ರಾಷ್ಟ್ರೀಯ

ದಿಲ್ಲಿ, ಜಮ್ಮು-ಕಾಶ್ಮೀರಗಳಲ್ಲಿ ದಾಖಲೆ ಚಳಿ

Pinterest LinkedIn Tumblr


ನವದೆಹಲಿ, ಜ.13: ರಾಷ್ಟ್ರ ರಾಜಧಾನಿ ನವದೆಹಲಿ ಹಾಗೂ ಜಮ್ಮು-ಕಾಶ್ಮೀರದಲ್ಲಿ ಕನಿಷ್ಠ ತಾಪಮಾನ ದಾಖಲಾಗಿದ್ದು, ಇಂದು ಬೆಳಗ್ಗೆ ಭಾರಿ ಮಂಜು ಮುಸುಕಿದ ವಾತಾವರಣ ಉಂಟಾಗಿತ್ತು. ದೆಹಲಿಯಲ್ಲಿ 4.3 ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ ದಾಖಲಾದರೆ, ಜಮ್ಮುವಿನಲ್ಲಿ 3.1 ಡಿಗ್ಸಿ ಸೆಲ್ಸಿಯಸ್ ದಾಖಲಾಗಿದೆ. ಇದು ಋತುಮಾನದ ಸರಾಸರಿ ತಾಪಮಾನಕ್ಕಿಂತ ಅತ್ಯಂತ ಕಡಿಮೆ ದಾಖಲೆಯ ತಾಪಮಾನವಾಗಿದೆ.

ಬೆಳ್ಳಂಬೆಳಗ್ಗೆ ಮಂಜು ಸುರಿಯುತ್ತಿದ್ದುದರಿಂದ ರೈಲು, ವಿಮಾನ ಹಾಗೂ ವಾಹನ ಸಂಚಾರದಲ್ಲಿ ವ್ಯತ್ಯಯವಾಗಿದೆ. ಭಾರಿ ಪ್ರಮಾಣದಲ್ಲಿ ಮಂಜು ಮುಸುಕಿದ ಪರಿಣಾಮ ಸಾರ್ವಜನಿಕರು ಮನೆಯಿಂದ ಹೊರಗೆ ಬರಲಾರದೆ ಸೂರ್ಯನಿಗಾಗಿ ಕಾಯುತ್ತಿದ್ದ ದೃಶ್ಯ ಅಲ್ಲಲ್ಲಿ ಕಂಡುಬಂತು.

ಸುಮಾರು 8 ಗಂಟೆಯ ವೇಳೆಗೆ ದೆಹಲಿಯಲ್ಲಿ ಶುಭ್ರ ಆಕಾಶ ಇತ್ತು ಎಂದು ಭಾರತ ಹವಾಮಾನ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ದಿನದ ಗರಿಷ್ಠ ತಾಪಮಾನ 18 ಡಿಗ್ರಿ ಸೆಲ್ಸಿಯಸ್‍ನಷ್ಟಾಗುವ ಸಂಭವ ಹೆಚ್ಚು. ವಾತಾವರಣ ಆಧ್ರ್ರತೆ ಬೆಳಗ್ಗೆ 8.30ರ ಸುಮಾರಿಗೆ 97 ಶೇಕಡಾದಷ್ಟು ದಾಖಲಾಗಿತ್ತು. ನಿನ್ನೆ ಕೂಡ ಗರಿಷ್ಠ ತಾಪಮಾನ 18.2 ಡಿಗ್ರಿಯಾಗಿತ್ತು. ಕನಿಷ್ಠ ತಾಪಮಾನ 3.4 ಡಿಗ್ರಿ ದಾಖಲಾಗಿತ್ತು.

ಮಂಜು ಮುಸುಕಿದ ವಾತಾವರಣ ಇದ್ದ ಹಿನ್ನೆಲೆಯಲ್ಲಿ ದೆಹಲಿಗೆ 25 ರೈಲುಗಲು ತಡವಾಗಿ ತಲುಪಿವೆ. 8 ರೈಲುಗಳ ವೇಳಾಪಟ್ಟಿಯನ್ನು ಮರು ನಿಗದಿ ಮಾಡಲಾಗಿದೆ ಮತ್ತು ಎರಡು ರೈಲುಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.

ಜಮ್ಮು ಮತ್ತು ಕಾಶ್ಮೀರದಲ್ಲೂ ಪರಿಸ್ಥಿತಿ ಇದೇ ರೀತಿ ಇತ್ತು. ಜಮ್ಮು ಮತ್ತು ಕಾಶ್ಮೀರದಲ್ಲಿ ಕನಿಷ್ಠ ತಾಪಮಾನ ಕ್ರಮವಾಗಿ 6.3 ಮತ್ತು 3.1 ಸೆಲ್ಸಿಯಸ್ ದಾಖಲಾಗಿವೆ. ಇದು ದಾಖಲೆಯ ತಾಪಮಾನ ಎಂದು ಗುರುತಿಸಲಾಗಿದೆ. ಇದರಿಂದ ತೀವ್ರ ಚಳಿ ಉಂಟಾಗಿ, ಅಲ್ಲಿನ ಜನರು ತತ್ತರಿಸಿಹೋಗಿದ್ದಾರೆ. ಇದು ಇನ್ನಷ್ಟು ಕಡಿಮೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಜನವರಿ 15 ಮತ್ತು 16ರಂದು ಒಂದೆರಡು ಹನಿ ಮಳೆಯಾಗುವ ಸಾಧ್ಯತೆ ಇದೆ. ಪಹಲ್ಗಾಮ್‍ನಲ್ಲಿ ಮೈನಸ್ 12.4 ಡಿಗ್ರಿ ಸೆಲ್ಸಿಯಸ್, ಗುಲ್‍ಮಾರ್ಗ್‍ನಲ್ಲಿ ಮೈನಸ್ 13.6 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಲಡಾಕ್ ಪ್ರಾಂತ್ಯದಲ್ಲಿ ಮೈನಸ್ 14 ಡಿಗ್ರಿ ಹಾಗೂ ವೈಷ್ಣೋವಿ ದೇವಿ ಶಿಬಿರದ ಬಳಿ 3.9 ಡಿಗ್ರಿ ಸೆಲ್ಸಿಯಸ್ ದಾಖಲಾಗಿವೆ.

Comments are closed.