್ನು ನಿಯೋಜಿಸಲಾಗಿದೆ.
ಗೋವಾದಲ್ಲಿ ಬಿಜೆಪಿಗೆ ಅಧಿಕಾರ
ಗೋವಾದಲ್ಲಿ ಮತ್ತೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವುದು ನಿಶ್ಚಿತ. ಸಂಪೂರ್ಣ ಬಹುಮತ ಪಡೆದು ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂಬುದು ಕೇಂದ್ರ ಸಚಿವ ಶ್ರೀಪಾದ ನಾಯ್ಕ ಪಣಜಿಯಲ್ಲಿಂದು ಹೇಳಿದರು.
ಇತಿಹಾಸ ನಿರ್ಮಾಣ
ಪಂಜಾಬ್ ಹಾಗೂ ಗೋವಾ ಪಕ್ಷಗಳ ವಿಧಾನಸಭಾ ಚುನಾವಣೆ ಇತಿಹಾಸ ನಿರ್ಮಿಸಲಿದೆ. ಈ ಎರಡೂ ರಾಜ್ಯಗಳಲ್ಲಿ ಆಪ್ ಪಕ್ಷ ಅಧಿಕಾರ ಹಿಡಿಯಲಿದೆ ಎಂದು ಆಪ್ ಮುಖ್ಯಸ್ಥ ಹಾಗೂ ದೆಹಲಿಯ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಟ್ವಿಟ್ ಮಾಡಿದ್ದಾರೆ.

Comments are closed.