ರಾಷ್ಟ್ರೀಯ

ಭಾರತ ದೇಶ ಅಮೆರಿಕದ ನಿಜವಾದ ಸ್ನೇಹಿತ ರಾಷ್ಟ್ರ: ಪ್ರಮಾಣ ವಚನದ ಬಳಿಕ ಮೊದಲ ಬಾರಿಗೆ ಮೋದಿಗೆ ಕರೆ ಮಾಡಿದ ಟ್ರಂಪ್

Pinterest LinkedIn Tumblr

ನವದೆಹಲಿ: ಅಮೆರಿಕದ ನೂತಕನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇದೇ ಮೊದಲ ಬಾರಿಗೆ ದೂರವಾಣಿ ಕರೆ ಮಾಡಿ ಚರ್ಚೆ ನಡೆಸಿದ್ದಾರೆ.

ಅಮೆರಿಕದ 45ನೇ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಿದ ನಾಲ್ಕು ದಿನಗಳ ಬಳಿಕ ಅಂದರೆ ನಿನ್ನೆ ರಾತ್ರಿ ಸುಮಾರು 11.30ರ ಸುಮಾರಿನಲ್ಲಿ ಟ್ರಂಪ್ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕರೆ ಮಾಡಿದ್ದು, ಈ ವೇಳೆ ಭಾರತ ದೇಶ ಅಮೆರಿಕದ ನಿಜವಾದ ಸ್ನೇಹಿತ ರಾಷ್ಟ್ರ ಎಂದು ಬಣ್ಣಿಸಿದ್ದಾರೆ. ಅಂತೆಯೇ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಮೆರಿಕಕ್ಕೆ ಭೇಟಿ ನೀಡುವಂತೆ ಆಹ್ವಾನ ನೀಡಿದ್ದು, ತಮ್ಮನ್ನು ಬರ ಮಾಡಿಕೊಳ್ಳಲು ತಾವು ಉತ್ಸುಕರಾಗಿರುವುದಾಗಿ ಟ್ರಂಪ್ ಹೇಳಿದ್ದಾರೆ. ದೂರವಾಣಿ ಕರೆ ವೇಳೆ ಉಭಯ ನಾಯಕರು ವ್ಯಾಪಾರ, ರಕ್ಷಣೆ ಮತ್ತು ಭಯೋತ್ಪಾದನೆ ಕುರಿತಂತೆ ಚರ್ಚಿಸಿದ್ದಾರೆ ಎಂದು ತಿಳಿದುಬಂದಿದೆ.

ಉಭಯ ನಾಯಕರು ಉಭಯ ದೇಶಗಳ ನಡುವಿನ ಸೌಹಾರ್ಧ ಸಂಬಂಧ ಮತ್ತಷ್ಟು ಉತ್ತಮಪಡಿಸುವ ನಿಟ್ಟಿನಲ್ಲಿ ಮತ್ತು ರಕ್ಷಣೆ ಮತ್ತು ವಾಣಿಜ್ಯ ಸಂಬಂಧ ಹೆಚ್ಚಿಸುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಉಭಯ ನಾಯಕರು ಚರ್ಚಿಸಿದ್ದಾರೆ.

ದಕ್ಷಿಣ ಮತ್ತು ಮಧ್ಯ ಏಷ್ಯಾ ರಕ್ಷಣೆ ಕುರಿತು ಚರ್ಚಿಸಿದ ನಾಯಕರು
ಇದೇ ವೇಳೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು, ಚೀನಾದ ಪ್ರಾಬಲ್ಯವಿರುವ ದಕ್ಷಿಣ ಮತ್ತು ಮಧ್ಯ ಏಷ್ಯಾದ ರಕ್ಷಣೆ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಚರ್ಚಿಸಿದ್ದಾರೆ. ಇನ್ನು ವಿಶ್ವ ಸಮುದಾಯವನ್ನು ಪೀಡಿಸುತ್ತಿರುವ ಭಯೋತ್ಪಾದನೆ ವಿರುದ್ಧದ ಹೋರಾಟಕ್ಕೆ ಭುಜಕ್ಕೆ ಭುಜಕೊಟ್ಟು ಹೋರಾಡುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಅಮೆರಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಅವರು ಗೆಲುವು ಸಾಧಿಸಿದ ಬಳಿಕ ಪ್ರಧಾನಿ ನರೇಂದ್ರ ಮೋದಿ ಟ್ರಂಪ್ ಗೆ ಕರೆ ಮಾಡಿ ಶುಭಾಶಯ ತಿಳಿಸಿದ್ದರು. ಟ್ರಂಪ್ ಗೆಲುವಿನ ಬಳಿಕ ಅವರಿಗೆ ಕರೆ ಮಾಡಿದ್ದ ಮೊದಲ ಐದು ವಿಶ್ವನಾಯಕರಲ್ಲಿ ಪ್ರಧಾನಿ ನರೇಂದ್ರ ಮೋದಿ ಕೂಡ ಒಬ್ಬರಾಗಿದ್ದರು. ಅಧಿಕಾರ ಸ್ವೀಕರಿಸಿದ ಬಳಿಕ ವಿಶ್ವ ನಾಯಕರಿಗೆ ಕರೆ ಮಾಡುತ್ತಿರುವ ಡೊನಾಲ್ಡ್ ಟ್ರಂಪ್ ಈ ಹಿಂದೆ ಜನವರಿ 21ರಂದು ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೇಯು ಮತ್ತು ಮೆಕ್ಸೆಕೋ ಪ್ರಧಾನಿ ಪಿನಾನೀಟೋ ಅವರಿಗೆ ಕರೆ ಮಾಡಿದ್ದರು.

ಕಳೆದ ಭಾನುವಾರವಷ್ಟೇ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತಾನ್ಯು ಮತ್ತು ನಿನ್ನೆ ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತಾಹ್ ಎಲ್ ಸಿಸಿ ಅವರೊಂದಿಗೆ ಟ್ರಂಪ್ ಕರೆ ಮಾಡಿ ಮಾತನಾಡಿದ್ದರು.

Comments are closed.