ರಾಷ್ಟ್ರೀಯ

ಮಣಿಪುರದ ವಿದ್ಯಾರ್ಥಿಗಳಿಗೆ ತಾಜ್ ಮಹಲ್ ಪ್ರವೇಶ ನಿರಾಕರಣೆ

Pinterest LinkedIn Tumblr


ಆಗ್ರಾ: ಶೈಕ್ಷಣಿಕ ಪ್ರವಾಸದ ಅಂಗವಾಗಿ ತಾಜ್ ಮಹಲ್ ವೀಕ್ಷಣೆ ಮಾಡಲು ಹೋದ ಮಣಿಪುರದ ವಿದ್ಯಾರ್ಥಿಗಳಿಗೆ ತಾಜ್ ಮಹಲ್‍ನ ಒಳಗೆ ಹೋಗಲು ಪ್ರವೇಶ ನಿರಾಕರಿಸಿದ ಘಟನೆ ವರದಿಯಾಗಿದೆ.

ಭಾನುವಾರ ಸಂಜೆ 3.30ಕ್ಕೆ ಮಣಿಪುರದ ವಿದ್ಯಾರ್ಥಿಗಳ ಗುಂಪೊಂದು ತಾಜ್ ಮಹಲ್ ವೀಕ್ಷಣೆಗಾಗಿ ಹೋಗಿತ್ತು, ಆದರೆ ನೋಡಲು ವಿದೇಶಿಯರಂತೆ ಕಾಣುತ್ತಿದ್ದಾರೆ ಎಂಬ ಕಾರಣ ನೀಡಿ ಸಿಐಎಸ್ಎಫ್ ಸಿಬ್ಬಂದಿಗಳು ತಡೆಯೊಡ್ಡಿದ್ದರು.

ಇಂಫಾಲ್‍ನ ಸೆಂಟ್ರಲ್ ಅಗ್ರಿಕಲ್ಚರಲ್ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳಿಗೆ ಈ ರೀತಿ ಪ್ರವೇಶ ನಿರಾಕರಿಸಿ, ಪೌರತ್ವದ ಬಗ್ಗೆ ಗುರುತುಚೀಟಿ ತೋರಿಸುವಂತೆ ಹೇಳಲಾಗಿದೆ.

ತಾಜ್ ಮಹಲ್‍ ವೀಕ್ಷಣೆಗೆ ವಿದೇಶಿಯರಿಗೆ ₹1000 ಟಿಕೆಟ್ ದರವಿದ್ದು, ಭಾರತೀಯರಿಗೆ ಟಿಕೆಟ್ ದರ ₹ 40 ಆಗಿದೆ.

ನಾವು ವಿದ್ಯಾರ್ಥಿಗಳು ತಾಜ್ ಮಹಲ್‍ನ ಪ್ರವೇಶ ದ್ವಾರದ ಬಳಿ ಹೋದಾಗ, ನಾವು ವಿದೇಶಿಯರು ಭಾರತೀಯರೊಂದಿಗೆ ಒಳ ನುಗ್ಗುತ್ತಿದ್ದೇವೆ ಎಂದು ಅಲ್ಲಿನ ಕಾವಲುಗಾರರು ನಮ್ಮನ್ನು ತಡೆದಿದ್ದಾರೆ. ಪೌರತ್ವ ಸಾಬೀತು ಪಡಿಸಲು ಆಧಾರ್ ಕಾರ್ಡ್ ತೋರಿಸುವಂತೆ ಹೇಳಿದ್ದಾರೆ.

ಆಧಾರ್ ಕಾರ್ಡ್ ತೋರಿಸಿದವರನ್ನು ಮಾತ್ರ ಮೊದಲು ಒಳಗೆ ಬಿಡಲಾಯಿತು. ಆನಂತರ ಪ್ರವಾಸೋದ್ಯಮ ಇಲಾಖೆಯ ಪೊಲೀಸರು ಮಧ್ಯಪ್ರವೇಶಿಸಿ ಇನ್ನುಳಿದ ವಿದ್ಯಾರ್ಥಿಗಳನ್ನು ಒಳಗೆ ಬಿಟ್ಟಿದ್ದಾರೆ ಎಂದು ವಿದ್ಯಾರ್ಥಿಗಳು ಹೇಳಿದ್ದಾರೆ.

ತನಿಖೆಗೆ ಆದೇಶ
ಮಣಿಪುರದ ವಿದ್ಯಾರ್ಥಿಗಳಿಗೆ ತಾಜ್ ಮಹಲ್ ಪ್ರವೇಶ ನಿರಾಕರಿಸಿದ ಪ್ರಕರಣದ ಬಗ್ಗೆ ತನಿಖೆ ನಡೆಸುವಂತೆ ಭಾರತ ಪುರಾತತ್ವ ಸರ್ವೇಕ್ಷಣ ಇಲಾಖೆ ಆದೇಶಿಸಿದೆ.

ಅಲ್ಲಿರುವ ಕಾವಲು ಸಿಬ್ಬಂದಿ ವಿದ್ಯಾರ್ಥಿಗಳ ಜತೆ ಅನುಚಿತವಾಗಿ ನಡೆದುಕೊಂಡಿದ್ದಾರೆ ಎಂಬ ದೂರು ಲಭಿಸಿದೆ, ಈ ಬಗ್ಗೆ ತನಿಖೆ ನಡೆಸಲು ಮುಖ್ಯದ್ವಾರದಲ್ಲಿದ ಸಿಸಿಟಿವಿ ದ್ಯಶ್ಯಾವಳಿಗಳನ್ನು ನೀಡುವಂತೆ ಸಂಬಂಧಪಟ್ಟವರಿಗೆ ಆದೇಶಿಸಲಾಗಿದೆ ಎಂದು ಭಾರತ ಪುರಾತತ್ವ ಸರ್ವೇಕ್ಷಣ ಇಲಾಖೆ ಹೇಳಿದೆ.

Comments are closed.