ಚೆನ್ನೈ, ಫೆ ೪- ತಮಿಳುನಾಡು ಮುಖ್ಯಮಂತ್ರಿ ಜಯಲಿಲಿತಾ ನಿಧನದ ನಂತರ ಎಐಎಡಿಎಂಕೆಯಲ್ಲಿ ದಿನಕ್ಕೊಂದು ನಾಟಕೀಯ ಬೆಳವಣೆಗೆಗಳು ನಡೆಯುತ್ತಿದ್ದು, ‘ಅಮ್ಮ’ನಿಂದ ತೆರವಾದ ಸ್ಥಾನಕ್ಕೆ ‘ಚಿನ್ನಮ್ಮ’ ಶಶಿಕಲಾ ನಟರಾಜನ್ ಅವರನ್ನು ಪ್ರತಿಷ್ಠಾಪಿಸಲು ಸಿದ್ಧತೆಗಳು ಭರದಿಂದ ಸಾಗಿದೆ.
ಇತ್ತೀಚೆಗೆ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗುವಲ್ಲಿ ಯಶಸ್ವಿಯಾಗಿರುವ ಶಶಿಕಲಾ, ರಾಜ್ಯದ ಮುಖ್ಯಮಂತ್ರಿ ಪಟ್ಟಕ್ಕೇರುವುದಕ್ಕೆ ಮುಹೂರ್ತ ಸನ್ನಿಹಿತವಾಗಿದೆ. ನಾಳೆ ಎಐಎಡಿಎಂಕೆ ಶಾಸಕಾಂಗ ಪಕ್ಷದ ಸಭೆ ನಡೆಯಲಿದ್ದು, ಸಭೆಯಲ್ಲಿ ಶಶಿಕಲಾ ಅವರನ್ನು ತಮ್ಮ ನೂತನ ನಾಯಕಿಯಾಗಿ ಸರ್ವಾನುಮತದಿಂದ ಆಯ್ಕೆ ಮಾಡಿಕೊಳ್ಳವ ಸಾಧ್ಯತೆ ಇದೆ.
ಹಾಲಿ ಮುಖ್ಯಮಂತ್ರಿ ಓ.ಪನ್ನೀರ್‌ಸೆಲ್ವಂ ಅವರನ್ನು ಕೆಳಗಿಳಿಸಿ ಶಶಿಕಲಾ ಅವರನ್ನು ಮುಖ್ಯಮಂತ್ರಿ ಪಟ್ಟಕ್ಕೇರಿಸಲಾಗುತ್ತಿದೆ. ಇದೇ ಉದ್ದೇಶಕ್ಕಾಗಿ ಶಶಿಕಲಾ ನಟರಾಜನ್ ನಾಳೆ ಎಐಎಡಿಎಂಕೆ ಪಕ್ಷದ ಸಭೆ ಕರೆದಿದ್ದು, ಸಭೆಯಲ್ಲಿ ಈ ಬಗ್ಗೆ ಅಧಿಕೃತ ನಿರ್ಧಾರ ಕೈಗೊಳ್ಳಲಿದ್ದಾರೆ. ತಮಿಳುನಾಡು ನೂತನ ಮುಖ್ಯಮಂತ್ರಿಯಾಗಿ ಶಶಿಕಲಾ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆಯಿದ್ದು, ಈ ಕುರಿತು ತಯಾರಿ ನಡೆದಿದೆ. ಶಶಿಕಲಾ ಅವರ ಆಪ್ತ ಜ್ಯೋತಿಷಿಗಳು ಈ ಬಗ್ಗೆ ಸಲಹೆ ನೀಡಿದ್ದಾರೆ ಎನ್ನಲಾಗಿದೆ.
ಈ ನಿಟ್ಟಿನಲ್ಲಿ ಸೋಮವಾರ ಶಶಿಕಲಾ ನಟರಾಜನ್ ತಮಿಳುನಾಡಿನ ಸಿಎಂ ಆಗಿ ಪದಗ್ರಹಣ ಮಾಡಲಿದ್ದು, ಅಂದು ರಾಜ್ಯದ ಎಲ್ಲಾ ಶಿವ ದೇವಾಲಯಗಳಲ್ಲಿ ಕುಂಬಾಭಿಷೇಕ ನಡೆಯಲಿದೆ ಎಂದು ಎಐಎಡಿಎಂಕೆ ಪಕ್ಷದ ಉನ್ನತ ಮೂಲಗಳಿಂದ ತಿಳಿದುಬಂದಿದೆ. ನಾಳೆ ಮಧ್ಯಾಹ್ನ ಪ್ರಧಾನ ಕಾರ್ಯದರ್ಶಿ ಶಶಿಕಲಾ ನಟರಾಜನ್ ಅವರ ನೇತೃತ್ವದಲ್ಲಿ ಶಾಸಕರ ಸಭೆ ನಡೆಯಲಿದ್ದು, ಮಹತ್ವ ನಿರ್ಧಾರ ಕೈಗೊಳ್ಳವ ಸಾಧ್ಯತೆ ಇದೆ ಎಂದು ಸ್ಥಳೀಯ ಅಣ್ಣಾ ನ್ಯೂಸ್ ವಾಹಿನಿ ಕೂಡ ಪ್ರಕಟಿಸಿದೆ.
