ರಾಷ್ಟ್ರೀಯ

ತನ್ನ ತವರು ರಾಜ್ಯ ಗೋವಾ ರಾಜಕಾರಣಕ್ಕೆ ವಾಪಸ್ಸು: ಪರಿಕ್ಕರ್ ಇಂಗಿತ

Pinterest LinkedIn Tumblr


ಪಣಜಿ, ಫೆ. ೪- ನಾನು ಪಕ್ಷದ ನಿಷ್ಠಾವಂತ ಕಾರ್ಯಕರ್ತ, ಪಕ್ಷದ ನಿರ್ದೇಶನದಂತೆ ಕಾರ್ಯನಿರ್ವಹಿಸುತ್ತೇನೆ ಎಂದು ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಹೇಳಿದ್ದಾರೆ.
ಗೋವಾ ರಾಜಕಾರಣಕ್ಕೆ ವಾಪಸ್ಸಾಗಲಿದ್ದಾರೆಂಬ ಊಹಾಪೋಹಗಳ ನಡುವೆಯೇ ಪತ್ರಕರ್ತರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿರುವ ಅವರು, `ದೆಹಲಿಯಲ್ಲಿ ಗೋವಾ ಊಟ ಕಳೆದುಕೊಂಡಿದ್ದೇನೆ’ ಎಂದರು.

ಇದನ್ನು ಜನರು ಹೇಗಾದರೂ ಅರ್ಥಮಾಡಿಕೊಳ್ಳಬಹುದೆಂದರು. ನಾನು ಪಕ್ಷದ ಕಾರ್ಯಕರ್ತ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಹೇಳಿದಂತೆ ನಡೆದುಕೊಳ್ಳುತ್ತೇನೆಂದರು.

ನಿಮ್ಮ ಪಕ್ಷ ಅಧಿಕಾರಕ್ಕೆ ಬಂದರೆ, ಗೋವಾದ ಮುಂದಿನ ಮುಖ್ಯಮಂತ್ರಿಯಾಗುವಿರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, `ದೆಹಲಿಯಲ್ಲಿರುವುದರಿಂದ ನನ್ನ ತೂಕದಲ್ಲಿ 4 ಕೆ.ಜಿ. ಕಡಿಮೆಯಾಗಿದೆ. ಇದಕ್ಕೆ ಪ್ರಮುಖ ಕಾರಣ, ಊಟ’ ಎಂದು ಹೇಳಿದ್ದಾರೆ.

ನಾನು ಗೋವಾದ ಊಟದ ಬಗ್ಗೆ ಹೇಳಿದ್ದೇನೆ. ಇದನ್ನು ನೀವು ಹೇಗಾದರೂ ಅರ್ಥೈಸಿಕೊಳ್ಳಬಹುದು ಎಂದು ಅವರು ತಿಳಿಸಿದರು. ಪಣಜಿ ವಿಧಾನಸಭಾ ಕ್ಷೇತ್ರದ ಮತಗಟ್ಟೆಯೊಂದರಲ್ಲಿ ಮೊದಲ ಮತದಾನ ಮಾಡಿದ ಕೆಲವರಲ್ಲಿ ಪರಿಕ್ಕರ್ ಸೇರಿದ್ದು, ಇಲ್ಲಿ ಈ ಬಾರಿ ಶೇ. 85ರಷ್ಟು ಮತದಾನವಾಗುವ ನಿರೀಕ್ಷೆ ಇದೆ.

ಆರಂಭಿಕ ವರದಿಗಳ ಪ್ರಕಾರ ರಾಜ್ಯದೆಲ್ಲೆಡೆ ಮತದಾನ ಚುರುಕಿನಿಂದ ನಡೆಯುತ್ತಿದೆ. ಈ ಬಾರಿ ಶೇ. 86ರಷ್ಟು ಮತದಾನ ಆಗಬಹುದೆಂದರು. ಬಿಜೆಪಿಗೆ ಸ್ಪಷ್ಟ ಬಹುಮತ ಸಿಗಲಿದೆ ಎಂಬ ನಿರೀಕ್ಷೆ ಇದೆ. ಬಿಜೆಪಿ 22 ರಿಂದ 25 ಸ್ಥಾನಗಳಲ್ಲಿ ಗೆಲ್ಲಬಹುದೆಂದು ಹೇಳಲಾಗುತ್ತಿದೆ. ಅದಕ್ಕಿಂತ ಹೆಚ್ಚು ಸ್ಥಾನಗಳಲ್ಲಿ ಗೆಲ್ಲುವ ವಿಶ್ವಾಸ ತಮಗಿದೆ ಎಂದರು.

Comments are closed.