ರಾಷ್ಟ್ರೀಯ

ಯೋಧರು ಸಮಸ್ಯೆಗಳನ್ನು ಅಂತರಿಕವಾಗಿ ಬಗೆಹರಿಸಿಕೊಳ್ಳಬೇಕು, ಸಾಮಾಜಿಕ ಜಾಲತಾಣಗಳಲ್ಲಿ ಬೇಡ: ರಾವತ್‌

Pinterest LinkedIn Tumblr
..

ನವದೆಹಲಿ: ‘ಸೇನೆ ಒಂದು ತಂಡ ಇದ್ದಂತೆ. ಯೋಧರು ತಮ್ಮ ಸಮಸ್ಯೆಗಳನ್ನು ಆಂತರಿಕವಾಗಿ ಬಗೆಹರಿಸಿಕೊಳ್ಳಬೇಕೆ ಹೊರತು ಸಾಮಾಜಿಕ ಜಾಲತಾಣಗಳನ್ನು ದೂರು ಪೆಟ್ಟಿಗೆಗಳ ರೀತಿ ಬಳಸುವುದು ಸರಿಯಲ್ಲ’ ಎಂದು ಸೇನಾ ಮುಖ್ಯಸ್ಥ ಜನರಲ್‌ ಬಿಪಿನ್‌ ರಾವತ್‌ ಹೇಳಿದ್ದಾರೆ.

ಬಿಎಸ್‌ಎಫ್‌ ಯೋಧ ತೇಜ್‌ ಬಹದ್ದೂರ್‌ ಯಾದವ್‌ ಅವರ ವಿಡಿಯೊ ವೈರಲ್‌ ಆದ ಬಳಿಕ ಅರೆಸೇನಾ ಪಡೆಯ ಯೋಧರು ತಮ್ಮ ಸಮಸ್ಯೆಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅಳಲು ತೋಡಿಕೊಳ್ಳುತ್ತಿರುವ ಬಗ್ಗೆ ಪ್ರತಿಕ್ರಿಯಿಸಿರುವ ರಾವತ್‌, ‘ಯೋಧರು ತಮ್ಮ ಸಮಸ್ಯೆಗಳನ್ನು ನೇರವಾಗಿ ನನ್ನ ಗಮನಕ್ಕೆ ತರಬಹುದು. ಅವರ ಸಮಸ್ಯಗಳೇನೇ ಇದ್ದರೂ ಅದನ್ನು ಪರಿಸಲು ನಾನು ಕ್ರಮ ಕೈಗೊಳ್ಳುತ್ತೇನೆ. ಅಲ್ಲದೆ ಅವರ ಹೆಸರನ್ನು ಬಹಿರಂಗ ಪಡಿಸುವುದಿಲ್ಲ’ ಎಂದಿದ್ದಾರೆ.

ಶುಕ್ರವಾರ ನಡೆದ ತಮ್ಮ ಮೊದಲ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಾವತ್‌, ‘ನಾವೆಲ್ಲರೂ ಒಂದೇ ತಂಡ ಇದ್ದಂತೆ. ದೇಶ ಭದ್ರತೆಗೆ ಹಾಗೂ ಶಾಂತಿ ಕಾಪಾಡಲು ನಾವೆಲ್ಲ ಒಟ್ಟಾಗಿ ಕೆಲಸ ಮಾಡಬೇಕು’ ಎಂದು ಹೇಳಿದ್ದಾರೆ.

‘ಸಮಸ್ಯೆಗಳನ್ನು ಹೇಳಿಕೊಳ್ಳಲು ಯೋಧರು ದೂರು ಪೆಟ್ಟಿಗೆಗಳನ್ನು ಬಳಸಿಕೊಳ್ಳಬೇಕು. ಅದರ ಬದಲಿಗೆ ಸಾಮಾಜಿಕ ಜಾಲತಾಣಗಳನ್ನು ದೂರು ಪೆಟ್ಟಿಗೆಗಳಂತೆ ಬಳಸುವುದು ಬೇಡ’ ಎಂದು ರಾವತ್‌ ತಿಳಿಸಿದ್ದಾರೆ.

‘ತಮ್ಮ ಹಿರಿಯ ಅಧಿಕಾರಿಗಳು ತಮ್ಮನ್ನು ಗುಲಾಮರಂತೆ ನಡೆಸಿಕೊಳ್ಳುತ್ತಿದ್ದಾರೆಂದು ಕೆಲ ಯೋಧರು ಆರೋಪ ಮಾಡಿದ್ದಾರೆ. ಈ ಬಗ್ಗೆ ಪ್ರಧಾನಮಂತ್ರಿಯವರಿಗೆ ಪತ್ರ ಬರೆಯುತ್ತೇನೆ’ ಎಂದು ರಾವತ್‌ ಹೇಳಿದ್ದಾರೆ.

Comments are closed.