ರಾಷ್ಟ್ರೀಯ

ಶೇ. 50ರಷ್ಟು ನೋಟು ಕೊರತೆ: ಆರ್‌ಬಿಐ ಅಂಕಿ–ಅಂಶದಿಂದ ಬಹಿರಂಗ

Pinterest LinkedIn Tumblr


ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಗರಿಷ್ಠ ಮುಖಬೆಲೆಯ ನೋಟುಗಳ ಚಲಾವಣೆ ರದ್ದು ಮಾಡುವ ಘೋಷಣೆ ಹೊರಡಿಸಿ ಹತ್ತು ವಾರ ಪೂರ್ಣಗೊಳ್ಳುತ್ತಿದ್ದರೂ, ನಗದು ಹಣದ ಲಭ್ಯತೆ ವಿಚಾರದಲ್ಲಿ ಪರಿಸ್ಥಿತಿ ಸುಧಾರಿಸಿಲ್ಲ.

₹1,000 ಮತ್ತು ₹ 500 ಮುಖಬೆಲೆಯ ₹ 15.44 ಲಕ್ಷ ಕೋಟಿ ಮೌಲ್ಯದ ನೋಟುಗಳನ್ನು ಚಲಾವಣೆಯಿಂದ ಹಿಂಪಡೆದು, ಹೊಸ ನೋಟುಗಳನ್ನು ಚಲಾವಣೆಗೆ ಬಿಟ್ಟ ನಂತರ ನಗದು ಲಭ್ಯತೆ ಸ್ಥಿತಿ ಸುಧಾರಿಸುತ್ತಿದೆ ಎಂದು ಸರ್ಕಾರ ಹೇಳುತ್ತಿದ್ದರೂ, ಅಂಕಿ–ಅಂಶಗಳು ಬೇರೆಯದೇ ಮಾಹಿತಿ ನೀಡುತ್ತಿವೆ.

ಕೇಂದ್ರ ಸರ್ಕಾರವು ನೋಟು ರದ್ದತಿ ಆದೇಶ ಹೊರಡಿಸುವ ನಾಲ್ಕು ದಿನಗಳ ಮೊದಲು ದೇಶದ ಜನರ ಕೈಯಲ್ಲಿದ್ದ ಒಟ್ಟು ನಗದಿನ ಶೇಕಡ 49ಕ್ಕಿಂತ ತುಸು ಹೆಚ್ಚಿನ ನಗದು ಈಗ ದೇಶದ ಜನರಲ್ಲಿದೆ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಶುಕ್ರವಾರ ಬಿಡುಗಡೆ ಮಾಡಿರುವ ಅಂಕಿ–ಅಂಶಗಳು ಹೇಳುತ್ತಿವೆ.

2016ರ ನವೆಂಬರ್‌ 4ರಂದು ದೇಶದಲ್ಲಿ ಒಟ್ಟು ₹ 17.74 ಲಕ್ಷ ಕೋಟಿ ಚಲಾವಣೆಯಲ್ಲಿತ್ತು. ಜನವರಿ 6ರಂದು ಚಲಾವಣೆಯಲ್ಲಿದ್ದ ನಗದಿನ ಮೊತ್ತ ₹ 8.73 ಲಕ್ಷ ಕೋಟಿ ಮಾತ್ರ ಎಂದು ಆರ್‌ಬಿಐ ನೀಡಿರುವ ಅಂಕಿಗಳು ತಿಳಿಸುತ್ತವೆ.

ಪರಿಸ್ಥಿತಿ ಹೀಗೇಕೆ?: ಈ ಕುರಿತು  ವಿವರ ನೀಡಿದ ಬ್ಯಾಂಕಿಂಗ್ ತಜ್ಞರು, ‘ನಗದು ಲಭ್ಯತೆ ಪರಿಸ್ಥಿತಿಯು ಹೊಸ ನೋಟುಗಳನ್ನು ಮುದ್ರಿಸುವ ಸಾಮರ್ಥ್ಯ ಹಾಗೂ ಅವುಗಳನ್ನು ಪರಿಣಾಮಕಾರಿಯಾಗಿ ದೇಶದ ಎಲ್ಲೆಡೆ ಚಲಾವಣೆಗೆ ಬಿಡುವ ತಾಕತ್ತನ್ನು ಅವಲಂಬಿಸಿರುತ್ತದೆ’ ಎಂದರು. ‘ಈ ಎರಡು ವಿಚಾರಗಳಲ್ಲಿ ನಮ್ಮ ಮಿತಿಗಳು ಹಲವಾರಿವೆ’ ಎಂದು ಅವರು ಹೇಳಿದರು.

ನಗದು ಲಭ್ಯತೆ ಪ್ರಮಾಣ ಕಡಿಮೆ ಇರುವ ಕಾರಣದಿಂದ ಬ್ಯಾಂಕ್‌ ಹಾಗೂ ಎಟಿಎಂ ಯಂತ್ರಗಳಿಂದ ನಗದು ಹಿಂಪಡೆಯಲು ವಿಧಿಸಿರುವ ಮಿತಿಯನ್ನು ಆರ್‌ಬಿಐ ತುಸು ಸಡಿಲಿಸಿದೆಯೇ ಹೊರತು ಪೂರ್ಣ ಪ್ರಮಾಣದಲ್ಲಿ ಹಿಂಪಡೆದಿಲ್ಲ.

ಈಗಿನ ಪರಿಸ್ಥಿತಿಯೇ ಮುಂದುವರೆದರೆ ನಗದು ಲಭ್ಯತೆ ಪ್ರಮಾಣ ಸಹಜ ಸ್ಥಿತಿಗೆ ಬರಲು ಇನ್ನೂ ಎಂಟರಿಂದ ಹತ್ತು ವಾರ ಬೇಕು ಎಂದು ತಜ್ಞರು ಅಂದಾಜಿಸಿದ್ದಾರೆ. ನೋಟು ರದ್ದತಿ ನಂತರ ಮಂದವಾಗಿರುವ ಅರ್ಥ ವ್ಯವಸ್ಥೆಯು, ನಗದು ಲಭ್ಯತೆ ಸರಿಹೋಗದ ಹೊರತು ಸುಧಾರಿಸುವುದಿಲ್ಲ ಎಂದು ಹೇಳಿದರು. ದೇಶದ ಒಟ್ಟು ಆಂತರಿಕ ಉತ್ಪಾದನೆಯ (ಜಿಡಿಪಿ) ಬೆಳವಣಿಗೆ ದರ ಈ ಬಾರಿ ಕಡಿಮೆಯಾಗಲಿದೆ ಎಂದು ಸರ್ಕಾರ ಹಾಗೂ ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆಗಳು ಈಗಾಗಲೇ ಹೇಳಿವೆ.

ನೋಟು ರದ್ದತಿಗೆ ಮೊದಲು ಚಲಾವಣೆಯಲ್ಲಿದ್ದ ₹ 17.74 ಲಕ್ಷ ಕೋಟಿ ಕರೆನ್ಸಿ ನೋಟುಗಳು ಪೂರ್ಣ ಪ್ರಮಾಣದಲ್ಲಿ ಪುನಃ ಚಲಾವಣೆಗೆ ಬರಲಿಕ್ಕಿಲ್ಲ ಎಂದು ಕೆಲವು ತಜ್ಞರು ಹೇಳಿದ್ದಾರೆ.

Comments are closed.