ರಾಷ್ಟ್ರೀಯ

ಉ.ಪ್ರ ಚುನಾವಣೆಯಲ್ಲಿ ಬಿಜೆಪಿ ಕೆಟ್ಟದಿನಗಳನ್ನು ಎದುರಿಸಲು ಸಿದ್ಧಗೊಳ್ಳಬೇಕು: ಮಾಯಾವತಿ

Pinterest LinkedIn Tumblr


ಲಖನೌ: ಕೇಂದ್ರ ಸರ್ಕಾರ ನೋಟು ಅಮಾನ್ಯ ಮಾಡಿದ ಪರಿಣಾಮ ಉತ್ತರ ಪ್ರದೇಶದಲ್ಲಿ ಶೇ.90 ರಷ್ಟು ಜನರು ನಗದು ಬಿಕ್ಕಟ್ಟಿನಿಂದ ಕಂಗಾಲಾಗಿದ್ದಾರೆ. ಚುನಾವಣೆಯಲ್ಲಿ ಬಿಜೆಪಿ ಕೆಟ್ಟದಿನಗಳನ್ನು ಎದುರಿಸಲು ಸಿದ್ಧಗೊಳ್ಳಬೇಕು ಎಂದು ಮಾಯಾವತಿ ಹೇಳಿದ್ದಾರೆ.
ನೋಟು ಅಮಾನ್ಯ ನಿರ್ಧಾರ ಪ್ರಕಟಿಸಿ 50 ದಿನಗಳು ಕಳೆದರೂ, ಈ ವರೆಗೂ ಎಷ್ಟು ಕಪ್ಪುಹಣ ವಾಪಸ್ ಪಡೆಯಲಾಗಿದೆ ಎಂಬುದನ್ನು ಪ್ರಧಾನಿ ನರೇಂದ್ರ ಮೋದಿ ಬಹಿರಂಗಪಡಿಸಿಲ್ಲ. ಒಳ್ಳೆಯ ದಿನಗಳ ಭರವಸೆ ನೀಡಿದ್ದ ಬಿಜೆಪಿ ಈಗ ಉತ್ತರ ಪ್ರದೇಶದ್ಲಲಿ ಕೆಟ್ಟದಿನಗಳನ್ನು ಎದುರಿಸಲು ಸಿದ್ಧಗೊಳ್ಳಬೇಕಿದೆ ಎಂದು ಲಖನೌ ನ ರ್ಯಾಲಿಯಲ್ಲಿ ಹೇಳಿದ್ದಾರೆ.
ಉತ್ತರ ಪ್ರದೇಶ ಚುನಾವಣೆಯಲ್ಲಿ ಬಿಎಸ್ ಪಿ ಏಕಾಂಗಿಯಾಗಿ ಸ್ಪರ್ಧಿಸಲಿದೆ ಎಂದು ಘೋಷಿಸಿರುವ ಅವರು, ಬಿಎಸ್ ಪಿ ಪಕ್ಷವೊಂದೇ ಬಿಜೆಪಿಯನ್ನು ಅಧಿಕಾರದಿಂದ, ಉತ್ತರ ಪ್ರದೇಶದಿಂದ ದೂರವಿಡಲು ಸಾಮರ್ಥ್ಯ ಹೊಂದಿದೆ ಎಂದಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ವರ್ಚಸ್ಸು ಸಂಪೂರ್ಣ ಕುಗ್ಗಿದೆ. ಬಿಜೆಪಿ ಹಾಗೂ ಸಮಾಜವಾದಿ ಪಕ್ಷ ಒಪ್ಪಂದ ಮಾಡಿಕೊಂಡಿವೆ ಎಂದು ಮಾಯಾವತಿ ಆರೋಪಿಸಿದ್ದಾರೆ.
ಇದೇ ವೇಳೆ ತಮ್ಮ ಸಹೋದರನ ವಿರುದ್ಧ ಅಕ್ರಮ ಸಂಪತ್ತು ಗಳಿಸಿರುವ ಆರೋಪ ಕೇಳಿಬಂದಿದ್ದು, ಐಟಿ ದಾಳಿ ನಡೆದಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಾಯಾವತಿ, ಉತ್ತರ ಪ್ರದೇಶದ ಚುನಾವಣೆ ಸಂದರ್ಭದಲ್ಲೇ ಬಿಜೆಪಿ ನೇತೃತ್ವದ ಸರ್ಕಾರಕ್ಕೆ ನನ್ನ ಕುಟುಂಬ ಸದಸ್ಯರು ನಡೆಸುತ್ತಿರುವ ಉದ್ಯಮದಲ್ಲಿನ ಹುಳುಕು ಕಂಡುಬಂದಿದೆ. ಒಂದು ವೇಳೆ ಅವರು ಅಕ್ರಮವಾಗಿ ಸಂಪತ್ತು ಗಳಿಸಿದ್ದರು ಎನ್ನುವುದಾದರೆ ಈ ಹಿಂದೆಯೇ ಏಕೆ ಐಟಿ ದಾಳಿ ನಡೆಸಲಿಲ್ಲ ಎಂದು ಪ್ರಶ್ನಿಸಿದ್ದಾರೆ.

Comments are closed.