ರಾಷ್ಟ್ರೀಯ

ಸಾಮಾಜಿಕ ತಾಣದಲ್ಲಿ ಯೋಧರು ಫೋಟೊ,ವಿಡಿಯೊ ಹಾಕುವುದಕ್ಕೆ ನಿಷೇಧವಿದೆ!

Pinterest LinkedIn Tumblr


ನವದೆಹಲಿ: ಬಿಎಸ್‍‌ಎಫ್ ಯೋಧರಿಗೆ ಕಳಪೆ ಆಹಾರ ನೀಡಲಾಗುತ್ತಿದೆ ಎಂದು ಯೋಧ ತೇಜ್ ಬಹದ್ದೂರ್ ಯಾದವ್ ಫೇಸ್‍‌ಬುಕ್‍ನಲ್ಲಿ ವಿಡಿಯೊ ಪೋಸ್ಟ್ ಮಾಡುವುದಕ್ಕಿಂತ ಒಂದು ವಾರದ ಹಿಂದೆ ಬಿಎಸ್‍ಎಫ್ ಯೋಧರು ಸಾಮಾಜಿಕ ತಾಣಗಳಲ್ಲಿ ತಮ್ಮ ಸೇವೆಯ ಬಗ್ಗೆಯಾಗಲೀ ಇತರ ಕಾರ್ಯಗಳ ಬಗ್ಗೆಯಾಗಲೀ ಮಾಹಿತಿ ಹಂಚಿಕೊಳ್ಳಬಾರದು ಎಂದು ಕೇಂದ್ರ ಸರ್ಕಾರ ಆದೇಶಿಸಿತ್ತು.

ಬಿಎಸ್‍ಎಫ್, ಸಿಎಪಿಎಫ್‍, ಸಿಆರ್‍ಪಿಎಫ್ ಮತ್ತು ಅಸ್ಸಾಂ ರೈಫಲ್ಸ್ ಸಿಬ್ಬಂದಿಗಳು ಸಾಮಾಜಿಕ ತಾಣಗಳಲ್ಲಿ ಯಾವುದೇ ವಿಷಯಗಳನ್ನು ಹಂಚಿಕೊಳ್ಳಬಾರದು ಎಂದು ಕೇಂದ್ರ ಗೃಹ ಸಚಿವಾಲಯ ಸಂಬಂಧಪಟ್ಟ ಇಲಾಖೆಗಳಿಗೆ ಸುತ್ತೋಲೆ ನೀಡಿತ್ತು. ಹಾಗಾಗಿ ನಿಯಮ ಉಲ್ಲಂಘಿಸಿದ ತೇಜ್ ಬಹದ್ದೂರ್ ಯಾದವ್ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಬಲ್ಲಮೂಲಗಳು ಹೇಳಿವೆ.

ಅಂತಾರಾಷ್ಟ್ರೀಯ ಗಡಿ ಪ್ರದೇಶ, ನುಸುಳುವಿಕೆ, ಉಗ್ರ ದಾಳಿ ಸಂಭವಿಸುವ ಮತ್ತು ಮಾವೋ ಪೀಡಿತ ಪ್ರದೇಶಗಳು ಸೇರಿದಂತೆ ಸೂಕ್ಷ್ಮ ಪ್ರದೇಶಗಳಲ್ಲಿ ಕೇಂದ್ರ ಸಶಸ್ತ್ರ ಪೊಲೀಸ್ ಪಡೆ (ಸಿಎಪಿಎಫ್)ಯನ್ನು ನಿಯೋಜಿಸಲಾಗುತ್ತದೆ. ಹೀಗಿರುವಾಗ ಯೋಧರು ಅನುಮತಿ ಇಲ್ಲದೆಯೇ ಫೋಟೊ ಅಥವಾ ವಿಡಿಯೊ ಶೇರ್ ಮಾಡಿದರೆ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಈ ರೀತಿ ಮಾಹಿತಿಗಳನ್ನು ಸಾಮಾಜಿಕ ತಾಣಗಳಲ್ಲಿ ಹಂಚಿಕೊಳ್ಳುವುದು ರಾಷ್ಟ್ರೀಯ ಸೈಬರ್ ಭದ್ರತಾ ನೀತಿಯ ಉಲ್ಲಂಘನೆಯಾಗಿದೆ.

ಸಾಮಾಜಿಕ ತಾಣಗಳು ಅವಕಾಶಗಳನ್ನು ಸೃಷ್ಟಿ ಮಾಡುವುದರ ಜತೆಗೇ ಸಮಸ್ಯೆಗಳನ್ನೂ ಹುಟ್ಟುಹಾಕುತ್ತವೆ ಎಂದು ಸಾಮಾಜಿಕ ತಾಣಗಳಲ್ಲಿ ಮಾಹಿತಿ ಅಪ್‍ಲೋಡ್ ಮಾಡುವ ಬಗ್ಗೆ ಯೋಧರಿಗೆ ನೀಡಿರುವ ನಿಯಮಾವಳಿಯಲ್ಲಿ ಉಲ್ಲೇಖ ಮಾಡಲಾಗಿದೆ.

ಭದ್ರತಾ ಸಿಬ್ಬಂದಿಗಳು ತಮ್ಮ ಕಾರ್ಯಾಚರಣೆಯ ಬಗ್ಗೆಯಾಗಲೀ ಇನ್ನಿತರ ಸೂಕ್ಷ್ಮ ವಿಷಯಗಳ ಬಗ್ಗೆಯಾಗಲೀ ಕ್ಯಾಮೆರಾ ಅಥವಾ ಮೊಬೈಲ್ ಫೋನ್‍ನಲ್ಲಿ ಫೋಟೊ ಸೆರೆ ಹಿಡಿದು, ಸಾಮಾಜಿಕ ತಾಣಗಳಲ್ಲಿ ಅಪ್‍ಲೋಡ್ ಮಾಡಬಾರದು ಎಂದು ಗೃಹ ಸಚಿವಾಲಯ ತಾಕೀತು ನೀಡಿದೆ.ಈ ನಿಯಮವನ್ನು ಉಲ್ಲಂಘಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವಾಲಯ ಎಚ್ಚರಿಕೆಯನ್ನೂ ನೀಡಿದೆ.

Comments are closed.