ರಾಷ್ಟ್ರೀಯ

ಬಿಎಸ್‍ಎಫ್, ಸಿಆರ್‌ಪಿಎಫ್‌ ನಂತರ ಭಾರತೀಯ ಸೇನೆಯ ಯೋಧನ ಅಳಲು

Pinterest LinkedIn Tumblr


ನವದೆಹಲಿ: ಬಿಎಸ್‍ಎಫ್, ಸಿಆರ್‌ಪಿಎಫ್‌ ಯೋಧರು ವಿಡಿಯೊ ಮೂಲಕ ಅಳಲು ತೋಡಿಕೊಂಡ ನಂತರ ಇದೀಗ ಭಾರತೀಯ ಸೇನೆಯ ಯೋಧ ಲಾನ್ಸ್ ನಾಯಕ್ ಯಗ್ಯ ಪ್ರತಾಪ್ ತಮಗೆ ಹಿರಿಯ ಅಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ವಿಡಿಯೊವೊಂದನ್ನು ಪ್ರಕಟಿಸಿದ್ದಾರೆ.

ಸೇನೆಯ ಅಧಿಕಾರಿಗಳು ಯೋಧರ ಮೇಲೆ ದೌರ್ಜನ್ಯವೆಸಗುತ್ತಿದ್ದಾರೆ. ಈ ಬಗ್ಗೆ ತಾನು ರಾಷ್ಟ್ರಪತಿ, ಪ್ರಧಾನ ಮಂತ್ರಿ ರಕ್ಷಣಾ ಸಚಿವ, ಗೃಹ ಸಚಿವ ಮತ್ತು ಸುಪ್ರೀಂಕೋರ್ಟ್‍ಗೆ ದೂರು ನೀಡಿದ್ದೇನೆ. ಹೀಗೆ ದೂರು ನೀಡಿದ ನಂತರ ಮೇಲಧಿಕಾರಿಗಳು ತನ್ನ ಮೇಲೆ ರಾಷ್ಟ್ರದ್ರೋಹದ ಆರೋಪ ಮತ್ತು ಕೋರ್ಟ್ ಮಾರ್ಷಲ್‍‍ ಎದುರಿಸಬೇಕಾಗಿ ಬರುತ್ತದೆ ಎಂದು ಬೆದರಿಕೆಯೊಡ್ಡಿದ್ದಾರೆ ಎಂದು ಪ್ರತಾಪ್ ಆರೋಪಿಸಿದ್ದಾರೆ.

ಕಳೆದೆ 15 ವರ್ಷಗಳಿಂದ ತಾನು ಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದೇನೆ. ಸೇನೆಯಲ್ಲಿ ಯೋಧರ ಮೇಲೆ ಯಾವ ರೀತಿ ದೌರ್ಜನ್ಯ ನಡೆಸಲಾಗುತ್ತಿದೆ ಎಂಬುದನ್ನು ನಾನು ಬಲ್ಲೆ. ಹಾಗಾಗಿ ಧೈರ್ಯ ಮಾಡಿ ನನ್ನ ದನಿಯೆತ್ತಿದ್ದೀನಿ. ನಮ್ಮ ಮೇಲಧಿಕಾರಿಗಳಿಗೆ ಎಲ್ಲ ರೀತಿಯ ಅಧಿಕಾರಗಳೂ ಇರುತ್ತವೆ. ನಾವೇನಾದರೂ ದೂರು ನೀಡಿದರೆ ಅವರು ನಮ್ಮ ಮೇಲೆಯೇ ಕ್ರಮ ತೆಗೆದುಕೊಳ್ಳುತ್ತಾರೆ ಎಂದು ಪ್ರತಾಪ್ ವಿಡಿಯೊದಲ್ಲಿ ಹೇಳಿದ್ದಾರೆ.

ಈ ದೌರ್ಜನ್ಯದ ವಿರುದ್ಧ ದನಿಯೆತ್ತಲೇ ಬೇಕು ಎಂದು ತೀರ್ಮಾನಿಸಿ 2016 ಜೂನ್ 15ರಂದು ನಾನು ರಾಷ್ಟ್ರಪತಿ, ಪ್ರಧಾನ ಮಂತ್ರಿ, ರಕ್ಷಣಾ ಸಚಿವರಿಗೆ ಮತ್ತು ಸುಪ್ರೀಂಕೋರ್ಟ್‍ಗೆ ಪತ್ರ ಬರೆದಿದ್ದೇನೆ.