ನಾಳೆ ಅಣ್ಣಾಡಿಎಂಕೆ ಶಾಸಕಾಂಗ ಪಕ್ಷದ ಸಭೆ ನಡೆಯುವ ವಿಚಾರವನ್ನು , ಆ ಸಭೆಯಲ್ಲಿ ಶಶಿಕಲಾ ಅವರು ಸಿಎಂ ಆಗುವ ನಿಟ್ಟಿನಲ್ಲಿ ನಿರ್ಣಯ ಕೈಗೊಳ್ಳಲಾಗುತ್ತಿದೆ ಎಂಬ ವಿಚಾರವನ್ನು ಪಕ್ಷದ ವಕ್ತಾರೆ ಸಿ ಆರ್ ಸರಸ್ವತಿ ಖಚಿತಪಡಿಸಿದ್ದಾರೆ. ಶಶಿಕಲಾ ನಟರಾಜನ್ ಅವರು ತಾವು ಸಿಎಂ ಗಾದಿಗೇರುವ ನಿಟ್ಟಿನಲ್ಲಿ ಹಾಲಿ ಸಿಎಂ ಪನ್ನೀರ್‌ಸೆಲ್ವಂ ಮತ್ತವರ ಗುಂಪಿನಿಂದ ಯಾವುದೇ ಅಡೆ ತಡೆ ಉಂಟಾಗದಂತೆ ವ್ಯೂಹ ರಚಿಸುತ್ತಿದ್ದಾರೆ ಎನ್ನಲಾಗುತ್ತಿದೆ. ಒಟ್ಟಾರೆ ಶನಿವಾರ ದಿಢೀರನೇ ತಮಿಳುನಾಡಿನ ರಾಜಕೀಯ ಚಟುವಟಿಕೆ ಹೆಚ್ಚಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಬಹಳ ಚರ್ಚೆ ಆಗುತ್ತಿದೆ.
ಅಲ್ಲದೇ ಈ ಹಿಂದೆ ಜಯ ನಿಧನರಾದ ನಂತರ ಶಶಿಕಲಾ ನಟರಾಜನ್ ಅವರು ತಕ್ಷಣ ತಮಿಳುನಾಡಿನ ಸಿಎಂ ಆಗಿ ಅಧಿಕಾರ ವಹಿಸಿಕೊಳ್ಳಬೇಕು ಎಂದು ಎಐಎಡಿಎಂಕೆಯ ಹಲವು ಹಿರಿಯ ಮುಖಂಡರು ಒತ್ತಾಯಿಸುತ್ತಿದ್ದಾರೆ. ಲೋಕಸಭಾ ಉಪಸ್ಪಿಕರ್ ಎಂ.ತಂಬಿದೊರೈ, ಕಂದಾಯ ಸಚಿವ ಆರ್.ಬಿ. ಉದಯ್ ಕುಮಾರ್ ಸೇರಿದಂತೆ ಹಲವರು ಜಯಲಲಿತಾ ಅವರು ಹೊಂದಿದ್ದ ಹುದ್ದೆಯನ್ನು ಅಲಂಕರಿಸುವಂತೆ ಶಶಿಕಲಾ ಅವರಿಗೆ ಮನವಿ ಮಾಡಿದ್ದರು.
ಜಯಲಲಿತಾ ಅವರಿಗೆ ತುಂಬಾ ಬೇಕಾದವರಲ್ಲಿ ಚಿನ್ನಮ್ಮ ಶಶಿಕಲಾ ಒಬ್ಬರು, ಪಕ್ಷದ ಜವಾಬ್ದಾರಿ ಜೊತೆಗೆ ರಾಜ್ಯದ ಹಿತಾಸಕ್ತಿ ಕಾಪಾಡುವುದು ಕೂಡ ಮುಖ್ಯವಾಗಿದೆ, ಜಯಲಲಿತಾ ಅವರಂತೆ ಪಕ್ಷ ಮತ್ತು ರಾಜ್ಯದ ಚುಕ್ಕಾಣಿ ಹಿಡಿಯುವುದು ಶಶಿಕಲಾ ಅವರಿಗೆ ಮಾತ್ರ ಸಾಧ್ಯ ಎಂದು ಉದಯ್ ಕುಮಾರ್ ಅವರು ಹೇಳಿದ್ದರು. ಒಟ್ಟಿನಲ್ಲಿ ಚಿನ್ನಮ್ಮ ತಮಿಳುನಾಡಿನಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು ಸಿದ್ದಾರಾಗಿದ್ದಾರೆಯೇ…. ಎಲ್ಲಾವೂ ನಾಳೆ ಅಥವಾ ನಾಡಿದ್ದು ಸ್ಪಷ್ಟವಾಗಲಿದೆ.
Comments are closed.