ರಾಷ್ಟ್ರೀಯ

ಹಿಮದಲ್ಲಿ ತಾಯಿಯ ಮೃತದೇಹ ಹೊತ್ತು 10 ಗಂಟೆಯಲ್ಲಿ 30 ಕಿ.ಮಿ.ಸಾಗಿದ ಯೋಧ

Pinterest LinkedIn Tumblr


ನವದೆಹಲಿ: ಸೇನಾ ಯೋಧನೊಬ್ಬ ಹಿಮವನ್ನು ಲೆಕ್ಕಿಸದೆ 30 ಕಿ. ಮೀವರೆಗೂ ತಾಯಿಯ ಮೃತದೇಹವನ್ನು ಹೆಗಲ ಮೇಲೆ ಹೊತ್ತು ಸ್ವಗ್ರಾಮಕ್ಕೆ ತಂದಿರುವ ಘಟನೆ ನಡೆದಿದೆ.

ಮೊಹಮದ್‌ ಅಬ್ಬಾಸ್‌ ಎಂಬ ಯೋಧ ಜಮ್ಮು ಕಾಶ್ಮೀರದ ಕರ್ನಾ ತಹಸಿಲ್‌ ಪ್ರಾಂತ್ಯದವರಾಗಿದ್ದಾರೆ. ಪಂಜಾಬಿನ ಪಠಾಣಕೋಟ್‌ನಲ್ಲಿ ಸೇವಾ ನಿರತರಾಗಿದ್ದರು. ಜಮ್ಮು ಕಾಶ್ಮೀರದಲ್ಲಿ ಹೆಚ್ಚಿರುವ ಚಳಿಯಿಂದ ರಕ್ಷಿಸಲು ಕೆಲ ದಿನಗಳ ಹಿಂದೆ ಅವರ ತಾಯಿಯನ್ನು ಪಠಾಣಕೋಟ್‌ಗೆ ಕರೆಸಿದ್ದರು. ಜನವರಿ 28 ರಂದು ಹೃದಯಾಘಾತದಿಂದ ಅಬ್ಬಾಸ್‌ ಅವರ ತಾಯಿ ಮರಣ ಹೊಂದಿದ್ದಾರೆ.

ಮರುದಿನ ಸೇನೆಯು ಮೃತದೇಹವನ್ನು ಶ್ರೀನಗರಕ್ಕೆ ರವಾನಿಸಿದ್ದಾರೆ. ಅಲ್ಲಿಂದ ಗಡಿಯಲ್ಲಿರುವ ಯೋಧನ ಸ್ವಗ್ರಾಮ ಕರ್ನಾ ತಲುಪಲು ಪ್ರತಿಕೂಲ ಹವಾಮಾನ ಮತ್ತು ಹಿಮಮಳೆಯಿಂದ ಸಂಚಾರಕ್ಕೆ ಅಡಚಣೆಯಾಗಿದೆ. ಭಾರಿ ಹಿಮಪಾತದಿಂದ ರಸ್ತೆಗಳು ಮುಚ್ಚಿಹೋಗಿವೆ. ಸತತವಾಗಿ ಮೂರು ದಿನ ಕಳೆದ ಯೋಧನಿಗೆ ಹವಾಮಾನ ಸಹಜ ಸ್ಥಿತಿಗೆ ತಲುಪುವ ನಿರೀಕ್ಷೆ ಹುಸಿಯಾಗಿದೆ. ಆತ ಸಹಾಯಕ್ಕಾಗಿ ಯಾಚಿಸಿದ್ದಾನೆ. ಆದರೆ ಕ್ಲಿಷ್ಟ ಪರಿಸ್ಥಿತಿಯಲ್ಲಿ ಸೇನೆಯೂ ಸಹಾಯ ಮಾಡದೆ ಕೈಚಲ್ಲಿದೆ.

ಕುಪ್ವಾರಾದವರೆಗೆ ಸೇನಾ ಬ್ಯಾರಕ್‌ನಲ್ಲಿ ತಾಯಿಯ ದೇಹವನ್ನು ತಂದಿದ್ದಾನೆ. ಅಲ್ಲಿಂದ ಅಬ್ಬಾಸನ ಗ್ರಾಮ 30 ಕಿ.ಮಿ. ದೂರವಿದೆ. ಎತ್ತರ ಪ್ರದೇಶದಲ್ಲಿರುವ ಈ ಗ್ರಾಮಕ್ಕೆ ವಾಹನ ಸಂಚರಿಸಲು ಸಾಧ್ಯವಿಲ್ಲದ ಪರಿಸ್ಥಿತಿಯಲ್ಲಿ ಛಲಬಿಡದ ಯೋಧ ಸೇನಾ ತಾಯಿ ದೇಹವನ್ನು ಹೆಗಲ ಮೇಲೆ ಹೊತ್ತು ಕೊರೆಯುವ ಚಳಿಯಲ್ಲಿ 10 ಗಂಟೆಯಲ್ಲಿ ಸುಮಾರು 30 ಕಿ.ಮಿ. ದೂರ ಸಾಗಿದ್ದಾನೆ.

ಈ ಸಂದರ್ಭದಲ್ಲಿ ಕೆಲ ಸಂಬಂಧಿಕರು ಈತನ ಸಹಾಯಕ್ಕೆ ಧಾವಿಸಿದ್ದಾರೆ. ‘5–6 ಇಂಚು ಆಳಕ್ಕೆ ಹಿಮದಲ್ಲಿ ಕಾಲು ಹುದುಗಿ ಹೋಗುತ್ತಿತ್ತು. ಸೇನೆಯವರು ಹೆಲಿಕಾಪ್ಟರ್‌ ಮೂಲಕ ಮೃತದೇಹವನ್ನು ತಲುಪಿಸಬಹುದಿತ್ತು. ಸೇನಾಧಿಕಾರಿಗಳು ಮಾನವೀಯತೆ ಮರೆತಿದ್ದಾರೆ’ ಎಂದು ಅಬ್ಬಾಸ್‌ ಸಂಬಂಧಿಯೊಬ್ಬರು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತ‍ಪಡಿಸಿದ್ದಾರೆ.

ಸ್ವಗ್ರಾಮದಲ್ಲೇ ಅಂತಿಮ ಸಂಸ್ಕಾರ ಜರುಗಬೇಕು ಎಂಬ ತಾಯಿಯ ಕೊನೆ ಆಸೆ ಈಡೇರಿಸಲು ತನ್ನ ಪ್ರಾಣವನ್ನು ಲೆಕ್ಕಿಸದೆ ತಾಯಿ ಇಚ್ಛೆ ಪೂರೈಸಿದ್ದಾನೆ.

Comments are closed.