ರಾಷ್ಟ್ರೀಯ

ಕೋಟ್ಯಂತರ ರು.ಕಪ್ಪು ಹಣ ಕಚೇರಿಯಲ್ಲಿ ಅಡಗಿಸಿಟ್ಟಿದ್ದ ದೆಹಲಿ ವಕೀಲ ರೋಹಿತ್ ಟಂಡನ್ ಬಂಧನ

Pinterest LinkedIn Tumblr

rohit-tandan

ನವದೆಹಲಿ: ನೋಟು ನಿಷೇಧ ಬೆನ್ನಲ್ಲೇ ತಮ್ಮ ಅಪಾರ ಪ್ರಮಾಣದ ಕಪ್ಪುಹಣವನ್ನು ಕಚೇರಿಯಲ್ಲಿ ಅಡಗಿಸಿಟ್ಟಿದ್ದ ದೆಹಲಿ ವಕೀಲ ರೋಹಿತ್ ಟಂಡನ್ ಅವರನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಗುರುವಾರ ವಶಕ್ಕೆ ಪಡೆದಿದ್ದಾರೆ.

ಕಳೆದ ಅಕ್ಟೋಬರ್ ನಲ್ಲಿ ಸುಮಾರು 70 ಕೋಟಿ ರು.ಗಳನ್ನು ಹವಾಲ ದಂಧೆ ಮೂಲಕ ಬಿಳಿಯಾಗಿಸಿಕೊಳ್ಳಲು ಯತ್ನಿಸಿದ್ದ ಆರೋಪ ಎದುರಿಸುತ್ತಿದ್ದ ವಕೀಲ ರೋಹತ್ ಟಂಡನ್ ಅವರನ್ನು ಜಾರಿ ನಿರ್ದೇಶನಲಯದ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಅಂದು ಅಧಿಕಾರಿಗಳ ದಾಳಿ ಬಳಿಕ ವಕೀಲ ರೋಹಿತ್ ಟಂಡನ್ ತಮ್ಮ ಬಳಿ 125 ಕೋಟಿ ರು. ಇದೆ ಎಂದು ಹೇಳಿಕೊಂಡಿದ್ದರು. ಈ ಹೇಳಿಕೆ ಬಳಿಕ ರೋಹಿತ್ ಟಂಡನ್ ವ್ಯವಹಾರದ ಮೇಲೆ ನಿಗಾವಹಿಸಿದ್ದ ಅಧಿಕಾರಿಗಳು ಮತ್ತೆ ಡಿಸೆಂಬರ್ 10ರಂದು ಕಚೇರಿ ಮೇಲೆ ದಾಳಿ ಮಾಡಿ ಮತ್ತೆ ಸುಮಾರು 14 ಕೋಟಿ ರು.ಗಳನ್ನು ವಶಕ್ಕೆ ಪಡೆದಿದ್ದರು. ಈ ಪೈಕಿ 2 ಕೋಟಿ ಹಣ ಹೊಸ 2000 ರು.ಮುಖಬೆಲೆಯ ನೋಟುಗಳಾಗಿದ್ದವು ಎಂದು ತಿಳಿದುಬಂದಿದೆ.

ಈ ದಾಳಿ ಸಂದರ್ಭದಲ್ಲಿ ರೋಹಿತ್ ಟಂಡನ್ ಕಚೇರಿಯಲ್ಲಿರದಿದ್ದರೂ ಕಚೇರಿ ಮೇಲಿನ ದಾಳಿಯನ್ನು ಸಿಸಿಟಿವಿ ಮೂಲಕ ತಮ್ಮ ಮೊಬೈಲ್ ನಲ್ಲಿ ವೀಕ್ಷಣೆ ಮಾಡಿದ್ದರು ಎಂದು ತಿಳಿದುಬಂದಿದೆ.

ಇನ್ನು ದಾಳಿ ಬಳಿಕ ನಡೆದ ವಿಚಾರಣೆ ವೇಳೆ ವಕೀಲ ರೋಹಿತ್ ಟಂಡನ್ ತಮ್ಮ ಬಳಿ ಸಿಕ್ಕಹಣದ ಪೈಕಿ ಬಹುತೇಕ ಹಣ ತಮ್ಮ ಕಕ್ಷೀದಾರರದ್ದು ಎಂದು ಹೇಳಿಕೊಂಡಿದ್ದಾರೆ. ಕಳೆದ ನಾಲ್ಕು ದಿನಗಳಿಂದ ರೋಹಿತ್ ಟಂಡನ್ ಅವರ ವಿಚಾರಣೆ ನಡೆಯುತ್ತಿದ್ದು ಇಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಅವರನ್ನು ಬಂಧಿಸಿದ್ದಾರೆ. ಈ ವೇಳೆ ಮಾತನಾಡಿರುವ ಅಧಿಕಾರಿಗಳು ರೋಹಿತ್ ಟಂಡನ್ ಅವರನ್ನು ಹೆಚ್ಚಿನ ವಿಚಾರಣೆಗಾಗಿ ವಶಕ್ಕೆ ಪಡೆಯಲಾಗಿದೆ ಎಂದಷ್ಟೇ ಹೇಳಿದರು. ಪ್ರಸ್ತುತ ರೋಹಿತ್ ಟಂಡನ್ ಅವರ ವಿರುದ್ಧ ಹವಾಲಾ ಪ್ರಕರಣದಡಿಯಲ್ಲಿ ದೂರು ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

Comments are closed.