ರಾಷ್ಟ್ರೀಯ

ಅಖ್ನೂರ್‍‍ನಲ್ಲಿ ಇಂಡಿಯಾದ 30 ಸೈನಿಕರ ಹತ್ಯೆ: ಹಫೀಜ್ ಸಯೀದ್

Pinterest LinkedIn Tumblr


ನವದೆಹಲಿ: ಜಮ್ಮು ಕಾಶ್ಮೀರದ ಅಖ್ನೂರ್‍ ನಲ್ಲಿ ಸೋಮವಾರ ನಡೆದ ಉಗ್ರ ದಾಳಿಯಲ್ಲಿ ನಾವು 30 ಯೋಧರನ್ನು ಹತ್ಯೆ ಮಾಡಿದ್ದೇವೆ ಎಂದು ಜಮಾತ್-ಉದ್-ದವಾ (ಜೆಯುಡಿ) ಮುಖ್ಯಸ್ಥ ಹಫೀಜ್ ಸಯೀದ್ ಹೇಳಿದ್ದಾರೆ.

ಪಾಕ್ ಆಕ್ರಮಿತ ಕಾಶ್ಮೀರದ ಮುಜಾಫರ್‍‍ಬಾದ್‍ನಲ್ಲಿ ಬುಧವಾರ ತಮ್ಮ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಸಯೀದ್, ಭಾರತೀಯ ಯೋಧರನ್ನು ತಮ್ಮ ಸಂಘಟನೆ ಹತ್ಯೆಗೈದಿರುವುದಾಗಿ ವಾದಿಸಿದ್ದಾರೆ.

ತಮ್ಮ ಸಂಘಟನೆ ಸೇನಾ ಶಿಬಿರದ ಮೇಲೆ ದಾಳಿ ನಡೆಸಿದೆ ಎಂದು ಹಫೀಜ್ ಹೇಳುತ್ತಿದ್ದಾರೆ. ಆದರೆ ಅಖ್ನೂರ್‍ ನಲ್ಲಿ ಉಗ್ರರು ಜನರಲ್ ರಿಸರ್ವ್ ಇಂಜಿನಿಯರ್ ಫೋರ್ಸ್ (ಜಿಆರ್‍ಇಎಫ್) ಶಿಬಿರದ ಮೇಲೆ ದಾಳಿ ನಡೆಸಿದ್ದರು. ಈ ದಾಳಿಯಲ್ಲಿ ಅಲ್ಲಿನ ಕೆಲಸ ಮಾಡುತ್ತಿದ್ದ ಮೂವರು ಕಾರ್ಮಿಕರು ಗುಂಡಿಗೆ ಬಲಿಯಾಗಿದ್ದರು.

ಮೊನ್ನೆ ನಮ್ಮ ಸಂಘಟನೆಯ ನಾಲ್ವರು ಯುವಕರು ಜಮ್ಮುವಿನ ಅಖ್ನೂರ್ ಶಿಬಿರದ ಮೇಲೆ ನುಗ್ಗಿದ್ದಾರೆ. ನಾನೇನೂ ಹಳೆ ಸಂಗತಿಯನ್ನು ಹೇಳುತ್ತಿಲ್ಲ. ಎರಡು ದಿನಗಳ ಹಿಂದೆ ನಡೆದ ಘಟನೆ ಬಗ್ಗೆ ಹೇಳುತ್ತಿದ್ದೇನೆ.

ಶಿಬಿರಗಳಲ್ಲಿರುವ ಯೋಧರ ಮೇಲೆ ದಾಳಿ ನಡೆಸಿದ ನಮ್ಮ ಯುವಕರು ಪುಟ್ಟ ಗಾಯ ಕೂಡ ಆಗದೆ ಸುರಕ್ಷಿತವಾಗಿ ವಾಪಸ್ ಆಗಿದ್ದಾರೆ. ಇದೊಂದು ನಿರ್ದಿಷ್ಟ ದಾಳಿ ಎಂದು ಹೇಳಿದಾಗ ಜನರು ಘೋಷಣೆ ಕೂಗುವುದು ಈ ಧ್ವನಿ ಸುರುಳಿಯಲ್ಲಿ ಕೇಳಿಸುತ್ತದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಸೆಪ್ಟೆಂಬರ್‍‍ನಲ್ಲಿ ಭಾರತೀಯ ಸೇನೆ ಪಾಕ್ ಆಕ್ರಮಿತ ಕಾಶ್ಮೀರದ ಮೇಲೆ ಉಗ್ರ ದಾಳಿ ನಡೆಸಿದೆ ಎಂದು ಹೇಳಿದ್ದು ಸುಳ್ಳು. ಭಾರತ ಈ ರೀತಿ ಹೇಳಿಕೆ ನೀಡಿ ಜಗತ್ತನ್ನು ಮೋಸ ಮಾಡುತ್ತಿದೆ.

ನಿರ್ದಿಷ್ಟ ದಾಳಿ ಏನು ಎಂಬುದನ್ನು ತೋರಿಸಲು ನೀವು ಮುಜಾಹಿದ್ದೀನ್ ಸಂಘಟನೆಗೆ ಅವಕಾಶ ನೀಡಿದ್ದೀರಿ. ಜಮ್ಮುವಿನಲ್ಲಿ ಯಾರೊಬ್ಬರಿಗೂ ಪ್ರವೇಶಿಸಲು ಸಾಧ್ಯವಾಗದೇ ಇರುವ ಪ್ರದೇಶಕ್ಕೆ ನಮ್ಮ ಯುವಕರು ನುಗ್ಗಿದ್ದಾರೆ. ಶಿಬಿರದೊಳಗಿರುವ 10 ಕೋಣೆಗಳಿಗೆ ನುಗ್ಗಿದ ಯುವಕರು 30 ಯೋಧರನ್ನು ಹತ್ಯೆ ಮಾಡಿದ್ದಾರೆ. ನಮ್ಮ ಯುವಕರು ಶಿಬಿರಗಳನ್ನು ಧ್ವಂಸ ಮಾಡಿ ಸುರಕ್ಷಿತವಾಗಿ ಹಿಂತಿರುಗಿದ್ದಾರೆ ಎಂದು ಸಯೀದ್ ಹೇಳಿದ್ದಾರೆ.

ಆದರೆ ಸಯೀದ್ ಅವರ ವಾದದಲ್ಲಿ ಹುರುಳಿಲ್ಲ ಎಂದು ಭಾರತೀಯ ಸೇನೆ ಪ್ರತಿಕ್ರಿಯೆ ನೀಡಿದೆ.

Comments are closed.