ಈ ಪತ್ರ ಬರೆದ ನಂತರ ಬ್ರಿಗೇಡ್ ಕಮಾಂಡರ್ ನನಗೆ ಕಿರುಕುಳ ನೀಡಿದ್ದಾರೆ. ನನ್ನ ಸ್ಥಾನದಲ್ಲಿ ಬೇರೆ ಯಾವುದೇ ಯೋಧ ಇದ್ದರೂ ಕೂಡ ಇಷ್ಟೊತ್ತಿಗೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರು ಇಲ್ಲವೇ ಅಧಿಕಾರಿಗಳ ವಿರುದ್ಧ ಏನಾದರೂ ಮಾಡುತ್ತಿದ್ದರು. ಆದರೆ ನಾನು ಆ ರೀತಿ ಮಾಡಲಿಲ್ಲ. ನಾನೊಬ್ಬ ಯೋಧ. ನನ್ನ ಸಮವಸ್ತ್ರಕ್ಕೆ ಚ್ಯುತಿ ಬರುವಂತ ಯಾವುದೇ ಕಾರ್ಯವನ್ನು ನಾನು ಮಾಡಬಾರದು ಎಂದು ನಾನು ಸುಮ್ಮನಾದೆ.

ನಮ್ಮನ್ನು ಕೋರ್ಟ್ ಮಾರ್ಷಲ್ ಮಾಡಲಾಗುವುದು ಎಂದು ನಮ್ಮ ಅಧಿಕಾರಿಗಳು ಹೇಳುತ್ತಿದ್ದಾರೆ. ನಾನು ನಮ್ಮ ಸೇವೆಯ ಮಾಹಿತಿಯನ್ನು ಪತ್ರದಲ್ಲಿ ಬಹಿರಂಗ ಪಡಿಸಿಲ್ಲ. ಹೀಗಿರುವಾಗ ಅದು ರಾಷ್ಟ್ರದ್ರೋಹ ಹೇಗಾಗುತ್ತದೆ?. ಇದೇ ನನ್ನ ಕೊನೆಯ ಪತ್ರ. ಇಲ್ಲಿನ ಯೋಧರು ನಾಯಿಯನ್ನು ಹೊರಗೆ ವಿಹಾರಕ್ಕೆಂದು ಕರೆದುಕೊಂಡುಹೋಗುತ್ತಾರೆ. ಮಕ್ಕಳನ್ನು ನೋಡಿಕೊಳ್ಳುವ ಕೆಲಸವನ್ನೂ ಮಾಡುತ್ತಾರೆ ಎಂದು ಪ್ರತಾಪ್ ಅವರು ಸೇನೆಯ ಹಿರಿಯ ಅಧಿಕಾರಿಗಳು ನೀಡುತ್ತಿರುವ ದೌರ್ಜನ್ಯಗಳ ಬಗ್ಗೆ ಮಾತನಾಡಿದ್ದಾರೆ.

ಯಗ್ಯ ಪ್ರತಾಪ್ ಅವರ ವಿಡಿಯೊ ಸುದ್ದಿಯಾಗುತ್ತಿದ್ದಂತೆ, ಯೋಧರು ತಮ್ಮ ಕಷ್ಟಗಳನ್ನು, ಸಮಸ್ಯೆಗಳನ್ನು ಸಾಮಾಜಿಕ ತಾಣಗಳಲ್ಲಿ ಹೇಳಿಕೊಳ್ಳುವ ಬದಲು ನಮ್ಮಲ್ಲಿ ಹೇಳಿಕೊಳ್ಳಬೇಕು. ಇದು ಸರಿಯಾದ ಕ್ರಮ ಎಂದು ಸೇನೆ ಪ್ರತಿಕ್ರಿಯಿಸಿದೆ.

ಕೆಲವು ದಿನಗಳ ಹಿಂದೆಯಷ್ಟೇ ಬಿಎಸ್‍ಎಫ್ ಯೋಧ ತೇಜ್ ಪ್ರತಾಪ್ ಯಾದವ್ ಸೇನಾ ಶಿಬಿರಗಳಲ್ಲಿ ನೀಡುವ ಕಳಪೆ ಆಹಾರದ ಬಗ್ಗೆ ಫೇಸ್‍ಬುಕ್‍ನಲ್ಲಿ ವಿಡಿಯೊ ಅಪ್‍ಲೋಡ್ ಮಾಡುವ ಮೂಲಕ ಸುದ್ದಿಯಾಗಿದ್ದರು.

ನಿನ್ನೆಯಷ್ಟೇ ಕೇಂದ್ರೀಯ ಮೀಸಲು ಪೊಲೀಸ್‌ ಪಡೆ (ಸಿಆರ್‌ಪಿಎಫ್‌) ಯೋಧ ಜೀತ್‌ ಸಿಂಗ್ ನಮಗೆ ನೀಡುತ್ತಿರುವ ಸವಲತ್ತು ಸಾಲದು, ಅದನ್ನು ಹೆಚ್ಚಿಸಿ ಎಂದು ಪ್ರಧಾನಿಯನ್ನು ಕೋರಿ ವಿಡಿಯೊ ಪ್ರಕಟಿಸಿದ್ದರು.

Comments are closed.